ಸೋಮವಾರ, ನವೆಂಬರ್ 30, 2020
24 °C

20ರಿಂದ ಭದ್ರಾ ನಾಲೆ ನೀರು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಭದ್ರಾ ನಾಲೆಗಳಿಗೆ ಹರಿಸುತ್ತಿರುವ ನೀರು ನ.20ರಿಂದ ನಿಲ್ಲಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬುಧವಾರ ನಡೆದ ಸಲಹಾ ಸಮಿತಿ ಸಭೆ ಒಮ್ಮತದ ನಿರ್ಧಾರ ಕೈಗೊಂಡಿತು.

ಭದ್ರಾ ಜಲಾಶಯದ ಎಡ ಮತ್ತು ಬಲ ನಾಲೆಗಳ ಮೂಲಕ ಮುಂಗಾರು ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಜುಲೈ 22ರಿಂದ ನೀರು ಹರಿಸಲಾಗಿತ್ತು. ಪ್ರಾಧಿಕಾರದ ಬೈಲಾ ಪ್ರಕಾರ 120 ದಿನಗಳು ನಿರಂತರವಾಗಿ ನೀರು ಹರಿಸಲು ಅವಕಾಶವಿದೆ. ನವೆಂಬರ್‌ 19ಕ್ಕೆ ಅವಧಿ ಪೂರ್ಣಗೊಳ್ಳಲಿದೆ. ಅಧಿಕಾರಿಗಳು, ರೈತ ಮುಖಂಡರ ಜತೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ನ.20ರಿಂದ ನೀರು ನಿಲುಗಡೆ ಮಾಡಲು ಸಮಿತಿ ನಿರ್ಧರಿಸಿತು.

ಭದ್ರಾ ನಾಲೆ ಆಧುನೀಕರಣದಿಂದ ನೀರಿನ ಉಳಿತಾಯ ಆಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ನೀರು ಒದಗಿಸಲು ಒಪ್ಪಿಗೆ ನೀಡಲಾಗಿತ್ತು. ಆಧುನೀಕರಣ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಕೊನೆ ಭಾಗದಲ್ಲಿ ರೈತರ ಸಮಸ್ಯೆ ಎಂದಿನಂತೆ ಮುಂದುವರಿದಿದೆ. ಹಾಗಾಗಿ, 12.5 ಟಿಎಂಸಿ ಅಡಿ ನೀರು ಹರಿಸುವ ನಿರ್ಧಾರ ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ರೈತ ಮುಖಂಡ ತೇಜಸ್ವಿ ವಿ. ಪಟೇಲ್‌ ಎಚ್ಚರಿಸಿದರು.

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳನ್ನು ಇಲಾಖೆಗೆ ನೀಡಬೇಕು. ಜಿಲ್ಲಾ ಪಂಚಾಯಿತಿ ಮಾದರಿಯಲ್ಲಿ ₹ 5ಲಕ್ಷ ವರೆಗಿನ ತುಂಡು ಗುತ್ತಿಗೆ ಪದ್ಧತಿ ಜಲ ಸಂಪನ್ಮೂಲ ಇಲಾಖೆಯಲ್ಲೂ ಜಾರಿ ಮಾಡಬೇಕು. ನೀರು ಗಂಟಿಗಳ ವೇತನ ಟೆಂಡರ್ ಬದಲು ನೀರು ಬಳಕೆದಾರ ಸಹಕಾರ ಸಂಘಗಳ ಮೂಲಕ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ‘ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ನಾಲೆಯ ಕಾಮಗಾರಿ ತ್ವರಿತಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಭದ್ರಾ ನೀರನ್ನೇ ಮೇಲ್ದಂಡೆ ಯೋಜನೆಗೆ ನೀಡಬೇಕಾಗುತ್ತದೆ. ವಿಳಂಬ ಮಾಡಬಾರದು’ ಎಂದು ತಾಕೀತು ಮಾಡಿದರು.

‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ರೈತರು ನೀರಿನ ಮಿತ ಬಳಕೆ ಮಾಡಬೇಕು. ಭವಿಷ್ಯದಲ್ಲಿ ನೀರಿನ ಕೊರತೆಯಾದರೂ ಸಮಸ್ಯೆಯಾಗದಂತೆ ಅಗತ್ಯ ಬೆಳೆ ಬೆಳೆಯಬೇಕು ಎಂದು ಕೋರಿದರು.

‘ಕಾಡಾ’ ನಿರ್ದೇಶಕರಾದ ಷಡಾಕ್ಷರಿ, ರುದ್ರಮೂರ್ತಿ, ರೈತ ಮುಖಂಡರಾದ ತೇಜಸ್ವಿ ಪಟೇಲ್‌, ನೀರು ಬಳಕೆದಾರರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ  ದ್ಯಾವಪ್ಪ ರೆಡ್ಡಿ, ಮುಖ್ಯ ಎಂಜಿನಿಯರ್ ಯತೀಶ್‌ಚಂದ್ರ, ಆಡಳಿತಾಧಿಕಾರಿ ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.