ಭಾನುವಾರ, ಅಕ್ಟೋಬರ್ 25, 2020
27 °C

ಕೃಷಿ ಮಸೂದೆ: ನ.31ರವರೆಗೂ ಬಿಜೆಪಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನೂತನ ಕೃಷಿ ಮಸೂದೆ ಉಪಯೋಗ ಕುರಿತು ರೈತರಿಗೆ ಸೂಕ್ತ ಮಾಹಿತಿ ತಲುಪಿಸಲು ಅ.10ರಿಂದ ನ.31ರವರೆಗೆ ರಾಜ್ಯದ ಎಲ್ಲೆಡೆ ರೈತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಡಾ.ನವೀನ್ ಕುಮಾರ್ ತಿಳಿಸಿದರು.

ಅ.10ರಿಂದ ನ.10ರವರೆಗೆ ರೈತ ಮೋರ್ಚಾದ ರಾಜ್ಯ ಪದಾಧಿಕಾರಿಗಳು ತಮ್ಮ ವಿಭಾಗಗಳ ಜಿಲ್ಲಾ ಪ್ರವಾಸ ಕೈಗೊಳ್ಳುವರು. ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ಕನಿಷ್ಠ ಜಿಲ್ಲೆಯ 10 ಗ್ರಾಮಗಳ ಸಭೆಗಳಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಅ.18ರಿಂದ 31ರವರೆಗೆ ರೈತ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ಎಲ್ಲ ಮಂಡಲಗಳಲ್ಲಿ ಪದಾಧಿಕಾರಿಗಳ ಸಭೆ, ಪ್ರತಿ ಮಂಡಲಗಳಲ್ಲಿ ಕನಿಷ್ಠ 5 ಗ್ರಾಮ ಸಭೆಗಳು, ಅ.25ರಿಂದ 31ರವರೆಗೆ ಮಂಡಲ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸಭೆಗಳನ್ನು ನಡೆಸುತ್ತಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಗತಿಪರ ರೈತರು, ಹೋರಾಟಗಾರರು, ವಿಚಾರವಾದಿಗಳು ಹಾಗೂ ಗ್ರಾಮದ ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಿ ಮಸೂದೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.  ನ.10ರಿಂದ 31ರವರೆಗೆ ರೈತರ ಪರ ನಿಲುವು ತೆಗೆದುಕೊಂಡ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ರೈತರಿಂದ ಅಭಿನಂದನಾ ಪತ್ರ ಬರೆಸುವ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನ.10ರಿಂದ 31ರವರೆಗೆ ರೈತ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರ ಕೃಷಿಕರ ಕಲ್ಯಾಣಕ್ಕಾಗಿ ಹಲವು ಮಸೂದೆಗಳಿಗೆ ತಿದ್ದುಪಡಿ ಮಾಡಿದೆ. ರೈತರ ಆರ್ಥಿಕ ಸಬಲೀಕರಣಕ್ಕಾಗಿ ಐತಿಹಾಸಿಕ ರೈತಪರ ನಿಲುವು ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳಿಂದ ಕೃಷಿ ಉತ್ಪನ್ನಗಳ ದಾಸ್ತಾನು, ಸಂಗ್ರಹ, ಸಾಗಣೆ, ಆಹಾರ ಸಂಸ್ಕರಣೆ ಹಾಗೂ ರಫ್ತಿಗೆ ಅವಕಾಶವಿದೆ. ಎಪಿಎಂಸಿ ಮಂಡಿಗಳ ಹೊರತಾಗಿಯೂ ಬೇರೆ ಜಿಲ್ಲೆ, ಬೇರೆ ರಾಜ್ಯಗಳಲ್ಲೂ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿರುತ್ತದೆ. ಎಪಿಎಂಸಿಗಳ ಮೇಲೆ ನಿಷೇಧ ಹೇರಿಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಏರಿಕೆಯಾದರೆ ನೇರವಾಗಿ ರೈತರಿಗೆ ಲಾಭ ಸಿಗುತ್ತದೆ. ಬೆಲೆ ಕುಸಿದರೆ ಸರ್ಕಾರ ಬೆಂಬಲ ಬೆಲೆಯ ನೆರವು ಸಿಗಲಿದೆ. ಭೂಸುಧಾರಣೆ ತಿದ್ದುಪಡಿ ಕಾರಣ ಕೃಷಿ ಭೂಮಿ ಖರೀದಿಗೆ ಹೆಚ್ಚು ಅವಕಾಶ ಸಿಗಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಮಂಡೇನಕೊಪ್ಪ ಗಂಗಾಧರ್, ಕೃಷ್ಣೋಜಿರಾವ್, ಹಾಲೇಶ್, ವಿನ್ಸೆಂಟ್ ರೋಡ್ರಿಗಸ್, ಬೇಳೂರು ತಿಮ್ಮಪ್ಪ, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು