ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ನೋಂದಣಿ, ತಿದ್ದುಪಡಿ: ಸಮಸ್ಯೆ ನೂರಾರು

Last Updated 8 ಆಗಸ್ಟ್ 2022, 4:27 IST
ಅಕ್ಷರ ಗಾತ್ರ

ಶಿವಮೊಗ್ಗ: ಆಧಾರ್ ದಾಖಲೆ ಈಗ ಬದುಕಿನ ಅವಿಭಾಜ್ಯ ಅಂಗ. ಜನನ–ಮರಣ ಪ್ರಮಾಣಪತ್ರ ಪಡೆಯಲು ಮೊದಲುಗೊಂಡು ಸರ್ಕಾರಿ ಸವಲತ್ತು, ಶಾಲೆ–ಕಾಲೇಜು ದಾಖಲೆ, ಆಸ್ತಿ ಖರೀದಿ, ಮಾರಾಟ ಹೀಗೆ ಎಲ್ಲೆಡೆಯೂ ಸಲ್ಲುವ ಆಧಾರ್ ಈಗ ನಿತ್ಯ ಬದುಕಿನ ಒಡನಾಡಿ.

ಹೀಗಾಗಿ ಆಧಾರ್ ದಾಖಲೆ ಪಡೆಯಲು, ಅದರಲ್ಲಿನ ಲೋಪಗಳ ತಿದ್ದುಪಡಿ ಮಾಡಿಸಲು ಇಲ್ಲವೇ ವಿಳಾಸ ಬದಲಾಯಿಸಲು ಒಂದಿಲ್ಲೊಂದು ಕಾರಣಕ್ಕೆ ಸಾರ್ವಜನಿಕರು ಆಧಾರ್ ತಿದ್ದುಪಡಿ ಕೇಂದ್ರಗಳಿಗೆ ಎಡತಾಕುವುದು
ಸಾಮಾನ್ಯ. ಆದರೆ, ನೆಟ್‌ವರ್ಕ್ ಸಮಸ್ಯೆ, ಸರ್ವರ್ ಬ್ಯುಸಿ, ಸಿಬ್ಬಂದಿ ರಜೆ ಹೀಗೆ ನಾನಾ ಕಾರಣಕ್ಕೆ ಆಧಾರ್ ಕೇಂದ್ರಗಳಲ್ಲಿ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಕೆಲವು ಕಡೆ ದಾಖಲೆಗಳ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಮಾಡಲಾಗುತ್ತಿದೆ. ಹತ್ತಾರು ಬಾರಿ ಕೇಂದ್ರಕ್ಕೆ ಎಡತಾಕುವಂತೆ ಮಾಡಲಾಗುತ್ತಿದೆ.

ಆಧಾರ್ ಕೇಂದ್ರದವರು ಕೇಳುವ ದಾಖಲೆಯನ್ನು ಶಾಲೆಯವರು ಕೊಡೊಲ್ಲ. ಅವರು ಕೊಟ್ಟ ದಾಖಲೆ ಆಧಾರ್ ಕೇಂದ್ರದವರು ಪರಿಗಣಿಸಲ್ಲ. ಖಾಸಗಿ ಶಾಲೆಗಳ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಪೋಷಕರು ಹೈರಾಣು ಆಗುವಂತಾಗಿದೆ ಎಂಬ ಆರೋಪಗಳು ಸಾರ್ವಜನಿಕರ ವಲಯದಲ್ಲಿ ಇದೆ. ಆ ಬಗ್ಗೆ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಬೆಳಕು ಚೆಲ್ಲಿದೆ.

ಸರ್ವರ್ ಸಮಸ್ಯೆ: ಸೇವಾ ಕೇಂದ್ರದ ಬಳಲಿಕೆ

ಎಂ.ರಾಘವೇಂದ್ರ

ಸಾಗರ: ಸತತವಾಗಿ ಸರ್ವರ್ ಸಮಸ್ಯೆಯಿಂದ ಬಳಲುತ್ತಿರುವುದು ಈ ಭಾಗದ ಆಧಾರ್ ಸೇವಾ ಕೇಂದ್ರದ ಪ್ರಮುಖ ನ್ಯೂನ್ಯತೆ. ಪದೇ ಪದೇ ಸರ್ವರ್ ಕೈಕೊಡುವುದರಿಂದ ಆಧಾರ್ ಕಾರ್ಡ್‌ನಲ್ಲಿನ ಹೆಸರು, ಜನನ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡಿಸಲು ಬರುವ ಸಾರ್ವಜನಿಕರಿಗೆ ಕೇಂದ್ರಗಳಲ್ಲಿ ಸಕಾಲದಲ್ಲಿ ಸೇವೆ ದೊರಕುವುದು ದುಸ್ತರವಾಗಿದೆ.

ಆಧಾರ್ ಕಾರ್ಡ್‌ನಲ್ಲಿನ ಜನನ ದಿನಾಂಕ ತಿದ್ದುಪಡಿ ಮಾಡಿಸಲು ಜನನ ದಿನಾಂಕ ದೃಢೀಕರಣಕ್ಕೆ ಅಗತ್ಯವಿರುವ ಶಾಲಾ ದಾಖಲಾತಿಗಳನ್ನು ಒದಗಿಸಬೇಕು. ಶಾಲಾ ದಾಖಲಾತಿಗಳು ಲಭ್ಯವಿಲ್ಲದೆ ಇದ್ದರೆ ತಿದ್ದುಪಡಿ ಮಾಡುವುದು ಕಷ್ಟಸಾಧ್ಯ.

ವಿಳಾಸ ಬದಲಾವಣೆಗೆ ಮತದಾರರ ಗುರುತಿನ ಚೀಟಿ ದಾಖಲೆ ಒದಗಿಸಬೇಕು. ಮತದಾರರ ಗುರುತಿನ ಚೀಟಿಯಲ್ಲಿ ಇರುವ ಹೆಸರಿಗೂ ಆಧಾರ್ ಕಾರ್ಡ್‌ನಲ್ಲಿರುವ ಹೆಸರಿಗೂ ತಾಳೆಯಾಗದೆ ಇದ್ದರೆ ವಿಳಾಸ ಬದಲಿಸಲು ಸಾಧ್ಯವಾಗುವುದಿಲ್ಲ.

ಹೆಸರಿಗೆ ಸಂಬಂಧಿಸಿದ ತಿದ್ದುಪಡಿ ಮಾಡಬೇಕಾದರೆ ತಿದ್ದುಪಡಿಯಾಗಬೇಕಾದ ಹೆಸರು ಬ್ಯಾಂಕ್ ಪಾಸ್ ಬುಕ್ ಅಥವಾ ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ
ಚೀಟಿ ಇರಬೇಕು.

ತಿದ್ದುಪಡಿಯಾಗಬೇಕಾದ ಅಂಶದ ಕುರಿತು ನಿಗದಿತ ನಮೂನೆಯ ಫಾರಂ ಪಡೆದು ಗೆಜೆಟೆಡ್ ಅಧಿಕಾರಿ ಸಹಿ ಪಡೆದು ಅಗತ್ಯ ದಾಖಲೆಗಳನ್ನು ನೀಡಿ ಪೂರೈಸುವ ಹೊತ್ತಿಗೆ ಸಾರ್ವಜನಿಕರು ಸಾಕಷ್ಟು ಪ್ರಯಾಸ ಪಡಬೇಕು. ಹಿರಿಯ ನಾಗರಿಕರಿಗೆ ಹೆಬ್ಬೆಟ್ಟಿನ ಗುರುತು ತೆಗೆದುಕೊಳ್ಳುವುದು ಕೆಲವೊಮ್ಮೆ ಕಷ್ಟ.

ಆಧಾರ್ ಕಾರ್ಡ್‌ನಲ್ಲಿನ ಹೆಸರು, ಜನನ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ತಿದ್ದುಪಡಿಗೆ ಇರುವ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ನೆಟ್‌ವರ್ಕ್‌ ಸಮಸ್ಯೆ: ತಪ್ಪದ ಅಲೆದಾಟ

ರಾಘವೇಂದ್ರ ಟಿ.

ಸೊರಬ: ಮಕ್ಕಳ ಶಾಲಾ ಪ್ರವೇಶಾತಿಗೆ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅವಶ್ಯಕ. ಆದರೆ, ಸಾರ್ವಜನಿಕರು ಆಧಾರ್ ಕಾರ್ಡ್ ಪಡೆಯಲು ಪ್ರತಿನಿತ್ಯ ತಾಲ್ಲೂಕು ಕೇಂದ್ರಕ್ಕೆ ಅಲೆದಾಡುವಂತಾಗಿದೆ.

ತಾಲ್ಲೂಕಿನ ಪ್ರತಿ ಹೋಬಳಿ ವ್ಯಾಪ್ತಿಯ ನಾಡ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶವಿದ್ದರೂ ಅಲ್ಲಿ ನೆಟ್‍ವರ್ಕ್ ಸಮಸ್ಯೆ ಎದುರಾಗಿದೆ. ಹೀಗಾಗಿ ಗ್ರಾಮೀಣರು ತಾಲ್ಲೂಕು ಕಚೇರಿಗೆ ಬರುತ್ತಾರೆ. ಇಲ್ಲಿಯೂ ಒಂದೇ ಕೇಂದ್ರ ಕೆಲಸ ನಿರ್ವಹಿಸುವುದರಿಂದ ನೂರಾರು ಜನರಿಗೆ ನೋಂದಣಿ ಮಾಡುವುದು ಕಷ್ಟವಾಗುತ್ತಿದೆ. ಕೆಲಸ ಬಿಟ್ಟು ದಿನವಿಡೀ ಕಾದು ಕುಳಿತು ಆಧಾರ್ ಮಾಡಿಸುವುದೇ ಒಂದು ಕೆಲಸವಾಗಿದೆ.

‘ಹೋಬಳಿ ವ್ಯಾಪ್ತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ಸರಿಪಡಿಸಿದರೆ ಅಲ್ಲಿನ ಜನರು ಆಧಾರ್ ಕಾರ್ಡ್ ಪಡೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ನಾರಾಯಣ ಮೂರ್ತಿ ಹೊಸಬಾಳೆ.

ಅಂಚೆ ಕಚೇರಿಯಲ್ಲಿಯೂ ಆಧಾರ್ ಕಾರ್ಡ್ ನೋಂದಣಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಅಲ್ಲಿಯೂ ಬಹಳ ದಿನಗಳಿಂದ ನೆಟ್‍ವರ್ಕ್ ಸಮಸ್ಯೆ ಇದೆ. ಹೀಗಾಗಿ ತಾತ್ಕಾಲಿಕವಾಗಿ ಆಧಾರ್ ಕಾರ್ಡ್ ನೋಂದಣಿ ಸ್ಥಗಿತಗೊಳಿಸಲಾಗಿದೆ. ನಾಡ ಕಚೇರಿಯಲ್ಲೂ ಇದೇ ಸಮಸ್ಯೆ ಇದೆ ಎಂದು ಭಾರತಿ ಅಸಹಾಯಕತೆ ತೋಡಿಕೊಂಡರು. ಪಟ್ಟಣದ ಗ್ಲೋಬಲ್ ಸೈಬರ್ ಕೇಂದ್ರದಲ್ಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಆಧಾರ್ ಕೇಂದ್ರ: ಜನದಟ್ಟಣೆ ಸಾಮಾನ್ಯ

ಭದ್ರಾವತಿ: ತಾಲ್ಲೂಕಿನ ಆಧಾರ್ ಸೇವಾ ಕೇಂದ್ರದಲ್ಲಿ ಜನದಟ್ಟಣೆ ಸಾಮಾನ್ಯ. ಹಲವು ತಾಂತ್ರಿಕ ಕಾರಣಗಳಿಂದ ಸಮಸ್ಯೆ ಮಾಮೂಲು.

ತಿದ್ದುಪಡಿ, ವಿಳಾಸ ಬದಲಾವಣೆ ಅಂತಹ ಸಮಸ್ಯೆಗೆ ತಿದ್ದುಪಡಿ ಮಾಡಲು ಐದಾರು ಖಾಸಗಿ ಕೇಂದ್ರಗಳು ಕೆಲಸ ಮಾಡುತ್ತಿವೆ ಎನ್ನುತ್ತಾರೆ ಸಾಮಾಜಿಕ ಭದ್ರತೆ ಸೇವೆಯ ವಿವರ ನೀಡುವ ಭೂತನಗುಡಿ ಮೋಹನ್.

‘ಗ್ರಾಮೀಣ ಭಾಗದಲ್ಲಿ ಒಂದೆರಡು ಕೇಂದ್ರಗಳು ನಡೆಯುತ್ತಿವೆ. ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಜನದಟ್ಟಣೆ ಕಾರಣ ಒಂದೆರಡು ಕೇಂದ್ರದ ಬಳಿ ಸಮಸ್ಯೆಯಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಿರೀಶ್.

‘ಸೇವೆಗಳು ಸಿಗುತ್ತಿವೆ. ಆದರೆ ಕಾಯುವ ಸಮಯ ಹೆಚ್ಚಾಗಿದೆ. ಇದು ಒಂದು ದೊಡ್ಡ ಸಮಸ್ಯೆ ಎಂದು ಬಿಂಬಿಸಲಾಗುತ್ತಿದೆ’ ಎಂದು ಹಳೇನಗರ ನಾಗಪ್ಪ ಹೇಳಿದರು.

ತಾಲ್ಲೂಕಿನಲ್ಲಿ ಐದು ಸರ್ಕಾರಿ ಚೇರಿಯಲ್ಲಿ ಆಧಾರ್ ಸೇರ್ಪಡೆ ಸೌಲಭ್ಯವಿದೆ. ನೆಟ್‌ವರ್ಕ್‌, ಸರ್ವರ್ ಡೌನ್ ಮಾತುಗಳು ಸಾಮಾನ್ಯ ಎಂದರು ಪ್ರಕಾಶ್.

ಆಧಾರ್ ಅಧ್ವಾನ: ಜನ ಹೈರಾಣ

ಹೊಸನಗರ: ‘ನಿಮ್ಮ ಆಧಾರ್ ತಪ್ಪಿದೆ. ಹೆಸರು ಮ್ಯಾಚ್ ಆಗೊಲ್ಲ. ಹುಟ್ಟಿದ ತಾರೀಕು ಸರಿ ಇಲ್ಲ. ಫೋನ್ ನಂಬರ್ ಲಿಂಕ್ ಆಗಿಲ್ಲ. ಆಧಾರ್ ಸರಿ ಮಾಡಿಸಿಕೊಂಡು ಬನ್ನಿ...’ ಎಂದು ಎದುರಾಗುವ ಸಾಲು ಸಾಲು ಉತ್ತರಗಳಿಂದ ತಾಲ್ಲೂಕಿನಲ್ಲಿ ಜನರು ರೋಸಿ ಹೋಗಿದ್ದಾರೆ.

ಅರ್ಜಿ ಹಿಡಿದು ಕಚೇರಿಗೆ ಹೋದರೆ ಈ ಮೇಲಿನ ಉತ್ತರಗಳು ಎದುರಾಗುತ್ತವೆ. ಇದರಿಂದ ಗ್ರಾಹಕರು ಬೇಸತ್ತಿದ್ದಾರೆ.

‘ಈ ಎಲ್ಲ ಸಮಸ್ಯೆ ನಿವಾರಣೆ ಸುಲಭದ ಮಾತಲ್ಲ. ತಾಲ್ಲೂಕು ಕಚೇರಿ, ಸಾಮಾನ್ಯ ಸೇವಾ ಸೆಂಟರ್ ಅಲೆದಾಡಬೇಕಾಗಿದೆ. ಮೊದಲು ಅರ್ಜಿ ಪಡೆಯುವಾಗ ಏನು ಹೇಳದೆ ನಿರ್ಲಕ್ಷ್ಯ ವಹಿಸಿದ ಕಾರಣ ಕಾರ್ಡ್‌ಗಳಲ್ಲಿ ದೋಷ ಕಂಡುಬರುತ್ತಿವೆ’ ಎಂದು ಸಾಮಾಜಿಕ ಹೋರಾಟಗಾರ ವಾಟಗೋಡು ಸುರೇಶ್ ಆರೋಪಿಸುತ್ತಾರೆ.

ಸರ್ಕಾರ ಸರ್ವರ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಸೇವಾ ಕೇಂದ್ರಗಳು ಎಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೂ ಜನರಿಗೆ ಸಕಾಲದಲ್ಲಿ ಸೇವೆ ದೊರಕಿಸಲು ಸಾಧ್ಯವಿಲ್ಲ.

–ಆನಂದ್ ಕಲ್ಯಾಣಿ, ಆಧಾರ್ ಸೇವಾ ಕೇಂದ್ರ, ಕೋರ್ಟ್ ರಸ್ತೆ, ಸಾಗರ

ಎಲ್ಲ ಕಡೆಯೂ ನೆಟ್‍ವರ್ಕ್‌ ಸಮಸ್ಯೆ ಇದೆ. ಗ್ರಾಮೀಣ ಪ್ರದೇಶದಿಂದ ಬಂದ ಜನರು ವಾಪಸ್ ಹೋಗದಂತೆ ಆಧಾರ್ ಕಾರ್ಡ್ ನೋಂದಣಿ ಕಡ್ಡಾಯವಾಗಿ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.

–ಶೋಭಾಲಕ್ಷ್ಮೀ, ತಹಶೀಲ್ದಾರ್, ಸೊರಬ

ಆಧಾರ್ ಕಾರ್ಡ್ ಸಿದ್ಧಪಡಿಸುವಲ್ಲಿ ಎಚ್ಚರವಹಿಸದೆ ಬೇಜವಾಬ್ದಾರಿ ತೋರಿದ ಪರಿಣಾಮ ಸಾಕಷ್ಟು ನ್ಯೂನ್ಯತೆ ಕಂಡುಬರುತ್ತಿದೆ.

–ವಾಟಗೋಡು ಸುರೇಶ್, ಸಾಮಾಜಿಕ ಹೋರಾಟಗಾರ, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT