ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳ ನಿಗೂಢ ಸಾವಿಗೆ ಆಂಥ್ರಾಕ್ಸ್‌ ಕಾರಣ?

ಪಶುಪಾಲನೆ, ಜಾನುವಾರು ರೋಗಗಳ ನಿರ್ವಹಣೆ ಕುರಿತ ಸಂವಾದದಲ್ಲಿ ಶಂಕೆ
Last Updated 28 ಜನವರಿ 2019, 14:20 IST
ಅಕ್ಷರ ಗಾತ್ರ

ಕಾರ್ಗಲ್: ಶರಾವತಿ ಕಣಿವೆಯ ಕಾರ್ಗಲ್ ಮತ್ತು ಕುಳಕಾರು ಗ್ರಾಮಗಳಲ್ಲಿ ನಿಗೂಢ ರೀತಿಯಲ್ಲಿ 70ಕ್ಕೂ ಹೆಚ್ಚು ಜಾನುವಾರು ಮೃತಪಟ್ಟ ಹಿನ್ನೆಲೆಯಲ್ಲಿ ಪರಿಶೋಧನೆ ಮಾಡುವಾಗ ನರಡಿ ರೋಗ ಅಥವಾ ಅಂಥ್ರಾಕ್ಸ್‌ ಕಾರಣವಿರಬಹುದು ಎಂದು ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಕೆ.ಸಿ. ವೀರಣ್ಣ ಶಂಕೆ ವ್ಯಕ್ತಪಡಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯ ಶೆಹರಿ ರೋಜ್‌ಗಾರ್ ಯೋಜನಾ ಒಳಾಂಗಣದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿ, ಪಶುವೈದ್ಯಕೀಯ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಪಶುಪಾಲನೆ ಮತ್ತು ಜಾನುವಾರು ರೋಗಗಳ ನಿರ್ವಹಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಜಾನುವಾರು ಸಾಮಾನ್ಯವಾಗಿ ನಿಗದಿತ ಒಂದೇ ಪ್ರದೇಶದಲ್ಲಿ ಸಾವನ್ನು ಕಾಣುತ್ತಿದೆ. ಇದು ಹಲವು ರೀತಿಯ ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ. ಇಲ್ಲಿ ವೈಜ್ಞಾನಿಕ ಮಾಹಿತಿ ಮತ್ತು ತಂತ್ರಜ್ಙಾನದ ಅಡಿಯಲ್ಲಿ ನಡೆದ ಪರಿಶೋಧನೆಯಲ್ಲಿ ರಕ್ತಹೀನತೆ, ಕ್ಲಾಸ್ಟ್ರೀಡಿಯಂ ವಿಷಾಣು ಪ್ರಬೇಧಗಳ ಸೇವನೆ, ವಿಷಪೂರಿತ ಸಸ್ಯಗಳ ಸೇವನೆ, ಕರಳು ಕೊಳೆತು ನಂಜು ಏರಿರುವುದು ಪ್ರಮುಖವಾಗಿ ಜಾನುವಾರು ಮರಣೋತ್ತರ ಪರೀಕ್ಷೆಗಳಲ್ಲಿ ಕಂಡು ಬರುತ್ತಿದೆ. ಪಶುಗಳ ಮಾಲೀಕರು ಸಂಬಂಧಪಟ್ಟ ಪ್ರದೇಶಕ್ಕೆ ಜಾನುವಾರು ಹೋಗದಂತೆ ನೋಡಿಕೊಳ್ಳಬೇಕು ಎಂದು ಕೆ.ಸಿ. ವೀರಣ್ಣ ಸಲಹೆ ನೀಡಿದರು.

ಹಿರಿಯ ಪಶು ವೈದ್ಯ ಡಾ. ಎನ್.ಬಿ. ಶ್ರೀಧರ, ‘ಮಲೆನಾಡಿನ ಪ್ರದೇಶದಲ್ಲಿ ರಸ್ತೆ, ಸಾರ್ವಜನಿಕ ಪ್ರದೇಶಗಳಲ್ಲಿ ಬೀಡಾಡಿ ದನಗಳನ್ನು ನಿಯಂತ್ರಿಸಬೇಕು. ಬೀಡಾಡಿ ಜಾನುವಾರುಗಳ ಸಾವಿನ ಬಗ್ಗೆ ಅನೇಕ ಸಂಶೋಧನೆಯನ್ನು ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಕಂಡು ಬಂದಿರುವ ಸಮಸ್ಯೆ ಎಂದರೆ ಪ್ಲಾಸ್ಟಿಕ್ ಸೇವಿಸಿದ ದನಗಳು ಹಲವು ರೀತಿಯ ರೋಗ ರುಜಿನಗಳನ್ನು ಎದುರಿಸಿ ಸಾವನ್ನಪ್ಪುತ್ತವೆ. ದನದ ಹೊಟ್ಟೆಯಲ್ಲಿ 4 ವಿಧದ ಆಹಾರ ಚೀಲಗಳು ಇದ್ದು, ಇವುಗಳಲ್ಲಿ ಬಹುಪಾಲು ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿರುತ್ತದೆ. ಇದು ಆಹಾರಗಳ ಜೀರ್ಣ ಕ್ರಿಯೆಗೆ ಅಡ್ಡಿಪಡಿಸಿ ದನಗಳು ಹೊಟ್ಟೆ ಉಬ್ಬರಿಸಿ ಸಾವು ಕಾಣುವಂತೆ ಮಾಡುತ್ತದೆ. ಆದ ಕಾರಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಹೇರಿದರೆ ಅದು ಉಪಯುಕ್ತವಾದ ಕಾರ್ಯಕ್ರಮವಾಗುತ್ತದೆ ಎಂದು ಅವರು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ‘ಇಲ್ಲಿ ಕಂಡು ಬಂದಿರುವ ದನಗಳ ಸಾವಿನ ಪ್ರಕರಣದಲ್ಲಿ ವಿಷಾಹಾರ ಪದಾರ್ಥಗಳ ಸೇವನೆ ಕಂಡು ಬಂದಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂಥಹ ಪ್ರಕರಣಗಳು ಮರುಕಳಿಸಿದರೆ ಪಟ್ಟಣ ಪಂಚಾಯಿತಿ ಮತ್ತು ಪಶುವೈದ್ಯ ಕೇಂದ್ರದ ಮುಂಭಾಗದಲ್ಲಿ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಂಕದಮನೆ, ಉಪಾಧ್ಯಕ್ಷೆ ವೆರೋನಿಕಾ ಲೋಪಿಸ್, ಸದಸ್ಯರಾದ ವಿ. ಸಂತೋಷ್ ಕುಮಾರ್, ಗುರುಸಿದ್ಧಾಚಾರಿ, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗಿಲ್ಬರ್ಟ್ ಡಯಾಸ್, ಕೆಪಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೇವರಾಜ್, ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶ್ರೀಪಾದರಾವ್, ಕಾರ್ಗಲ್ ಪಶುವೈದ್ಯ ಕೇಂದ್ರದ ಡಾ. ಮನೋಹರ್, ಪ್ರಮುಖರಾದ ಅಣ್ಣಪ್ಪ ಪೂಜಾರಿ, ಜಾನ್ ಲಿಂಗನಮಕ್ಕಿ, ರಾಮಣ್ಣ ಹಸಲರು, ಬಿ, ಉಮೇಶ್, ಸದಾಶಿವ, ಶ್ರೀನಿವಾಸ, ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT