ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿಯಲ್ಲಿ ಸಾಗಿದೆ ಮನೆ ಮನೆಗೆ ನಳ ಸಂಪರ್ಕ

ಭದ್ರಾವತಿ: ಏಳು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ
ಕಿರಣ್ ಕುಮಾರ್
Published 21 ಏಪ್ರಿಲ್ 2024, 7:11 IST
Last Updated 21 ಏಪ್ರಿಲ್ 2024, 7:11 IST
ಅಕ್ಷರ ಗಾತ್ರ

ಭದ್ರಾವತಿ: ನಗರದಲ್ಲಿ ಮನೆ ಮನೆಗೆ ನಳದ (ನಲ್ಲಿ) ಸಂಪರ್ಕ ಕಲ್ಪಿಸಿ ದಿನದ 24 ಗಂಟೆಯೂ ನೀರು ಪೂರೈಕೆ ಮಾಡುವ ಯೋಜನೆ ಏಳು ವರ್ಷ ಕಳೆದರೂ ಆಮೆಗತಿಯಲ್ಲಿ ಸಾಗಿದೆ.

ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 2017ರಲ್ಲಿಯೇ ನಗರಸಭೆ ಈ ಯೋಜನೆಗೆ ಚಾಲನೆ ನೀಡಿತ್ತು. ಭದ್ರಾವತಿಯಲ್ಲಿ 28,000 ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, 2022ಕ್ಕೆ ಕಾಮಗಾರಿ ಸಂಪೂರ್ಣಗೊಳ್ಳಬೇಕಿತ್ತು. 

ಶೇ 90ರಷ್ಟು ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿದ್ದಾರೆ. ನಳಗಳು ಕಾಣಸಿಗುತ್ತವೆಯಾದರೂ, ಅವುಗಳಿಗೆ ನೀರಿನ ಸಂಪರ್ಕವೇ ಇಲ್ಲವಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, ಕೆಲವು ವಾರ್ಡ್‌ಗಳಲ್ಲಿ ಮಾತ್ರ ವಾಟರ್ ಮೀಟರ್‌ಗೆ ಅನುಗುಣವಾಗಿ ಪೈಪ್‌ಲೈನ್ ಅಳವಡಿಸಲಾಗಿದೆ. ವಾರ್ಡ್ ನಂಬರ್ 2 ಮತ್ತು 7ರಲ್ಲಿ ಪೈಪ್‌ಲೈನ್ ಬದಲಾವಣೆ ಕಾರ್ಯಕ್ಕೆ ಚಾಲನೆ ದೊರೆಯಬೇಕಿದೆ.

ನಗರ ಪ್ರದೇಶದ ಹಲವು ಭಾಗಗಳಲ್ಲಿ ಕುಡಿಯುವ ನೀರು ಪೋಲಾಗುತ್ತಿದೆ. ನಲ್ಲಿಗಳಲ್ಲಿ ನಗರಸಭೆಯಿಂದ ಬಿಡಲಾಗುವ ನೀರನ್ನು ಅವಶ್ಯತೆಗೆ ತಕ್ಕಂತೆ ಬಳಸಿ, ನಂತರದ ನೀರನ್ನು ಪೋಲಾಗದಂತೆ ಸಾರ್ವಜನಿಕರು ನಿಗಾ ವಹಿಸಬೇಕಿದೆ.

ಇದಕ್ಕೆ ತಕ್ಕಂತೆ ನಗರದಾದ್ಯಂತ ಅಳವಡಿಸುತ್ತಿರುವ ವಾಟರ್ ಮೀಟರ್ ಯೋಜನೆ ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕಿದೆ. ಕೆಲವು ಭಾಗಗಳಲ್ಲಿ ಅಳವಡಿಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರಾದ ವಿಶ್ವಾಸ್ ಹೇಳುತ್ತಾರೆ.

ನಗರದ ನ್ಯೂಟೌನ್ ಭಾಗದಲ್ಲಿ ಪೈಪ್‌ಲೈನ್‌ಗಳ ಬದಲಾವಣೆ ಕಾರ್ಯ ಸಂಪೂರ್ಣಗೊಂಡಿದ್ದು, ಹಳೆ ನಗರದ ಕೆಲವು ಭಾಗಗಳಲ್ಲಿ ಕೆಲಸ ಬಾಕಿ ಉಳಿದಿವೆ.

ಪೈಪ್‌ಲೈನ್ ಬದಲಾವಣೆ ಪೂರ್ಣಗೊಂಡಂತಹ ನಲ್ಲಿಗಳಿಗೆ ಮೀಟರ್ ಬೋರ್ಡ್ ಅಳವಡಿಕೆ ಮಾಡಬೇಕಿದೆ. ಸದ್ಯದ ಮಟ್ಟಿಗೆ ನೂತನವಾಗಿ ಅಳವಡಿಸಿರುವ ಪೈಪ್‌ಲೈನ್ ಮೂಲಕ ಮೀಟರ್ ಇಲ್ಲದೆ ನೀರು ಹರಿಸಲಾಗುತ್ತಿದೆ.

ನಗರಸಭೆ ಸಾರ್ವಜನಿಕ ಮನೆಗಳಿಗೆ ತಿಂಗಳಿಗೆ ಕನಿಷ್ಠ ನೀರಿನ ದರ ₹120 ಮತ್ತು ಕಮರ್ಷಿಯಲ್ ಸಂಪರ್ಕಕ್ಕೆ ₹480 ದರ ನಿಗದಿಪಡಿಸಿದೆ.

₹45 ಕೋಟಿ ವೆಚ್ಚದಲ್ಲಿ ಈ ಯೋಜನೆ ಕಾರ್ಯಾರಂಭಗೊಂಡಿದ್ದು, ತಾಂತ್ರಿಕವಾಗಿ ಎಲ್ಲಾ ರೀತಿಯಿಂದಲೂ ತಯಾರಾಗಿದ್ದು, ಕೆಲವೊಂದು ಯಾಂತ್ರಿಕ ಉಪಕರಣಗಳ ಕೊರತೆ ಇದೆ. ಮೊದಲ ಅನುಮೋದನೆಯ ಯೋಜನಾ ಪಟ್ಟಿಯಲ್ಲಿ ಕೆಲ ಉಪಕರಣಗಳನ್ನು ಬಿಡಲಾಗಿತ್ತು. ಅವುಗಳನ್ನು ಈ ಬಾರಿಯ ಅನುಮೋದನೆಯಲ್ಲಿ ಸೇರಿಸಲಾಗಿದೆ.

ಅನುದಾನ ಬಿಡುಗಡೆಯಾದೊಡನೆ ಮುಂದಿನ ದಿನಗಳಲ್ಲಿ ಯೋಜನೆ ಸಂಪೂರ್ಣಗೊಳಿಸಿ, ಬದಲಿಸಿರುವ ಪೈಪ್‌ಲೈನ್‌ಗಳಿಗೆ ಮೀಟರ್ ಬೋರ್ಡ್‌ಗಳನ್ನು ಅಳವಡಿಸಿ, ಸಾರ್ವಜನಿಕವಾಗಿ ಉಪಯೋಗಿಸಲು ಶೀಘ್ರವಾಗಿ ಸಜ್ಜುಗೊಳಿಸಲಾಗುವುದು ಎಂದು ನಗರಸಭೆಯ ಎಂಜಿನಿಯರ್ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಳಗಳಿಗೆ ಮೀಟರ್ ಇಲ್ಲದ ಹಲವು ಮನೆಗಳಲ್ಲಿ ನೀರು ಪೋಲಾಗುತ್ತಿರುವುದು
ನಳಗಳಿಗೆ ಮೀಟರ್ ಇಲ್ಲದ ಹಲವು ಮನೆಗಳಲ್ಲಿ ನೀರು ಪೋಲಾಗುತ್ತಿರುವುದು
ಪ್ರಕಾಶ್ ಎಂ.ಚನ್ನಪ್ಪನವರ್
ಪ್ರಕಾಶ್ ಎಂ.ಚನ್ನಪ್ಪನವರ್
ಕಾಮಗಾರಿ ಮುಗಿಯುತ್ತಾ ಬಂದಿದೆ. ಒಂದೆರಡು ಭಾಗಗಳಲ್ಲಿ 40 ರಿಂದ 50 ವರ್ಷದ ಹಳೆ ವಾಟರ್ ಟ್ಯಾಂಕ್‌ಗಳಿವೆ. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಕೆಡವಿ ನೂತನ ವಾಟರ್ ಟ್ಯಾಂಕ್ ನಿರ್ಮಿಸುವ ಯೋಜನೆ ಬಾಕಿ ಇದೆ
ಪ್ರಕಾಶ್ ಎಂ. ಚನ್ನಪ್ಪನವರ್ ಭದ್ರಾವತಿ ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT