ಶನಿವಾರ, ಫೆಬ್ರವರಿ 4, 2023
17 °C

ಕಾಡಿನಲ್ಲಿ ಮಾಲೀಕನ ಪತ್ತೆಮಾಡಿದ ಶ್ವಾನ: ನಾಯಿ ಸ್ವಾಮಿ ನಿಷ್ಠೆಗೆ ಗ್ರಾಮಸ್ಥರ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಿಪ್ಪನ್‌ಪೇಟೆ ಸಮೀಪದ ಸೂಡೂರು ಗ್ರಾಮದಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಅವರ ಸಾಕು ನಾಯಿ ಪತ್ತೆ ಹಚ್ಚಿದೆ. ನಾಯಿಯ ಸ್ವಾಮಿ ನಿಷ್ಠೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಸೂಡೂರು ಗ್ರಾಮದ ಶೇಖರಪ್ಪ (50) ಮೂರುದಿನಗಳ ಹಿಂದೆ ಬೆಳಿಗ್ಗೆ 6 ಗಂಟೆಗೆ ಸೌದೆ ತರಲು ಮನೆಯ ಸಮೀಪದ ಕಾಡಿಗೆ ಹೋಗಿದ್ದಾರೆ. ಪ್ರತಿ ಸಾರಿ ಕಾಡಿಗೆ ಹೋದಾಗಲೂ 10 ಗಂಟೆಯ ಒಳಗೆ ಮನೆಗೆ ಹಿಂದಿರುಗುತ್ತಿದ್ದ ಅವರು 11 ಗಂಟೆಯಾದರೂ ಮನೆಗೆ ಬಂದಿರಲಿಲ್ಲ.

ಹೀಗಾಗಿ ಸ್ಥಳೀಯರು ಕಾಡಿಗೆ ಹೋಗಿ ಹುಡುಕಾಡಿದ್ದರು. ಆದರೂ ಶೇಖರಪ್ಪ ಅವರ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಗಾಬರಿಗೊಂಡು ಮಧ್ಯಾಹ್ನದ ವೇಳೆಗೆ ಅವರನ್ನು ಹುಡುಕಲು ಗ್ರಾಮದ 100ಕ್ಕೂ ಹೆಚ್ಚು ಜನರು ಕಾಡಿನೊಳಗೆ ಹೋಗಿದ್ದಾರೆ.
ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ ಕಟ್ಟಿಗೆ ಅರಸುವ ಸ್ಥಳ ಎಲ್ಲವನ್ನೂ ತಡಕಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಶೇಖರಪ್ಪ ಅವರನ್ನು ಹುಡುಕಲು ಗ್ರಾಮಸ್ಥರೊಂದಿಗೆ ಬಂದಿದ್ದ ನಾಯಿ ಗ್ರಾಮದ ಜನರನ್ನು ಬಿಟ್ಟು ಬೇರೆ ದಾರಿ ಹಿಡಿದು ಮುನ್ನುಗ್ಗಿದೆ. ಕೊನೆಗೆ ಸಂಜೆ 4 ಗಂಟೆಯ ಸುಮಾರಿಗೆ ಶೇಖರಪ್ಪ ಅವರನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಗ್ರಾಮಸ್ಥರನ್ನು ಕರೆ ತಂದಿದೆ.

ಮರದ ಕೆಳಗೆ ಪ್ರಜ್ಞೆ ಇಲ್ಲದೆ ಶೇಖರಪ್ಪ ಬಿದ್ದಿದ್ದು, ಅವರನ್ನು ತಕ್ಷಣವೇ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈಗ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಶೇಖರಪ್ಪ ಆಯನೂರಿನ  ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು