ಶನಿವಾರ, ಡಿಸೆಂಬರ್ 3, 2022
21 °C
ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮ: ದೇಶದಲ್ಲಿಯೇ ಮೊದಲ ಪ್ರಯತ್ನ

ಕಾಟಿ ಸಫಾರಿ: ಪ್ರಾಯೋಗಿಕ ಚಾಲನೆ ಇಂದು

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ದೇಶದ ಮೊದಲ ಕಾಡುಕೋಣ (Gour) ಸಫಾರಿಗೆ ಇಲ್ಲಿನ ತ್ಯಾವರೆಕೊಪ್ಪದ ಹುಲಿ–ಸಿಂಹ ಧಾಮ ಸಿದ್ಧವಾಗಿದೆ. ನ. 1ರಂದು ಕರ್ನಾಟಕ ರಾಜ್ಯೋತ್ಸವದ ದಿನ ಪ್ರವಾಸಿಗರಿಗೆ ಪ್ರಾಯೋಗಿಕವಾಗಿ ಕಾಟಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಕಾಟಿಗಳನ್ನು ಸಂರಕ್ಷಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಇಲ್ಲಿ ಯೋಜನೆ ರೂಪಿಸಲಾಗಿದೆ. 23 ಹೆಕ್ಟೇರ್ ಪ್ರದೇಶದಲ್ಲಿ ಕಾಡಿನ ಸಹಜ ಪರಿಸ್ಥಿತಿಯಲ್ಲಿ ಸಫಾರಿ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ 20 ಕಾಟಿಗಳನ್ನು ಬಿಡಲಾಗುತ್ತಿದೆ. ಅದರಲ್ಲಿ 13 ಕಾಡುಕೋಣ, ಏಳು ಕಾಡೆಮ್ಮೆ ಸೇರಿವೆ ಎಂದು ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮುಕುಂದ್ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಟಿ ಮೂಲತಃ ಪಶ್ಚಿಮಘಟ್ಟದ ತಳಿ. ಅವುಗಳನ್ನು ನೋಡಲು ಆಸಕ್ತರು ಕಾಡಿಗೆ ಹೋಗಬೇಕು. ಅಲ್ಲಿ ಕಾಯಬೇಕು. ಸಿಕ್ಕರೆ ಸಿಗುತ್ತವೆ, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿ ಇದೆ. ಹೀಗಾಗಿ ಸಫಾರಿ ಆರಂಭಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ಮೂರ್ನಾಲ್ಕು ತಿಂಗಳುಗಳಿಂದ ಮೈಸೂರಿನ ಮೃಗಾಲಯದಿಂದ ಇಲ್ಲಿಗೆ ಕಾಟಿಗಳನ್ನು ಹಂತ ಹಂತವಾಗಿ ತರಲಾಗಿದೆ’ ಎಂದರು.

ಡ್ರೈಮೋಟ್ ತಾಂತ್ರಿಕತೆ ಅಳವಡಿಕೆ: ತ್ಯಾವರೆಕೊಪ್ಪ ಸಫಾರಿಯಲ್ಲಿ ಕಾಟಿಗಳ ರಕ್ಷಣೆಗೆ ಬೇಲಿ ಇರುವುದಿಲ್ಲ. ಬದಲಿಗೆ, ಡ್ರೈಮೋಟ್ ತಾಂತ್ರಿಕತೆಯಲ್ಲಿ 2.5 ಕಿ.ಮೀ ದೂರ, ನೆಲದೊಳಗೆ ಕಂದಕ ನಿರ್ಮಿಸಲಾಗಿದೆ. ಮೂರು ಮೀಟರ್ ಆಳ ಹಾಗೂ ಅಷ್ಟೇ ಅಗಲದ ಕಂದಕಗಳಿಗೆ ಮಣ್ಣು ಜರುಗದಂತೆ ಸಿಮೆಂಟ್‌ ಕಾಂಕ್ರೀಟ್‌ನ ರಕ್ಷಣೆ ಒದಗಿಸಲಾಗಿದೆ. ನೈಜ ವಾತಾವರಣದಲ್ಲಿ ಕಾಟಿಗಳನ್ನು ನೋಡಿದ ಅನುಭವ ಪ್ರವಾಸಿಗರಿಗೆ ಬರಬೇಕು ಎಂಬ ಕಾರಣಕ್ಕೆ ಈ ಪ್ರಯತ್ನ. ಹೊರಗಿನಿಂದ ನೋಡುವ ಪ್ರವಾಸಿಗರಿಗೆ ಯಾವುದೇ ಬೇಲಿ ಕಾಣಿಸುವುದಿಲ್ಲ. ಆದರೆ ಅವು ಒಳಗೆ ದ್ವೀಪದಲ್ಲಿ ಇರಲಿವೆ ಎಂದು ಮುಕುಂದ್ ಚಂದ್ರ ತಿಳಿಸಿದರು.

‘ಈ ಕಂದಕ ಕಾಡಿನ ಕಡೆ ಇಳಿಜಾರು ರೂಪದಲ್ಲಿ ಇರಲಿದೆ. ತಲಾ 50, 100 ಮೀಟರ್‌ಗೆ ರ‍್ಯಾಂಪ್‌ ನಿರ್ಮಿಸಲಾಗುತ್ತಿದೆ. ಇದರಿಂದ ಕಾಟಿಗಳು ಸುಲಭವಾಗಿ ಕಂದಕಕ್ಕೆ ಇಳಿದು ಮತ್ತೆ ಮೇಲಕ್ಕೆ ಹತ್ತಲಿವೆ’ ಎಂದು ಹೇಳಿದರು.

ಹುಲಿ–ಸಿಂಹ ಧಾಮ: ವೀಕ್ಷಣೆಗೆ ಅವಕಾಶ ಇಂದು

ಕರ್ನಾಟಕ ರಾಜ್ಯೋತ್ಸವದ ದಿನ ರಜೆ ಇದ್ದರೂ ತ್ಯಾವರೆಕೊಪ್ಪದ ಹುಲಿ–ಸಿಂಹ ಧಾಮ ಎಂದಿನಂತೆಯೇ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಂದ್ ಚಂದ್ರ ತಿಳಿಸಿದರು.

ರಜೆಯ ದಿನ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ತ್ಯಾವರೆಕೊಪ್ಪದಲ್ಲಿ ಕಾಟಿ ಸಫಾರಿ ಆರಂಭದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ರಾಷ್ಟ್ರದ ಪ್ರವಾಸೋದ್ಯಮ ಕೇಂದ್ರವಾಗಿಸಲು ಶಕ್ತಿ ಬಂದಂತೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ.

-ಬಿ.ವೈ. ರಾಘವೇಂದ್ರ, ಶಿವಮೊಗ್ಗ ಸಂಸದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು