ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಟೊಮಿತ್ರ’ ಆ್ಯಪ್... ಶಿವಮೊಗ್ಗದಲ್ಲಿ ತೋಪು!

ಪ್ರಯಾಣಿಕರು ದೂರು ನೀಡಲು ಅನುವಾಗುವ ಆ್ಯಪ್‌ ಪರಿಚಯಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ
Last Updated 8 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯುಆಟೊ ಪ್ರಯಾಣಿಕರ ಅನುಕೂಲಕ್ಕಾಗಿ ಪರಿಚಯಿಸಿದ್ದ ‘ಆಟೊಮಿತ್ರ’ಆ್ಯಪ್‌ ಅನೇಕರಿಗೆ ತಲುಪುವಲ್ಲಿ ವಿಫಲವಾಗಿದೆ.

ಆಟೊ ಚಾಲಕರು ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ, ಹೆಚ್ಚಿನ ದರಕ್ಕೆ ಬೇಡಿಕೆ, ಬಾಡಿಗೆ ಬರಲು ನಿರಾಕರಿಸುತ್ತಾರೆ ಎಂಬ ದೂರುಗಳು ಬರುತ್ತಿದ್ದ ಕಾರಣ ಪ್ರಯಾಣಿಕರುಕೂಡಲೇ ಪೊಲೀಸ್ ಇಲಾಖೆಗೆ ದೂರು ನೀಡಲು ಅನುಕೂಲವಾಗುವಂತೆ‘ಆಟೊಮಿತ್ರ’ ಆ್ಯಪ್‌ ಅನ್ನು 2018ರ ಮೇನಲ್ಲಿ ಪರಿಚಯಿಸಲಾಗಿತ್ತು.

ಈ ಯೋಜನೆಯಡಿಶಿವಮೊಗ್ಗ ನಗರದಲ್ಲಿ 3,500 ಆಟೊ ಚಾಲಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಮುಂತಾದ ವಿವರಗಳನ್ನು ಸಂಗ್ರಹಿಸಿ, ಬಾರ್‌ಕೋಡ್ ಹಾಗೂ ಸಂಖ್ಯೆ ಹೊಂದಿರುವ ಚಾಲನಾ ಪರವಾನಗಿ ಮಾಹಿತಿ ಪತ್ರ (ಮಾಹಿತಿ ಫಲಕ)ವನ್ನು ಆಟೊ ಚಾಲಕರಿಗೆ ವಿತರಿಸಲಾಗಿತ್ತು. ಆದರೆ ಈ ವರೆಗೂ ಆಟೊಮಿತ್ರ ಆ್ಯಪ್‌ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ.

ಆ್ಯಪ್ ಹೇಗೆ ಸಹಕಾರಿ:

ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ‘ಆಟೊಮಿತ್ರ ಆ್ಯಪ್‌’ ಅನ್ನು ಡೌನ್‌ಲೋಡ್ ಮಾಡಿಕೊಂಡು ಪರವಾನಗಿ ಮಾಹಿತಿ ಕಾರ್ಡ್‌, ಬಾರ್‌ ಕೋಡ್, ಸ್ಕ್ಯಾನಿಂಗ್ ಅಥವಾ ಪಿಎಸ್ಎನ್ ಸಂಖ್ಯೆ ಬಳಸಿ ಆಟೊ ಚಾಲಕರ ವಿವರಗಳನ್ನು ಪರಿಶೀಲಿಸಬಹುದು.ಪ್ರಯಾಣದ ಸಮಯದಲ್ಲಿ ಆಟೊ ಚಾಲಕರ ವಿವರಗಳನ್ನು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬ ವರ್ಗದವರಿಗೆ ನೀಡಬಹುದಾಗಿದೆ. ಇದರಿಂದ ಯಾವುದಾದರೂ ಅವಘಡಗಳು ಸಂಭವಿಸಿದರೂ ಮಾಹಿತಿ ಹಂಚಿಕೊಂಡವರಿಗೆ ತಕ್ಷಣ ತಿಳಿಯುತ್ತದೆ.

ಮೀಟರ್ ಬಳಕೆ ವಿರಳ:

ಆಟೊದಲ್ಲಿ ಪ್ರಯಾಣಿಕರು ಹತ್ತಿದ ನಂತರ ಮೀಟರ್ ಹಾಕಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಕಡ್ಡಾಯಗೊಳಿಸಿದ್ದರೂ ಅನೇಕ ಆಟೊ ಚಾಲಕರು ಮೀಟರ್ ಇದ್ದರೂ ಅದನ್ನು ಬಳಸುವುದು ವಿರಳವಾಗಿದೆ.

ಮೀಟರ್‌ ಬಳಸದ ಆಟೊ ಚಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಇದು ಕೆಲವು ದಿನಗಳ ಕಾಲ ನಡೆಯಿತಾದರೂ ನಂತರ ಪ್ರಯಾಣಿಕರ ಸ್ಪಂದನೆಯ ಕೊರತೆಯಿಂದ ಪರಿಶೀಲನಾ ಕಾರ್ಯ ನಿಂತಿದೆ.

ಈಗ ನಗರದಲ್ಲಿನ ಬಹುತೇಕ ಆಟೊಗಳ ಮೀಟರ್‌ಗಳು ತೋರಿಕೆಗೆ ಇದ್ದು, ಪ್ರಯಾಣಿಕರು ಹೇಳಿದರೆ ಮಾತ್ರ ಬಳಸುತ್ತಾರೆ. ಆಟೊ ಮೀಟರ್ ಬಳಕೆ ಕಡ್ಡಾಯ ಕುರಿತ ಸೂಚನಾ ಫಲಕಗಳನ್ನು ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಹಲವೆಡೆ ಹಾಕಿದ್ದರೂ ಮೀಟರ್‌ ಬಳಕೆಯೇ ಗೌಣವಾಗಿದೆ. ನಿಗದಿ ಮಾಡುವ ದರಕ್ಕೆ ಪ್ರಯಾಣಿಕರು ಹೋಗುವ ಪರಿಸ್ಥಿತಿ ಉಂಟಾದಾಗ ಈ ಆ್ಯಪ್‌ ಸಹಕಾರಿಯಾಗುತ್ತದೆ.

ಸೇವೆ ಇಲ್ಲದ ಮುಂಗಡ ಪಾವತಿ ಆಟೊರಿಕ್ಷಾ ಸೇವಾ ಕೇಂದ್ರ:

ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ಬಹು ಬೇಡಿಕೆಯ ಮುಂಗಡ ಪಾವತಿ ಆಟೊರಿಕ್ಷಾ ಸೇವಾ ಕೇಂದ್ರದಲ್ಲಿ (ಪ್ರೀ ಪೇಯ್ಡ್ ಆಟೊ ಸೆಂಟರ್) ಸೇವೆಯೇ ಇಲ್ಲದಂತಾಗಿದೆ.

2017ರಲ್ಲಿ ಸೇವಾ ಕೇಂದ್ರ ತೆರೆಯಲಾಗಿದ್ದು. ನಾನಾ ಕಾರಣಗಳಿಂದ ಈ ಕೇಂದ್ರ ಬಾಗಿಲು ಮುಚ್ಚಿದೆ. ಇದರಿಂದ ಪ್ರಯಾಣಿಕರು ನಿತ್ಯವೂ ಪರದಾಡುವಂತಾಗಿದೆ.

ಮುಂಗಡ ಪಾವತಿ ಆಟೊ ಸೇವಾ ಕೇಂದ್ರ ಸೇವೆಗೆ ಲಭ್ಯವಿಲ್ಲದ ಕಾರಣ ಇತರೆ ಆಟೊಗಳ ಚಾಲಕರು ಮತ್ತು ಪ್ರಯಾಣಿಕರ ನಡುವೆ ನಿತ್ಯವೂ ವಾಗ್ವಾದ ನಡೆಯುತ್ತದೆ. ಕಡಿಮೆ ಅಂತರದ ಸ್ಥಳಕ್ಕೆ ದುಬಾರಿ ಶುಲ್ಕ ಪಡೆಯುತ್ತಿರುವ ಆಟೊ ಚಾಲಕರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಮೀಟರ್ ಇಲ್ಲದೆ, ಮತ್ತೊಂದೆಡೆ ಮುಂಗಡ ಪಾವತಿ ಸೇವೆಯೂ ಸಿಗದೇ ಪ್ರಯಾಣಿಕರು ಹೈರಾಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ‘ಆಟೊ ಮಿತ್ರ’ ಆ್ಯಪ್‌ ಅನ್ನು ಪ್ರಯಾಣಿಕರು ಬಳಸಬಹುದು. ಆದರೆ, ಅನೇಕರಿಗೆ ಮಾಹಿತಿ ಕೊರತೆಯಿಂದಾಗಿ ಆ್ಯಪ್‌ ಸೇವೆ ಹಳ್ಳ ಹಿಡಿದಿದೆ.

ಕೆಲವು ಆಟೊಗಳಲ್ಲಿ ಮಾತ್ರ ಮಾಹಿತಿ ಪತ್ರ ಅಳವಡಿಸಿಲ್ಲ. ಆದರೆ, ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲಾ ಆಟೊ ಚಾಲಕರೂ ಮಾಹಿತಿ ಪತ್ರ ಅಳವಡಿಸಿಕೊಳ್ಳಬೇಕು. ಇದರಿಂದ ಚಾಲಕರಿಗೂ ಅನುಕೂಲ ಎಂಬುದು ಆಟೊ ಚಾಲಕ ಮಹೇಶ್ ಅಭಿಪ್ರಾಯ.

‘ಪೊಲೀಸ್ ಇಲಾಖೆಯು ಕನಿಷ್ಠ ದರವನ್ನು ಕಡಿಮೆ ನಿಗದಿ ಮಾಡಿದ್ದು, ಆಟೊ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಇದರಿಂದ ಚಾಲಕರು ಸಂಕಷ್ಟಕ್ಕೀಡಾಗಿದ್ದೇವೆ. ಆದ್ದರಿಂದ 1.5 ಕಿ.ಮೀ ಕನಿಷ್ಠ ದರ ₹ 40 ನಿಗದಿ ಮಾಡಬೇಕು’ ಎಂಬುದು ಆಟೊ ಚಾಲಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT