ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಜಿಲ್ಲೆ: ಮುಂದುವರಿದ ಮಳೆ

Last Updated 8 ಆಗಸ್ಟ್ 2019, 17:42 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗುರುವಾರವೂ ಜನಜೀವನ ಅಸ್ತವ್ಯಸ್ತಗೊಂಡಿತು.

ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ನೆರೆಹಾವಳಿ ಉಂಟಾಗಿದ್ದು,ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭದ್ರಾವತಿ ತಾಲ್ಲೂಕಿನ ಎರೇಹಳ್ಳಿಯಲ್ಲಿ ಷಣ್ಮುಖ (35) ಎಂಬ ವ್ಯಕ್ತಿ ಮೀನು ಹಿಡಿಯಲು ಹೋಗಿ ಮೃತಪಟ್ಟಿದ್ದಾರೆ. ಸಾಗರ ತಾಲ್ಲೂಕಿನ ಯಡಜಿಗಳಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿಯ ಮೂರುಕಟ್ಟೆಯ ಹಕ್ಕಲುಮನೆ ತಿಮ್ಮನಾಯ್ಕ (70) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಜಾನುವಾರು ಮೇಯಿಸಲು ಹೋದಾಗ ಕಾಲು ಜಾರಿ ಶರಾವತಿ ಹಿನ್ನೀರಿಗೆ ಅವರು ಬಿದ್ದಿದ್ದರು.

ಶಿವಮೊಗ್ಗ ನಗರದ ಅನೇಕ ಬಡಾವಣೆಗಳು ಜಲಾವೃತಗೊಂಡಿದ್ದು, ನಾಲ್ಕು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಭದ್ರಾವತಿ ತಾಲ್ಲೂಕು ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಣಬಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಮಳೆಯಿಂದಾಗಿ ಕುಸಿದುಬಿದ್ದಿದೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ಸಾಗರ ತಾಲ್ಲೂಕಿನ ಹೆನ್ನಿ–ಜಾಡ್ಗಲ್ ರಸ್ತೆ ಭೂ ಕುಸಿತದಿಂದಾಗಿ ಹಾಗೂ ಆನಂದಪುರ–ಶಿಕಾರಿಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.

ಹೊಸನಗರ ತಾಲ್ಲೂಕು ನಾಗೋಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ದುರಸ್ತಿ ಕಾರ್ಯ ಮುಗಿಯುವವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಪರ್ಯಾಯವಾಗಿ ನಗರ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ ಮಾರ್ಗದಲ್ಲಿ ವಾಹನ ಸಂಚಾರ ಮಾಡುವಂತೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಅತಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ 3 ಸಾವು ಸಂಭವಿಸಿದ್ದು, 9 ಜಾನುವಾರು ಸಾವನ್ನಪ್ಪಿವೆ. 201 ಮನೆಗಳು ಭಾಗಶಃ ಹಾನಿಗೀಡಾಗಿವೆ. ಸುಮಾರು 7,748 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಜಮೀನಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT