ಶಿವಮೊಗ್ಗ: ‘ಶಿಕಾರಿಪುರ– ಶಿವಮೊಗ್ಗ– ಶಿರಾಳಕೊಪ್ಪ ರಸ್ತೆಯಲ್ಲಿ ಟೋಲ್‌ಗೇಟ್ ಆರಂಭಿಸಿದ್ದೇ ಬಿಜೆಪಿ ನೇತೃತ್ವದ ಸರ್ಕಾರ. ಈಗ ರೈತ ಮೋರ್ಚಾ ಹೆಸರಲ್ಲಿ ಅದರ ವಿರುದ್ಧ ಹೋರಾಟ ಮಾಡುತ್ತಿರುವುದೇ ಹಾಸ್ಯಾಸ್ಪದ. ಜಾತ್ರೆಯಲ್ಲಿ ಕಳ್ಳ ತನ್ನನ್ನು ಹಿಡಿಯಲು ಬಂದಾಗ ತಾನೇ ಕಳ್ಳ ಕಳ್ಳ ಎಂದು ಕೂಗುತ್ತ ಓಡಿ ಹೋದ ರೀತಿ ಜನರು ತಮ್ಮ ವಿರುದ್ಧ ತಿರುಗಿ ಬೀಳುವ ಮೊದಲು ಬಿಜೆಪಿಯವರು ಹೋರಾಟ ಆರಂಭಿಸಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಲೇವಡಿ ಮಾಡಿದರು.
‘ಬಿಜೆಪಿಯವರಿಗೆ ಅಲ್ಲಿ ಟೋಲ್‌ಗೇಟ್ ಹಾಕಬೇಕು ಎಂಬ ದುರಾಲೋಚನೆ ಬಂದದ್ದೇ ಆದಾಯ ಕಣ್ಣಮುಂದೆ ಇಟ್ಟುಕೊಂಡು. ಬೇಕಾದವರಿಗೆ ಟೆಂಡರ್ ಕೊಡಿಸಿ ಹತ್ತಾರು ವರ್ಷಗಳ ಆದಾಯದ ಲೆಕ್ಕಾಚಾರ ಇಟ್ಟುಕೊಂಡು ಟೋಲ್‌ಗೇಟ್ ಆರಂಭಿಸಲು ಆವಕಾಶ ಮಾಡಿಕೊಟ್ಟರು. ಈಗ ತೋರಿಕೆಯ ಹೋರಾಟಗಳ ಮೂಲಕ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಅಲ್ಲಿ ಟೋಲ್ ಹಾಕುವ ವಿಚಾರದಲ್ಲಿ ಆಗ ಏನು ನಡೆಯಬಹುದೋ ಆ ವ್ಯವಹಾರಗಳೆಲ್ಲವೂ ನಡೆದಿವೆ. ಟೋಲ್ ತಕ್ಷಣ ರದ್ದು ಮಾಡಬೇಕು ಎಂದು ಹೇಳುತ್ತಿರುವರು ಸ್ಥಾಪನೆ ಮಾಡಿದ್ದು ಏಕೆ? ಎಲ್ಲ ಕಾಮಗಾರಿ ಬಿಜೆಪಿ ಅಧಿಕಾರದ ಕಾಲದಲ್ಲಿಯೇ ಆಗಿದೆ. ಈಗ ಏಕೆ ಹೋರಾಟ. ಸ್ವಂತ ಹಿತಾಸಕ್ತಿ ಕಾಪಾಡಿಕೊಳ್ಳಲು ಮಾಡಿಕೊಂಡ ವ್ಯವಸ್ಥೆ ಅದು. ಈಗ 60 ಕಿ.ಮೀ. 35 ಕಿ.ಮೀ. ಇವೆಲ್ಲ ನೆನಪಾಗುತ್ತಿವೆ. ನಾಟಕದ ಹೋರಾಟ ತಕ್ಷಣ ನಿಲ್ಲಿಸಿ’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಟೋಲ್ ಗೇಟ್ ಪರ ಇಲ್ಲ. ಅಲ್ಲಿ ಟೋಲ್ ಸಂಗ್ರಹದಿಂದ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇವೆ. ಅದನ್ನು ರದ್ದು ಮಾಡಬೇಕೇ? ಏನು ಮಾಡಬೇಕು. ಅದಕ್ಕಿರುವ ಕಾನೂನಾತ್ಮಕ ತೊಡಕುಗಳೇನು ಎಂಬುದರ ಬಗ್ಗೆ ಅವರು ಪರಿಶೀಲಿಸುತ್ತಿದ್ದು, ಶೀಘ್ರ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಮುಖಂಡರಾದ ಬಿ.ಎ.ರಮೇಶ ಹೆಗ್ಡೆ, ಶ್ರೀನಿವಾಸ ಕರಿಯಣ್ಣ, ಜಿ.ಡಿ.ಮಂಜುನಾಥ, ಯು.ಶಿವಾನಂದ, ಧೀರರಾಜ್ ಹೊನ್ನವಿಲೆ, ವೈ.ಎಚ್.ನಾಗರಾಜ್, ಪೂರ್ಣೇಶ, ಹಿರಣ್ಣಯ್ಯ, ಎಚ್.ಎಂ.ಮಧು, ನಿರಂಜನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.