ಸಾಗರ: ‘ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಜೋಗ ಜಲಪಾತದ ರಾಣಿ ಫಾಲ್ಸ್ ಸಮೀಪ ವಾಸವಿದ್ದ ನಮ್ಮ ಕುಟುಂಬವನ್ನು ಪ್ರವಾಸೋದ್ಯಮ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿದ್ದು, ಈ ಮೂಲಕ ದೌರ್ಜನ್ಯ ನಡೆಯುತ್ತಿದೆ’ ಎಂದು ಜೋಗದ ನಿವಾಸಿ ಕ್ಯಾಫ್ತಿನಾ ಕೆ.ಫರ್ನಾಂಡಿಸ್ ಆರೋಪಿಸಿದ್ದಾರೆ.
‘ಏಳೆಂಟು ವರ್ಷಗಳಿಂದ ಜೋಗದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆಯುವ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿರುವ ನಮ್ಮ ಕುಟುಂಬವನ್ನು ಬಲವಂತದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಈಚೆಗೆ ಸುದ್ದಿಗೋಷ್ಠಿಯಲ್ಲಿ ದೂರಿದರು.
‘34 ಗುಂಟೆ ಭೂ ಪ್ರದೇಶವನ್ನು ನಮ್ಮ ಕುಟುಂಬಕ್ಕೆ ಬಿಟ್ಟು ಕೊಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಅದನ್ನು ತಾಲ್ಲೂಕು ಆಡಳಿತದ ಅಧಿಕಾರಿಗಳು ಪಾಲಿಸದೆ ಫಸಲು ನಾಶ ಮಾಡಿ ಅನ್ಯಾಯ ಎಸಗಿದ್ದಾರೆ’ ಎಂದು ಆರೋಪಿಸಿದರು.