ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಾಮಾನ್ಯ ಕಾರ್ಯಕರ್ತನೂ‌ ಪ್ರಧಾನಿ ಸ್ಥಾನಕ್ಕೆ ಅರ್ಹ: ಬಿ.ವೈ. ರಾಘವೇಂದ್ರ

Published 29 ಜನವರಿ 2024, 14:27 IST
Last Updated 29 ಜನವರಿ 2024, 14:27 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೂ ಪ್ರಧಾನ ಮಂತ್ರಿ ಸ್ಥಾನಕ್ಕೆ ಅರ್ಹರು. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳ ಕುರಿತ ಜನ ಸಾಮಾನ್ಯರಿಗೆ ತಿಳಿಸಲು ಇಲ್ಲಿನ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ಗಾಂವ್ ಚಲೋ’ ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಅನೇಕ ಯೋಜನೆಗಳಿಗೆ ಶಕ್ತಿ ತುಂಬಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು, ಅಯೋಧ್ಯೆ ರಾಮ ಮಂದಿರ ಸೇರಿದಂತೆ ಜನ ಸಾಮಾನ್ಯರಿಗೆ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಇದೆಲ್ಲದಕ್ಕೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ದೊರೆಯಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬಿಜೆಪಿ ಪಧಾದಿಕಾರಿಗಳಿಗೆ ಉತ್ತಮ ಸ್ಥಾನ–ಮಾನ ಲಭಿಸಿದೆ. ಅದರಡಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಶಕ್ತಿ ತುಂಬುವ ಕಾರ್ಯ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆ ಹಾಕೋಣ’ ಎಂದು ಸಲಹೆ ನೀಡಿದರು.

‘ಲೋಕಸಭೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಇದಕ್ಕೆ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟುವ ಕಾರ್ಯ ಆಗಬೇಕು. ಅದೇ ಉದ್ದೇಶಕ್ಕೆ ಜಿಲ್ಲೆಯಲ್ಲಿ ಪಕ್ಷದಿಂದ ಹೊಸ ಪಡೆ ಕಟ್ಟಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

ಜಿಲ್ಲೆಯ ಪ್ರತಿ ಬೂತ್‌ ಮಟ್ಟದಲ್ಲಿ ಜನವರಿ 30 ಮತ್ತು 31ರಂದು ಗೋಡೆ ಬರಹ ಕಾರ್ಯಕ್ರಮ ರೂಪಿಸಲಾಗಿದೆ. ‘ಗಾಂವ್ ಚಲೋ ಕಾರ್ಯಕ್ರಮ ಫೆಬ್ರುವರಿ 4ರಿಂದ ಫೆ.12ರವರೆಗೆ ನಡೆಯಲಿದೆ. ಕಾರ್ಯಕರ್ತರು ಸಕ್ರಿಯವಾಗಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.

‘ಜಿಲ್ಲೆಯ ಅಭಿವೃದ್ಧಿಗೆ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ಮೀರಿ ಶ್ರಮಿಸೋಣ. ಇದಕ್ಕೆ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ಲೋಕಸಭಾ ಚುನಾವಣೆ ಜಿಲ್ಲಾ ಪ್ರಭಾರ ರಘುಪತಿ ಹೇಳಿದರು.

ಬಳಿಕ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಜಿಲ್ಲಾ ಕಾರ್ಯಾಲಯವನ್ನು ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು.

ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕರಾದ ಎಸ್.ಎನ್. ಚೆನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಅಶೋಕ್ ನಾಯ್ಕ್, ಕುಮಾರಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಧನಂಜಯ್ ಸರ್ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಸಿ.ಎಚ್. ಮಾಲತೇಶ್, ಚುನಾವಣಾ ನಿರ್ವಹಣಾ ಸಮಿತಿ ಜಿಲ್ಲಾ ಸಂಚಾಲಕ ಆರ್.ಕೆ. ಸಿದ್ದರಾಮಣ್ಣ, ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ರತ್ನಾಕರ್ ಶಣೈ ಇದ್ದರು.

‘ಕೇಡುಗಾಲಕ್ಕೆ ವಿಪರೀತ ಬುದ್ಧಿ’

‘ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಾನ್ ಧ್ವಜ ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಕೇಡುಗಾಲಕ್ಕೆ ವಿಪರೀತ ಬುದ್ಧಿ ಎನ್ನುವುದನ್ನು ಸಾಬೀತುಪಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಥನಕ್ಕೆ ಅಡಿಗಲ್ಲು ಇಟ್ಟುಕೊಂಡಿದೆ. ದೇಶ ಕಟ್ಟುವ ಕಾರ್ಯ ಹಿಂದಿನಿಂದಲೂ ಬಿಜೆಪಿ ಮಾಡಿಕೊಂಡು ಬಂದಿದೆ. ಆದರೆ ಜನಪರ ಆಡಳಿತ ನಡೆಸಲು ಅಶಕ್ತವಾದ ಕಾಂಗ್ರೆಸ್ ಈ ರೀತಿಯ ಪಿತೂರಿ ಮಾಡಕೊಂಡು ಬರುತ್ತಿದೆ. ಇದಕ್ಕೆ ಜನರು ಉತ್ತರ ನೀಡುತ್ತಾರೆ’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. ಕಾಂಗ್ರೆಸ್ ಹಿಂದುತ್ವ ವಿರೋಧಿ: ಬಿವೈಆರ್ ‘ಮಂಡ್ಯದಲ್ಲಿ ಹನುಮಾನ್ ಧ್ವಜ ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಆಕ್ಷೇಪ ಇಲ್ಲ. ಆದರೆ ಕಾಂಗ್ರೆಸ್ ಹೊರತುಪಡಿಸಿ ಇಡೀ ರಾಷ್ಟ್ರವೇ ಹಿಂದುತ್ವವನ್ನು ಒಪ್ಪಿಕೊಂಡಿದೆ. ಷಡ್ಯಂತ್ರದಿಂದ ಹನುಮಾನ್ ಧ್ವಜ ಕೆಳಗಿಳಿಸಿರುವುದು ಸರಿ ಅಲ್ಲ. ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ಆದೇಶ ಆಗಿರಲಿಲ್ಲ. ಇಡೀ ದೇಶವೇ ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿದೆ. ಆದರೆ ಕಾಂಗ್ರಸ್ ಹಿಂದೂಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದು ರಾಜಕೀಯ ಪಿತೂರಿ’ ಎಂದು ಸಂಸದ ಬಿ.ವೈ. ರಾಘವೇಂದ್ರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT