ತೀರ್ಥಹಳ್ಳಿ: ಚಿತ್ರಕಲೆಗೆ ಭಾವ ತುಂಬುತ್ತಿರುವ ‘ಭಾವನಾ’

ತೀರ್ಥಹಳ್ಳಿ: ಒಂದೂವರೆ ವರ್ಷದ ಹಿಂದೆ ಕೈತುಂಬ ಸಂಬಳ ಸಿಗುವ ಕೆಲಸ ಬಿಟ್ಟ ಇಲ್ಲಿನ ಭಾವನ ಹೊಳ್ಳ ಅವರಿಗೆ ಚಿತ್ರಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಚಿತ್ರಕಲೆಯ ಮೂಲಕ ಮಹತ್ವದ್ದನ್ನು ಸಾಧಿಸುವ ಹಂಬಲದಿಂದ ಇವರ ದಿನಚರಿ ಪ್ರತಿದಿನ ಏನಾದರೊಂದು ಹೊಸದನ್ನು ಸೃಷ್ಟಿಸುವತ್ತ ಸಾಗುತ್ತಿದೆ.
ಚಿತ್ರಕಲೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಶಿಕ್ಷಣ ಪಡೆಯದಿದ್ದರೂ ತಾನು ಸಾಧಿಸಬಲ್ಲೆ ಎಂಬ ಛಲ ಹೊತ್ತಿರುವ ಇವರು ಕಟಗಾರು ಗ್ರಾಮದ ಕಾರೇಮನೆ ಎಂಬ ಪುಟ್ಟ ಹಳ್ಳಿಯೊಂದರ ಯುವ ಪ್ರತಿಭೆ. ಸ್ವಂತಿಕೆಗೆ ಗೋಡೆ ಕಟ್ಟಿ ಬದುಕಲು ಸಾಧ್ಯವಾಗದೆ ತಾನು ನಂಬಿಕೊಂಡ ಕಲೆಯಲ್ಲಿ ವಿಶ್ವಾವಿಟ್ಟು ಚಿತ್ರಕಲೆಯತ್ತ ಆಸಕ್ತಿ ಮೂಡಿಸಿಕೊಂಡಿದ್ದಾರೆ.
ಓದಿದ್ದು ಬಿಸಿಎ. ಕುಟುಂಬದ ಸದಸ್ಯರ ಒತ್ತಾಯಕ್ಕೆ ಮಣಿದು ಎಂಸಿಎಗೆ ಸಿಇಟಿ ಪರೀಕ್ಷೆ ಬರೆದಿದ್ದ ಅವರು ರ‍್ಯಾಂಕ್‌ನಲ್ಲಿ ತೇರ್ಗಡೆಯಾಗಿದ್ದರು. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೂ ಅದನ್ನು ಬಿಟ್ಟು ಚಿತ್ರಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಕೆಲಕಾಲ ಕೆಲಸವನ್ನೂ ಮಾಡಿದ್ದರು.
ಆರಂಭದ ದಿನಗಳಲ್ಲಿ ಚಿತ್ರಕಲೆಯ ಶಿಕ್ಷಣ ಪಡೆಯದ ಅವರು ನಂತರದ ದಿನಗಳಲ್ಲಿ ಶ್ರಮ ವಹಿಸಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾಗಿದ್ದ ಎನ್.ಟಿ. ಮಂಜಣ್ಣ ನಾಯ್ಕ್ ಅವರಿಂದ ಅಷ್ಟಿಷ್ಟು ಕಲಿತು, ಈಗ ಎಲ್ಲರೂ ಹುಬ್ಬೇರಿಸುವಂತ ಚಿತ್ರ ರಚಿಸುತ್ತಿದ್ದಾರೆ.
ಇದುವರೆಗೆ 70ಕ್ಕೂ ಹೆಚ್ಚು ಸೃಜನಶೀಲ ಚಿತ್ರಗಳಿಗೆ ಜೀವ ತುಂಬಿದ್ದಾರೆ. ವ್ಯಕ್ತಿಚಿತ್ರಗಳನ್ನು ಚಿತ್ರಿಸುವ ಮೂಲಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಕೆಯ ಚಿತ್ರಕಲೆಯ ಹವ್ಯಾಸ ಅರಿತಿರುವ ಪಟ್ಟಣದ ಖಾಸಗಿ ಶಾಲೆ ತಿಂಗಳಿಗೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಕಲಿಸಲು ಅವಕಾಶ ನೀಡಿದೆ.
ಕೃಷ್ಣ, ವೆಂಕಟರಮಣ, ನಂದಿ, ಬೇಂದ್ರೆ, ಭೂತಕೋಲ, ತೈಯಂ, ಪರಿಸರ ಇವರ ಕೈಚಳಕದಲ್ಲಿ ಮೂಡಿಬಂದ ಸುಂದರ ಚಿತ್ರಗಳು. ಸಮಾರಂಭಗಳ ಉಡುಗೊರೆಗಾಗಿ ವಿಶೇಷ ವ್ಯಕ್ತಿಚಿತ್ರಗಳನ್ನು ರಚಿಸಿಕೊಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
‘ಕ್ಯಾನ್ವಸ್, ಪೆನ್ಸಿಲ್, ಚಾರ್ಕೋಲ್, ಗ್ರಾಫೈಟ್, ವಾಟರ್ ಕಲರ್ ಮುಂತಾದವುಗಳ ಬಳಸಿ ಚಿತ್ರ ರಚಿಸುತ್ತೇನೆ. ಅಧ್ಯಾತ್ಮದತ್ತ ಒಲವು ಇರುವುದರಿಂದ ಭಾಗವತ ಪುರಾಣದ ಸರಣಿ ಚಿತ್ರಗಳನ್ನು ರಚಿಸುವ ಕನಸು ಇದೆ’ ಎಂದು ಹೇಳುತ್ತಾರೆ ಭಾವನಾ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.