ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ರೈತರ ಮಹಾ ಪಂಚಾಯತ್‌; ಸಜ್ಜುಗೊಂಡ ಮಲೆನಾಡು

ಮಧ್ಯಾಹ್ನ 3ರಿಂದ ಸಮಾವೇಶ ಆರಂಭ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರಲಿದೆ ದೆಹಲಿ ರೈತ ನಾಯಕರ ದಂಡು
Last Updated 18 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಸೈನ್ಸ್ ಮೈದಾನದಲ್ಲಿ ಮಾರ್ಚ್‌ 20ರಂದು ನಡೆಯುವ ರೈತರ ಮಹಾ ಪಂಚಾಯತ್‌ಗೆ ರೈತ ಸಮುದಾಯ ಅಷ್ಟೆ ಅಲ್ಲ, ರೈತರು ಬೆಳೆದ ಆಹಾರ ಸೇವಿಸುವ ಎಲ್ಲ ವರ್ಗಗಳೂ ಭಾಗವಹಿಸುತ್ತಿವೆ ಎಂದು ಐಕ್ಯ ಹೋರಾಟ ಒಕ್ಕೂಟದ ಮುಖಂಡರು ಹೇಳಿದರು.

ಪ್ರತಿಯೊಬ್ಬರೂ ರೈತ ಹೋರಾಟದ ದೀಕ್ಷೆ ತೊಟ್ಟಿದ್ದೇವೆ. 15 ದಿನಗಳಿಂದ ನಿರಂತರವಾಗಿ ಸಿದ್ಧತೆ ನಡೆದಿದೆ. ಹಳ್ಳಿಹಳ್ಳಿಗಳಿಗೆ ತೆರಳಿ ಪ್ರವಾಸ ಮಾಡಿದ್ದೇವೆ. ಎಲ್ಲಾ ಕಡೆಯಿಂದಲೂ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದೆ. ಎಲ್ಲ ಸಮುದಾಯಗಳೂ ಜಾತಿ, ಪಕ್ಷ ಭೇದ ಮರೆತು ಬೆಂಬಲ ನೀಡಿವೆ. ಅಂದು ಮಧ್ಯಾಹ್ನ 3ಕ್ಕೆ ನಡೆಯುವ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಬರುತ್ತಾರೆ. ಐತಿಹಾಸಿಕ ಸಮ್ಮೇಳನವಾಗಿ ದಾಖಲಾಗುತ್ತದೆ ಎಂದು ಮುಖಂಡರಾದ ಕೆ.ಟಿ.ಗಂಗಾಧರ್, ಎಚ್‌.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಕೆ.ಎಲ್.ಅಶೋಕ್, ಎಂ.ಗುರುಮೂರ್ತಿ, ಎನ್.ರಮೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ರೈತ ವಿರೋಧ ಕಾಯ್ದೆಗಳನ್ನು ಜಾರಿಗೆ ತಂದು ರೈತ ಚಳವಳಿಗೆ ಮತ್ತೊಮ್ಮೆ ಮರುಜನ್ಮ ನೀಡಿದೆ. ಈ ರೈತ ಸಂಗ್ರಾಮ ರಾಷ್ಟ್ರವ್ಯಾಪಿ ಆಂದೋಲನವಾಗಲಿದೆ. ರೈತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ದಲಿತ, ಕನ್ನಡ ಪರ ಸಂಘಟನೆಗಳು, ಪ್ರಗತಿಪರರು, ಬರಹಗಾರರು ಸಮಾವೇಶದಲ್ಲಿ ಭಾಗವಹಿಸುವರು ಎಂದರು.

20ರಂದು ಬೆಳಿಗ್ಗೆ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಡಾ.ದರ್ಶನ್‌ಪಾಲ್, ಯುದ್ದವೀರ್ ಸಿಂಗ್ ಬೆಂಗಳೂರಿನಿಂದ ಹೊರಟು ಭದ್ರಾವತಿಗೆ 1.30ಕ್ಕೆ ತಲುಪುವರು. ಅಲ್ಲಿ ಊಟ ಮುಗಿಸಿದ ನಂತರ ನೇರವಾಗಿ ಸೈನ್ಸ್ ಮೈದಾನದ ವೇದಿಕೆಗೆ ಆಗಮಿಸುವರು. ಕೋವಿಡ್ ಮಾರ್ಗಸೂಚಿ ಅನ್ವಯ ಜಿಲ್ಲಾಧಿಕಾರಿ ಮನವಿಯ ಮೇರೆಗೆ ಮೆರವಣಿಗೆ ರದ್ದು ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ 3ಕ್ಕೆ ಆರಂಭವಾಗುತ್ತದೆ. 4ರವರೆಗೆ ಪ್ರಖ್ಯಾತ ಹಾಡುಗಾರ ಜೆನ್ನಿ ಅವರ ಸಂಗೀತ ಕಾರ್ಯಕ್ರಮ, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 4ಕ್ಕೆ ಪಂಚಾಯತ್ ಆರಂಭವಾಗಲಿದೆ ಎಂದು ವಿವರ ನೀಡಿದರು.

ಎನ್‌.ಡಿ.ಸುಂದರೇಶ್ ಅವರ ಪತ್ನಿ ಶೋಭಾ ಸುಂದರೇಶ್ ಅಧ್ಯಕ್ಷತೆ ವಹಿಸುವರು. ಆಯ್ದ ರೈತ ಮುಖಂಡರು ಭಾಷಣ ಮಾಡುವರು. 6.30ಕ್ಕೆ ಸರಿಯಾಗಿ ಕಾರ್ಯಕ್ರಮ ಮುಗಿಯುತ್ತದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುವುದು ಎಂದರು.

ಜೆಡಿೆಸ್‌ ಮುಖಂಡ ಎಂ.ಶ್ರೀಕಾಂತ್ ‘ವರಿ’ ವಿರಚಿತ ರೈತ ಹಾಗೂ ಹೋರಾಟದ ಗೀತೆಗಳ ಆಡಿಯೊ ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಎನ್.ಮಂಜುನಾಥ, ಹಾಲೇಶಪ್ಪ, ಯೋಗೀಶ್, ಪಂಡಿತ್‌ ವಿ.ವಿಶ್ವನಾಥ್‌, ಶಿ.ಜು.ಪಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT