ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದ ಪ್ರಗತಿಯಲ್ಲಿ ಯಡಿಯೂರಪ್ಪ ಪಾತ್ರ

ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಮಾದರಿ ಶಿವಮೊಗ್ಗ ನಿರ್ಮಾಣ
Last Updated 28 ಜುಲೈ 2021, 8:46 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ನೀಡಿದ ರಾಜೀನಾಮೆ ಜತೆಗೇ ಜಿಲ್ಲೆಯ ಅಭಿವೃದ್ಧಿ ಪರ್ವವೊಂದರ ಯುಗಾಂತ್ಯವಾಗಿದೆ. ಒಂದೂವರೆ ದಶಕಗಳ ಹಿಂದೆ ಕಿಷ್ಕಿಂಧೆಯಂತಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಇಂದು ಸುಂದರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣಕರ್ತರಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲಿಗರು.

ಶಿವಮೊಗ್ಗ ನಗರದ ರಕ್ತನಾಳದಂತಿರುವ ಬಿ.ಎಚ್‌.ರಸ್ತೆ, ನೆಹರೂ ರಸ್ತೆ, ಸವಳಂಗ ರಸ್ತೆ, ಬಾಲರಾಜ ಅರಸು ರಸ್ತೆ, ಕೋಟೆ ರಸ್ತೆ, ಬಿ.ಬಿ.ರಸ್ತೆ, ಮಿಳ್ಳಘಟ್ಟ, ಸೀಗೆಹಟ್ಟಿ, ಓ.ಟಿ.ರಸ್ತೆಗಳು ಕಿಷ್ಕಿಂಧೆ ನೆನಪಿಸುತ್ತಿದ್ದವು. ಇಂತಹ ಇಕ್ಕಟ್ಟಾದ ರಸ್ತೆಗಳ ಜನ ಸಂದಣಿಯ ಮಧ್ಯೆ ವಾಹನ ದಾಟಿಸಲು ಹರಸಾಹಸ ಪಡಬೇಕಿತ್ತು. ನಗರ ದೂಳು ಮಯವಾಗಿತ್ತು. 2006ರಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು ಮೊದಲ ಆದ್ಯತೆ ನೀಡಿದ್ದೇ ನಗರದ ರಸ್ತೆಗಳ ವಿಸ್ತರಣೆಗೆ. ಪ್ರಮುಖವಾದನೆಹರೂ ರಸ್ತೆ, ಬಿ.ಎಚ್‌.ರಸ್ತೆ, ಸವಳಂಗ ರಸ್ತೆ, ಬಾಲರಾಜ್ ಅಸರ್‌ ರಸ್ತೆ, ವಿನೋಬನಗರ, ಗೋಪಾಳ, ಸಾಗರ ರಸ್ತೆಗಳು ಸಾಕಷ್ಟು ವಿಸ್ತಾರಗೊಂಡು ದ್ವಿಪಥ ರಸ್ತೆಗಳಾದವು.

2008ರಲ್ಲಿ ಶಿವಮೊಗ್ಗ ಜಿಲ್ಲೆಯ ಅದೃಷ್ಟದ ಬಾಗಿಲು ಮತ್ತೊಂದು ಸುತ್ತು ತೆರೆದುಕೊಂಡಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರಕ್ಕೇರಿದ್ದರು. ಅಲ್ಲಿಂದ ಮೂರು ವರ್ಷಗಳ ಕಾಲ ಅಭಿವೃದ್ಧಿಯದೇಮಂತ್ರ. ಅಂದು ಯಡಿಯೂರಪ್ಪ ಕೊಟ್ಟ ಅನುದಾನ ಲೆಕ್ಕಕ್ಕೆಸಿಗದಷ್ಟು.ಬಸ್‌ ನಿಲುಗಡೆಗೂ ಸಮಸ್ಯೆ ಇದ್ದ ನಗರದಲ್ಲಿ ಇಂದು ವಿಮಾನನಿಲ್ದಾಣ ಸಿದ್ಧವಾಗುತ್ತಿದೆ.₹ 384 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ₹ 258 ಕೋಟಿ ವೆಚ್ಚದ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಸಜ್ಜಿತ ರೈಲು, ಬಸ್‌ ನಿಲ್ದಾಣಗಳಿವೆ.

₹956 ಕೋಟಿ ವೆಚ್ಚದ ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು ರೈಲು ಮಾರ್ಗ, ಶಿಕಾರಿಪುರ, ಸೊರಬ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಈಗಾಗಲೇ ₹1,300 ಕೋಟಿ ನೀಡಿದ್ದಾರೆ. ನಾಲ್ಕು ದಿನಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ₹1074 ಕೋಟಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ₹ 560 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲ್ಲೂಕಿನ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಗಳ 249 ಕೆರೆಗಳಿಗೆ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ 6 ಕೆರೆಗಳಿಗೆ ನೀರು ಒದಗಿಸುವ ₹850 ಕೋಟಿ ವೆಚ್ಚದ ನೀರಾವರಿ ಯೋಜನೆ ಪೂರ್ಣಗೊಂಡಿದೆ. ಅಂಜನಾಪುರ ಹೋಬಳಿಯ ಹೊಸಹಳ್ಳಿ ಏತ ನೀರವಾರಿ ಮುಗಿಯುತ್ತಾ ಬಂದಿದೆ.

ಶಿವಮೊಗ್ಗದ 46 ಎಕರೆ ವಿಸ್ತಾರದ ಹಳೇ ಜೈಲು ಪ್ರದೇಶದಲ್ಲಿ ₹5.35 ಕೋಟಿ ವೆಚ್ಚದಲ್ಲಿ ಫ್ರೀಡಂ ಪಾರ್ಕ್ ಸಿದ್ಧಪಡಿಸಲಾಗಿದೆ. ಸುಸಜ್ಜಿತ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಹೊರವಲಯ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಶಿವಮೊಗ್ಗ ನಗರ ರೈಲು ನಿಲ್ದಾಣದ ಬಳಿ 100 ಅಡಿ ರಿಂಗ್ ರಸ್ತೆಯನ್ನು ₹20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ₹482.84 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ಸಿದ್ಧವಾಗುತ್ತಿದೆ.

ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ನೆಲೆಗೊಳ್ಳಲು ಸರ್ಕಾರಿ ಭವನಕ್ಕೆ ₹40 ಕೋಟಿ, ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಕ್ಕೆ ₹40 ಕೋಟಿ,ವಿವಿಧ ಜಾತಿ ಸಮುದಾಯ ಭವನಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಎಲ್ಲ ತಾಲ್ಲೂಕುಗಳಲ್ಲೂ ಮೂಲ ಸೌಕರ್ಯಗಳಿಗೆ ಅನುದಾನ ನೀಡಿದ್ದಾರೆ.

ಶಿವಮೊಗ್ಗ ವೈದ್ಯಕೀಯ ಕಾಲೇಜು ಆವರಣದಲ್ಲಿ 50 ಹಾಸಿಗೆಯುಳ್ಳ ಹೃದಯ ರೋಗ ವಾರ್ಡ್‌, ಕ್ಯಾಥ್‌ಲ್ಯಾಬ್ ಲೋಕಾರ್ಪಣೆ ಮಾಡಲಾಗಿದೆ. 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಲು ವಿಶೇಷ ನೇಮಕಾತಿ ನಿಯಮ ರೂಪಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. 5 ಎಕರೆ ಪ್ರದೇಶದಲ್ಲಿ ₹ 3 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆಗೆ ಅನುದಾನ ನೀಡಿದ್ದಾರೆ.

ಸುಮಾರು ₹ 15 ಕೋಟಿ ವೆಚ್ಚದಲ್ಲಿ ಸಹ್ಯಾದ್ರಿ ಕಾಲೇಜು, ವಿದ್ಯಾರ್ಥಿನಿಲಯ, ಕಟ್ಟಡ ದುರಸ್ತಿ, ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಅಭಿವೃದ್ಧಿಗೆ ₹ 12 ಕೋಟಿ ನೀಡಲಾಗಿದೆ. ಸಾಗರ ತಾಲ್ಲೂಕಿನ ಇರುವಕ್ಕಿಯ 750 ಎಕರೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ₹ 290 ಕೋಟಿ ವೆಚ್ಚದಲ್ಲಿ ಸಿದ್ಧವಾಗಿದೆ.

ಶಿವಮೊಗ್ಗ, ಶಿಕಾರಿಪುರ, ಆನವಟ್ಟಿ ರಸ್ತೆಯ ವೈಜ್ಞಾನಿಕ ಅಭಿವೃದ್ಧಿ ಹಾಗೂ ಭೂ ಸ್ವಾಧೀನಕ್ಕಾಗಿ ₹ 29.53 ಕೋಟಿ ಬಿಡುಗಡೆಯಾಗಿದೆ. ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ₹ 185 ಕೋಟಿ ವೆಚ್ಚದಲ್ಲಿ 24 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಕ್ರೇಬೈಲಿನ ಆನೆ ಬಿಡಾರದಲ್ಲಿ ಜೈವಿಕ ಉದ್ಯಾನ ನಿರ್ಮಾಣಗೊಳ್ಳಲಿದೆ. ಆನೆ ಕ್ಯಾಂಪ್, ದ್ವೀಪ, ಬೋಟಿಂಗ್, ಸಫಾರಿ ಟ್ರ್ಯಾಕ್‌ ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT