ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಫಲಿಸುವುದಿಲ್ಲ:ಗೋಪಾಲಕೃಷ್ಣ ಬೇಳೂರು

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು
Published 16 ಮೇ 2024, 13:54 IST
Last Updated 16 ಮೇ 2024, 13:54 IST
ಅಕ್ಷರ ಗಾತ್ರ

ಸಾಗರ: ಕಾಂಗ್ರೆಸ್‌ನ ಎಲ್ಲಾ 136 ಶಾಸಕರು ಪಕ್ಷದ ಜೊತೆಗೆ ಸದೃಢವಾಗಿ ನಿಂತಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ, ಜೆಡಿಎಸ್ ಪ್ರಯತ್ನಕ್ಕೆ ಯಶಸ್ಸು ದೊರಕುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸರ್ಕಾರದಲ್ಲಿ ಏರುಪೇರು ಕಾಣಲಿದೆ ಎಂದು ಬಿಜೆಪಿ ಮುಖಂಡರು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಪ್ಪು ಮಾಡಿರುವ ವ್ಯಕ್ತಿಯ ವಿಷಯವನ್ನು ಬಿಟ್ಟು ಉಳಿದ ವಿಷಯವನ್ನು ಮುನ್ನಲೆಗೆ ತರಲು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹರಸಾಹಸ ಮಾಡುತ್ತಿದ್ದಾರೆ. ಎಸ್‌ಐಟಿ ಈ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಡೆಸುತ್ತಿದ್ದರೂ ಸಿಬಿಐಗೆ ಪ್ರಕರಣವನ್ನು ಒಪ್ಪಿಸಿ ಎಂದು ಒತ್ತಾಯಿಸುವ ಮೂಲಕ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಈ ಕಾರಣಕ್ಕಾಗಿಯೇ ಹಿಂದುತ್ವದ ಬದಲು ಹಿಂದೂ-ಮುಸ್ಲಿಂ ಐಕ್ಯತೆಯ ಕುರಿತು ಪ್ರಧಾನಿ ಮೋದಿ ಈಗ ಮಾತನಾಡಲು ಆರಂಭಿಸಿದ್ದಾರೆ. ಸ್ವಾತಂತ್ರ್ಯ ದೊರಕಿದ ಸಂದರ್ಭದಿಂದ ಹಿಡಿದು ಈವರೆಗೂ ಕಾಂಗ್ರೆಸ್ ಹೇಳಿದ್ದನ್ನು ಪ್ರಧಾನಿ ಈಗ ಅನುಸರಿಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

‘ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಕೆಲವು ಪ್ರಮುಖ ವಿಷಯಗಳು ವಿಧಾನಪರಿಷತ್‌ನಲ್ಲಿ ಮಂಡನೆಯಾದ ಸಂದರ್ಭದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುತ್ತಿದೆ. ಇದನ್ನು ತಪ್ಪಿಸಲು ಪರಿಷತ್‌ನಲ್ಲೂ ಕಾಂಗ್ರೆಸ್ ಶಕ್ತಿಯನ್ನು ಹೆಚ್ಚಿಸುವ ಕೆಲಸಕ್ಕೆ ಕಾರ್ಯಕರ್ತರು ಕೈ ಜೋಡಿಸಬೇಕಿದೆ’ ಎಂದು ಅವರು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಬಿಜೆಪಿ ಮುಖಂಡರು ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಈ ಯೋಜನೆಯ ಯಶಸ್ಸಿನಿಂದ ಆ ಪಕ್ಷದ ಮುಖಂಡರು ಆತಂಕಗೊಂಡಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ. ಪರಿಷತ್ ಚುನಾವಣೆಯಲ್ಲಿ ಒಳ ಹೊಡೆತಗಳ ಮೂಲಕ ಗೆಲ್ಲಲು ಬಿಜೆಪಿ ಪ್ರಯತ್ನ ಮಾಡಲಿದ್ದು ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕಿದೆ ಎಂದರು.

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಮಂಜುನಾಥ್ ಕೊಡಗು ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಐ.ಎನ್. ಸುರೇಶ್ ಬಾಬು, ರವಿಕುಮಾರ್ ಗೌಡ, ಪ್ರಭಾವತಿ ಚಂದ್ರಕಾಂತ್, ಎನ್.ಉಷಾ, ಮಧುಮಾಲತಿ, ಗಣಪತಿ ಮಂಡಗಳಲೆ, ಅಶೋಕ್ ಬೇಳೂರು, ಹೊಳಿಯಪ್ಪ, ಎನ್.ಲಲಿತಮ್ಮ, ತಶ್ರೀಫ್ ಇಬ್ರಾಹಿಂ, ಮಕ್ಬುಲ್ ಅಹ್ಮದ್, ವಿ.ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT