ಮಂಗಳವಾರ, ಮಾರ್ಚ್ 21, 2023
22 °C
ಶಿಕಾರಿಪುರ: ಖಾಜಿ ಕೊಪ್ಪಲು ಬಡಾವಣೆಯಲ್ಲಿ ಕಾಣಿಸಿಕೊಂಡ ಕರಡಿ

ಅರಣ್ಯ ಇಲಾಖೆ ಕಾರ್ಯಾಚರಣೆ: ಪತ್ತೆಯಾಗದ ಕರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಪಟ್ಟಣದ ಖಾಜಿ ಕೊಪ್ಪಲು ಬಡಾವಣೆಯ ರಂಗಕರ್ಮಿ ಕೊಪ್ಪಲು ಮಂಜಣ್ಣ ಅವರ ಮನೆಯ ಹಿಂಭಾಗ ಮಂಗಳವಾರ ಬೆಳಿಗ್ಗೆ ಕರಡಿ ಪ್ರತ್ಯಕ್ಷವಾಗಿದ್ದು, ಕರಡಿ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು.

ಖಾಜಿಕೊಪ್ಪಲು ಬಡಾವಣೆಯಲ್ಲಿ ಬೆಳಿಗ್ಗೆ ಜನ ಕರಡಿ ಕಂಡಿದ್ದಾರೆ. ಕೊಪ್ಪಲು ಮಂಜಣ್ಣ ಅವರ ಮನೆಯ ಹಿಂಭಾಗದ ತೋಟದಲ್ಲಿರುವ ಮೆಕ್ಕೆಜೋಳ ಬೆಳೆಯಲ್ಲಿ ಅಡಗಿ ಕುಳಿತಿದೆ ಎಂದು ಬಡಾವಣೆಯ ನಾಗರಿಕರು ಹೇಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದರು. ಕರಡಿ ಓಡಾಟ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

ಸ್ಥಳಕ್ಕೆ ಸಾಗರ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಹಾಗೂ ಶಿಕಾರಿಪುರ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ ಹಾಗೂ ಕರಡಿಗೆ ಅರಿವಳಿಕೆ ಮದ್ದು ನೀಡಲು ಬಂದಿದ್ದ ಶಿವಮೊಗ್ಗದ ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞ ಡಾ.ವಿನಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  ಛಾಯಾಗ್ರಾಹಕ ಕಿರಣ್ ದ್ರೋಣ್ ಕ್ಯಾಮೆರಾ ಬಳಸಿ ಕರಡಿ ಪತ್ತೆ ಹಚ್ಚಲು ಯತ್ನಿಸಿದರು. ಆದರೆ ಅದು ಫಲ ನೀಡಲಿಲ್ಲ. ನಂತರ ಮೆಕ್ಕೆಜೋಳದ ಬೆಳೆ ಸುತ್ತಲೂ ಅರಣ್ಯ ಇಲಾಖೆ ಸಿಬ್ಬಂದಿ ಬಲೆಯನ್ನು ಕಟ್ಟಿದರು. ನಂತರ ಸಮೀಪ ಪಟಾಕಿ ಸಿಡಿಸಿದರು. ಆದರೂ ಕರಡಿ ಪತ್ತೆಯಾಗಲಿಲ್ಲ. ನಂತರ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಬೆಂಕಿಯ ಪಂಜುಗಳನ್ನು ಹಿಡಿದುಕೊಂಡು, ತಲೆಗೆ ಹೆಲ್ಮೆಟ್ ಹಾಕಿಕೊಂಡು ಪಟಾಕಿ ಸಿಡಿಸುತ್ತ ಕೂಗುತ್ತಾ ಮೆಕ್ಕೆಜೋಳ ಬೆಳೆಯ ಮಧ್ಯ ಕಾರ್ಯಾಚರಣೆ ನಡೆಸಿದರು. ಆದರೂ ಕರಡಿ ಪತ್ತೆಯಾಗಲಿಲ್ಲ.

ಬೆಳಿಗ್ಗೆ ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ನಿಜ. ಆದರೆ ನಂತರ ಆ ಸ್ಥಳದಿಂದ ಕರಡಿ ನಿರ್ಗಮಿಸಿದೆ. ಆದರೆ ಜನರ ಆತಂಕ ದೂರ ಮಾಡಲು ಕಾರ್ಯಾಚರಣೆ ನಡೆಸಿದ್ದೇವೆ. ಇನ್ನೂ ಎರಡು ದಿನ ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ‘ಪ್ರಜಾವಾಣಿ’ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ ತಿಳಿಸಿದರು.

ಶಿಕಾರಿಪುರ ವಲಯ ಅರಣ್ಯಾಧಿಕಾರಿ ಕೆ.ಬಿ. ರಾಘವೇಂದ್ರ, ಶಿರಾಳಕೊಪ್ಪ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ್, ಉಪವಿಭಾಗದ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು