ಅಮೃತ ಯೋಜನೆ: 32 ಗ್ರಾ.ಪಂ.ಗಳು ಆಯ್ಕೆ

ಶಿವಮೊಗ್ಗ: ಮಹಾತ್ಮ ಗಾಂಧೀಜಿಯವರ ಆಶಯವನ್ನು ಈಡೇರಿಸುವ ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಜಿಲ್ಲೆಯ 32 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.
75ನೇ ಸ್ವಾತಂತ್ರ್ಯೋತ್ಸವ ನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 15ರಂದು ಅಮೃತ ಗ್ರಾಮ ಪಂಚಾಯಿತಿ ಯೋಜನೆ ಘೋಷಿಸಿದ್ದರು. ರಾಜ್ಯದ 750 ಗ್ರಾಮ ಪಂಚಾಯಿತಿಗಳನ್ನು ಮುಂದಿನ ಬಜೆಟ್ ಒಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ₹ 25 ಲಕ್ಷ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.
₹ 25 ಲಕ್ಷ ಪ್ರೋತ್ಸಾಹ ಧನ: ಈ ಯೋಜನೆಗೆ ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿಗಳು 2022 ಮಾರ್ಚ್ ಅಂತ್ಯದೊಳಗೆ ಬೀದಿ ದೀಪಗಳ ಅಳವಡಿಕೆ, ಪ್ರತಿ ಮನೆಗೆ ನಲ್ಲಿ, ಶೇ 100ರಷ್ಟು ಘನ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ ಉದ್ಯಾನಗಳ ನಿರ್ಮಾಣ, ಗ್ರಂಥಾಲಯಗಳ ಡಿಜಿಟಲೀಕರಣ, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯಗಳಿಗೆ ಸೌಲಭ್ಯ ಕಲ್ಪಿಸುವುದು, ಆಟದ ಮೈದಾನ, ಕಾಂಪೌಂಡ್ ನಿರ್ಮಾಣ, ರೈತರ ಕೃಷಿ ಉಪಯೋಗಕ್ಕೆ ಗೋದಾಮು ನಿರ್ಮಾಣ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳಲಾಗುತ್ತದೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಅಂತಹ ಗ್ರಾಮ ಪಂಚಾಯಿತಿಗಳಿಗೆ ₹25 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ವೈಶಾಲಿ ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.