ಶನಿವಾರ, ಸೆಪ್ಟೆಂಬರ್ 25, 2021
22 °C

ಭದ್ರಾವತಿ: ದಶಕದ ನಂತರ ಬಹುಬೇಗ ತುಂಬಿದ ಭದ್ರಾ

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ದಶಕದ ನಂತರ ಭದ್ರಾ ಜಲಾಶಯ ಆಗಸ್ಟ್ ಮೊದಲ ವಾರದಲ್ಲೇ ಭರ್ತಿಯಾಗಿ ನೀರನ್ನು ಹೊರಬಿಟ್ಟ ಕಾರಣ ಇಲ್ಲಿನ ಭದ್ರಾ ನದಿ ತುಂಬಿ ಹರಿಯುತ್ತಿದೆ.

ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ಮೊದಲ ವಾರದಲ್ಲಿ ತುಂಬುತ್ತಿದ್ದ ಜಲಾಶಯ ಈ ಬಾರಿ ಅದಕ್ಕೂ ಮುನ್ನವೇ ಭರ್ತಿಯಾಗುವ ಮೂಲಕ ಜನರ ಬದುಕಿಗೆ ನೆಮ್ಮದಿ ತಂದಿದೆ.

‘ಈ ಬಾರಿ ಗಣ್ಯರಿಂದ ಬಾಗಿನ ಅರ್ಪಣೆ ಬಲುಜೋರಾಗಿ ನಡೆದಿದ್ದರೆ, ಮತ್ತೊಂದೆಡೆ ಜಲಾಶಯದಿಂದ ಹೊರಬಿಟ್ಟ ನೀರಿನ ಸೊಬಗು ನೋಡಲು ಜನರ ದಂಡೇ ಹರಿದು ಬರುತ್ತಿದೆ. ವಾರದ ಕೊನೆಯ ದಿನವಾದ ಶನಿವಾರ, ಭಾನುವಾರ ಜಲಾಶಯ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದ್ದು, ಇದರಿಂದಾಗಿ ಅಲ್ಲಿನ ಜನದಟ್ಟಣೆ ನಿಯಂತ್ರಿಸಲು ಪರದಾಟ ಮಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಹುಣಸೇಕಟ್ಟೆ ವಿರೂಪಾಕ್ಷಿ.

‘ಭದ್ರೆಯ ಒಡಲು ಭರ್ತಿಯಾದರೆ ತಾಲ್ಲೂಕಿನ ಕೃಷಿ ಚಟುವಟಿಕೆಗೆ ಉತ್ತೇಜನ ಸಿಗುವ ಜತೆಗೆ ಕುಡಿಯುವ ನೀರಿನ ಬವಣೆ ಸೃಷ್ಟಿಯಾಗುವುದಿಲ್ಲ’ ಎನ್ನುತ್ತಾರೆ ಜಯರಾಂ.

ಆರ್ಭಟ ಕಡಿಮೆ: ‘ಈ ಬಾರಿ ಜಲಾಶಯದಿಂದ ನೀರು ಹೊರಬಿಟ್ಟ ನಂತರ ನದಿಪಾತ್ರದ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕ ಸೃಷ್ಟಿಯಾಗಲಿಲ್ಲ. ಇದಕ್ಕೆ ಬೇಗನೆ ಜಲಾಶಯ ತುಂಬಿರುವುದೂ ಕಾರಣ ಇರಬಹುದು’ ಎನ್ನುತ್ತಾರೆ ಗೋವಿಂದಪ್ಪ.

‘ಕಳೆದ ಕೆಲವು ವರ್ಷಗಳಿಂದ ತಡವಾಗಿ ತುಂಬುತ್ತಿದ್ದ ಜಲಾಶಯದಿಂದ ನೀರು ಹೊರಬಿಟ್ಟಾಗ ನದಿಪಾತ್ರದ ಜನರ ರಕ್ಷಣೆಗೆ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ಇತ್ತು. ಆದರೆ, ಈ ಬಾರಿ ಇದಕ್ಕೆ ಆಸ್ಪದವೇ ಆಗದ ರೀತಿಯಲ್ಲಿ ನದಿಯ ಹರಿವು ಸಾಗಿದ್ದು, ಯಾವುದೇ ಅನಾಹುತ ಉಂಟಾಗಿಲ್ಲ’ ಎನ್ನುತ್ತಾರೆ ನದಿಪಾತ್ರದ ಶಿವರಾಜ್.

ಹೆಚ್ಚಾದ ಮಳೆ: ‘ವಾಡಿಕೆ ಮಳೆಗಿಂತ ಈ ಬಾರಿ ಜುಲೈ ತಿಂಗಳಲ್ಲಿ ಆಗಿರುವ ಮಳೆಯ ಪ್ರಮಾಣ ಅಧಿಕವಾಗಿತ್ತು. ಜುಲೈ ಅಂತ್ಯ ಇಲ್ಲವೇ ಆಗಸ್ಟ್ ಮೊದಲ ವಾರದಿಂದ ಮಳೆಯ ಆರ್ಭಟ ಹೆಚ್ಚುತ್ತಿದ್ದ ಪರಿಣಾಮ ಜಲಾಶಯ ತುಂಬಲು ಸೆಪ್ಟೆಂಬರ್ ತಿಂಗಳು ಆಗುತ್ತಿತ್ತು. ಈ ವರ್ಷ ಅದು ಬದಲಾಗಿದೆ’ ಎನ್ನುತ್ತಾರೆ ಲೋಕೇಶ್.

‘ಸದ್ಯ ಜಲಾಶಯದ ನೀರಿನ ಹರಿವು ನಿರಂತರವಾಗಿ ಸಾಗಿದಲ್ಲಿ ವರ್ಷದ ಅಂತ್ಯದವರೆಗೆ ಭದ್ರಾನದಿ ತುಂಬಿ ಹರಿಯುವುದರಲ್ಲಿ ಅನುಮಾನವಿಲ್ಲ. ಈ ಬಾರಿಯ ಮುಂಚಿತ ಮುಂಗಾರಿನ ಪ್ರವೇಶ ಎಲ್ಲವನ್ನು ಬದಲಿಸಿದೆ’ ಎನ್ನುತ್ತಾರೆ ಗುರುದತ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.