ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ: ಶಾಲೆ ಎದುರಿಗೆ ಆಮ್ನಿ ಶೆಡ್ ನಿಲ್ದಾಣಕ್ಕೆ ಪೋಷಕರ ವಿರೋಧ

Last Updated 8 ಜೂನ್ 2022, 2:46 IST
ಅಕ್ಷರ ಗಾತ್ರ

ಆನವಟ್ಟಿ: ಶಾಂತಾಚಾರ್ ಮಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆ ಎದುರು ಆಮ್ನಿ ವಾಹನದ ಚಾಲಕರು ಶಾಸಕರ ಅನುದಾನದಲ್ಲಿ ತಗಡಿನ ಆಮ್ನಿ ನಿಲ್ದಾಣ ಮಾಡಲು ಮುಂದಾಗಿರುವ ಕಾರಣ ಮಂಗಳವಾರ ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಆಮ್ನಿ ಚಾಲಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಹಂತಕ್ಕೆ ತಲುಪಿದೆ.

ಶಾಲಾ–ಕಾಲೇಜು ರಜೆ ಇರುವ ಅವಧಿಯಲ್ಲಿ ಆಟೊ ಚಾಲಕರು ತಗಡಿನ ಶೆಡ್ ನಿಲ್ದಾಣ ಮಾಡಿಕೊಂಡಿದ್ದು, ಆಮ್ನಿ ವಾಹನದವರು ನಮಗೆ ಅವಕಾಶ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಈಗ ಆಮ್ನಿ ವಾಹನಕ್ಕೆ ಅವಕಾಶ ನೀಡಿದರೆ ಮತ್ತೆ ಬೇರೆ– ಬೇರೆ ವಾಹನದವರು ಅನುದಾನ ತಂದು ನಮಗೂ ನಿಲ್ದಾಣ ಮಾಡಲು ಅವಕಾಶ ನೀಡಿ ಎನ್ನುವ ಸಾಧ್ಯತೆ ಇದೆ. ಹಾಗಾಗಿ ಶಾಲೆ ಎದುರು ಯಾವುದೇ ವಾಹನಗಳ ನಿಲ್ದಾಣ ಬೇಡ, ಬಸ್ ತಗುದಾಣ ಸೇರಿ ಬೇರೆ ಸ್ಥಳಗಳಲ್ಲಿ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಮುಂದಾಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

‘ಈ ಹಿಂದೆ ವಿದ್ಯಾರ್ಥಿಗಳಿಗೆ
ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಶಾಲೆ ಎದುರು ಇದ್ದ ಪಾನಿಪುರಿ, ಎಗ್‌ರೈಸ್ ಸೇರಿ ಬೀದಿಬದಿಯ ಅಂಗಡಿಗಳನ್ನು ತೆರವು ಮಾಡಲಾಗಿದೆ. ತಾತ್ಕಾಲಿಕವಾಗಿ ಆಮ್ನಿಗಳನ್ನು ನಿಲ್ಲಿಸಿಕೊಳ್ಳಿ, ಆದಷ್ಟು ಬೇಗ ಬೇರೆ ಕಡೆ ಆಮ್ನಿ ನಿಲ್ದಾಣ ಮಾಡಿಕೊಳ್ಳಲು ಸ್ಥಳ ನೋಡಿಕೊಳ್ಳಿ, ಶಾಲೆಯ ಕಾಂಪೌಂಡ್ ಹತ್ತಿರ ಜಾಗ ಬಿಟ್ಟು ನಿಲ್ಲಿಸಿಕೊಳ್ಳಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್ ಸೂಚಿಸಿದರು.

‘ಆಮ್ನಿ ನಿಲ್ದಾಣಕ್ಕೆ ಅನುಮತಿಯನ್ನು ಪಟ್ಟಣ ಪಂಚಾಯಿತಿಯಿಂದ ನೀಡಿಲ್ಲ. ಅದು ಲೋಕೋಪಯೋಗಿ ಇಲಾಖೆಗೆ ಬರುತ್ತದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಹೇಳಿದರೆ, ‘ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಪಟ್ಟಣ ಪಂಚಾಯಿತಿ ಅವರೆ ನೋಡಿಕೊಳ್ಳಬೇಕು’ ಎಂದು ಲೋಕೋಪಯೋಗಿ ಎಇಇ ಉಮಾನಾಯ್ಕ ಹೇಳುತ್ತಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಲೋಕೋಪಯೋಗಿ ಸಹಾಯಕ ಎಂಜಿನಿಯರ್‌ ಪರಸ್ಪರ ಒಬ್ಬರ ಮೇಲೆ ಒಬ್ಬರು ಹೇಳಿಕೆ ನೀಡಿ, ಆಮ್ನಿ ವಾಹನ ಚಾಲಕರ ವಿವಾದದಿಂದ ನುಣಿಚಿಕೊಳ್ಳುವ ಹೇಳಿಕೆ ನೀಡಿದರು.

ತಗಡಿನ ಶೆಡ್ ನಿಲ್ದಾಣಕ್ಕೆ ಅವಕಾಶ ಬೇಡ: ‘ಶಾಲಾ ಮಕ್ಕಳಿಗೆ, ಪ್ರಯಾಣಿಕರಿಗೆ ಅನುಕೂಲವಾಗಲು ಆಟೊ ನಿಲ್ದಾಣಕ್ಕೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ಶಾಲಾ– ಕಾಲೇಜುಗಳ ಆರಂಭ ಹಾಗೂ ಶಾಲೆ ಬಿಟ್ಟಾಗ ಆರು ಸಾವಿರಕ್ಕೂ ಹೆಚ್ಚು ಮಕ್ಕಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ಇದು ಹೆದ್ದಾರಿ ಆಗಿರುವುದರಿಂದ ವಾಹನ ಸಂಚಾರ ಹೆಚ್ಚಾಗಿದ್ದು, ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆಮ್ನಿ ವಾಹನದವರು ಶೆಡ್ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿದೆ. ಬದಲಾಗಿ ಹಾಗೇ ವಾಹನ ನಿಲ್ಲಿಸಿಕೊಳ್ಳಲಿ’ ಎಂದು ಪೋಷಕರಾದ ಕೆ.ಪಿ.ಗುರುಪಾದಯ್ಯ, ಹನುಮಂತಪ್ಪ ತಿಳಿಸಿದರು.

‘ಆಮ್ನಿ ತಗಡಿನ ನಿಲ್ದಾಣ ಮಾಡಿಸಲು ಚಾಲಕರ ಪರವಾಗಿ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು ಭಾಗವಹಿಸಿದ್ದು, ಇದು ಸರಿಯಲ್ಲ. ಈಗ ಅಮ್ನಿ ವಾಹನಗಳು ನಿಲ್ಲುತ್ತಿರುವ ಸ್ಥಳದಿಂದ 500 ಮೀಟರ್ ದೂರದಲ್ಲಿ ಆಸ್ಪತ್ರೆ ಇದೆ. ರೋಗಿಗಳಿಗೆ ನಿಜವಾಗಲೂ ಸೇವೆ ನೀಡುವ ಮನೋಭಾವ ಇದ್ದರೆ
ಸರ್ಕಾರಿ ಆಸ್ಪತ್ರೆ ಎದುರು ಆಮ್ನಿ ವಾಹನಗಳನ್ನು ನಿಲ್ಲಿಸಿಕೊಳ್ಳಲಿ.
ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ನೀಡುವುದು ಬೇಡ’ ಎಂದು ಎಸ್‌ಡಿಎಂಸಿ ಸದಸ್ಯ ನಾರಾಯಣಪ್ಪ ಮಸಾಲ್ತಿ ಅಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT