ಭಾನುವಾರ, ಸೆಪ್ಟೆಂಬರ್ 19, 2021
23 °C
ಭದ್ರೆಗೆ ಬಾಗಿನ ಅರ್ಪಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ

ಮೇಕೆದಾಟು; ಪಕ್ಷದ ಮುಖಂಡರ ಹೇಳಿಕೆಗಳಿಗಿಲ್ಲ ಮಾನ್ಯತೆ: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮೇಕೆದಾಟು ಯೋಜನೆ ವಿಚಾರದಲ್ಲಿ ಪಕ್ಷದ ಮುಖಂಡರ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗದು. ರಾಜ್ಯದ ಜನರ ಹಿತಾಸಕ್ತಿ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.

ಭದ್ರಾ ಜಲಾಶಯಕ್ಕೆ ಶನಿವಾರ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

ಪಕ್ಷದ ಹಿತಾಸಕ್ತಿಗಳು ಆಯಾ ಪ್ರದೇಶಗಳ ಜನರ ಭಾವನೆಯ ಪ್ರತೀಕವಗಿರುತ್ತವೆ. ಸರ್ಕಾರ ರಾಜ್ಯದ ಸಮಸ್ತ ಜನರ ಹಿತಾಸಕ್ತಿ ಕಾಪಾಡಲು ಶ್ರಮಿಸುತ್ತದೆ. ತಮಿಳುನಾಡು ಏನೇ ವಿರೋಧ ವ್ಯಕ್ತಪಡಿಸಿದರೂ ಮೇಕೆದಾಟು ವಿಚಾರದಲ್ಲಿ ದೃಢ ನಿರ್ಧಾರ ಮಾಡಲಾಗಿದೆ. ಕುಡಿಯುವ ನೀರು, ಜಲ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದರು.

ಕೆರೆಕಟ್ಟೆ, ಕಾಲುವೆಗಳು, ನದಿ-ನಾಲೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ಪ್ರವಾಹಗಳು ಸೃಷ್ಟಿಯಾಗುತ್ತಿವೆ. ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ಇದಕ್ಕೆ ಮನುಷ್ಯನ ದುರಾಸೆ ಕಾರಣ ಪೂರ್ವಜರು ದೂರದೃಷ್ಟಿಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹಕ್ಕೆ ಮುಂದಾಗಿದ್ದರು. ಹಾಗಾಗಿಯೇ ಇಂದು ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ಹಾಗೂ ಕುಡಿಯುವ ನೀರು ಬಳಸಲು ಸಾಧ್ಯವಾಗುತ್ತಿದೆ. ಅಮೂಲ್ಯ ಜಲಾಶಯಗಳು, ಕೆರೆಕಟ್ಟೆಗಳನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಶೇ 35ರಷ್ಟು ನೀರು ಬಳಕೆಯಾಗದೆ ವ್ಯರ್ಥವಾಗಿ ಹೋಗುತ್ತಿದೆ. ಸದ್ವಿನಿಯೋಗಪಡಿಸಿಕೊಳ್ಳಬೇಕು. ಅಂತೆಯೇ ಕಡಿಮೆ ನೀರು ಬಳಸಿ, ಹೆಚ್ಚಿನ ಬೆಳೆ ಬೆಳೆಯಬೇಕು. ಭದ್ರಾ ಜಲಾಶಯ 2.61ಲಕ್ಷ ಎಕರೆಗೆ ನೀರು ಒದಗಿಸಿದೆ. ಇದರಿಂದ ಅಸಂಖ್ಯಾತ ರೈತರ ಬದುಕು ಹಸನಾಗಿದೆ ಎಂದರು.

ಸರ್ಕಾರದ ಹಲವು ಯೋಜನೆಗಳಲ್ಲಿ ಲಾಭ ಪಡೆದುಕೊಳ್ಳುವ ರೈತರೂ ಸರ್ಕಾರದ ಪರ ನಿಲುವು ತಾಳಬೇಕು. ಸರ್ಕಾರದ ಯೋಜನೆಗಳಿಗೆ ಸಹಕಾರ ನೀಡಬೇಕು. ಸರ್ಕಾರವು ನೀರಾವರಿ ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಅಂತೆಯೇ ರೈತರು ತಮ್ಮ ಜಮೀನಿಗೆ ವಾರ್ಷಿಕ ಕರ ಪಾವತಿಸಬೇಕು. ಇದು ನದಿ-ನಾಲೆಗಳ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಕೋರಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆ ತುಂಬಿಸುವ 19 ಯೋಜನೆಗಳಿಗೆ ₹ 4,900 ಕೋಟಿ ಖರ್ಚು ಮಾಡಲಾಗುತ್ತಿದೆ. ಈಗಾಗಲೇ 267 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟೀಯ ಯೋಜನೆಯಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಆರ್ಥಿಕ ಲಭ್ಯತೆಯ ಆಧಾರದ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಭದ್ರಾ ಜಲಾಶಯದ ಬಳಿ ₹ 2 ಕೋಟಿ ವೆಚ್ಚದಲ್ಲಿ ವಸತಿಗೃಹ ನಿರ್ಮಿಸಲಾಗುವುದು ಎಂದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ನೆರೆಯ ಜಿಲ್ಲೆಗಳ ಜನರ ಜೀವನಾಡಿ ಭದ್ರಾ ಜಲಾಶಯ ಕೃಷಿ ಚಟುವಟಿಕೆ ಮತ್ತು ದಾಹ ಇಂಗಿಸುವಲ್ಲಿ ಸಹಕಾರಿಯಾಗಿದೆ. ಭದ್ರಾ ಜಲಾಶಯದ ನೀರು ಹೆಚ್ಚಿನ ಜಿಲ್ಲೆಗಳಿಗೆ ಹರಿಸುವ ಯೋಜನೆಗಳನ್ನು ಕೈಗೊಂಡಲ್ಲಿ ಈಗಿರುವ ಜಿಲ್ಲೆಗಳ ಕೃಷಿಕರು ಹಾಗೂ ಸಾರ್ವಜನಿಕರಿಗೆ ನೀರಿನ ಅಡಚಣೆಯಾಗುತ್ತದೆ. ಅದಕ್ಕಾಗಿ ತುಂಗಾ ಜಲಾಶಯದ ನೀರು ಭದ್ರಾ ಮೇಲ್ದಂಡೆಗೆ ಬಳಸಿಕೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಭಾರತೀಯ ಸಂಸ್ಕಂತಿ ಮತ್ತು ಪರಂಪರೆಯಲ್ಲಿ ನದಿ ಮತ್ತು ಪ್ರಕೃತಿಗಳಿಗೆ ಪೂಜ್ಯಸ್ಥಾನ ನೀಡಲಾಗಿದೆ. ‘ಕಾಡಾ’ ಅಧ್ಯಕ್ಷರ ಅವಿರತ ಪ್ರಯತ್ನದಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ರೈತರಿಗೂ ನೀರು ಒದಗಿಸುವ ಪ್ರಯತ್ನ ಫಲಕಾರಿಯಾಗಿದೆ ಎಂದರು.

ಶಾಸಕರಾದ ಎಸ್‌.ಎ.ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಸ್‌.ವಿ.ರಾಮಚಂದ್ರ, ಎಂ.ಪಿ.ರೇಣುಕಾಚಾರ್ಯ, ಕೆ.ಬಿ.ಅಶೋಕನಾಯ್ಕ, ವಿಧಾನ ಪರಿಷತ್ ಸದಸ್ಯ ಎಸ್‌.ರುದ್ರೇಗೌಡ, ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ‘ಸೂಡಾ’ ಅಧ್ಯಕ್ಷ ಜ್ಯೋತಿ ಪ್ರಕಾಶ್‌ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು