ಗುರುವಾರ , ಮೇ 26, 2022
31 °C

ಸುಪ್ರೀಂಕೋರ್ಟ್‌‌ನಲ್ಲಿರುವ ಪ್ರಕರಣ ಮುಂದೂಡಿಕೆ: ಅಫಿಡವಿಟ್‌ ಸಲ್ಲಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದೇಶಕ್ಕೆ ಆಮದಾಗುವ ಪ್ರತಿ ಕೆ.ಜಿ. ಅಡಿಕೆ ಮೇಲೆ ₹ 350 ಸುಂಕ ನಿಗದಿ ಮಾಡಲು, ಅಡಿಕೆ ಸಂಶೋಧನಾ ವರದಿ ಬರುವವರೆಗೆ ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣ ಮುಂದೂಡಲು ಅಫಿಡವಿಟ್‌ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮಂಗಳವಾರ ನಡೆದ ಅಡಿಕೆ ಕಾರ್ಯಪಡೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಆಮದು ಸುಂಕ ಹೆಚ್ಚಳದಿಂದ ವಿದೇಶದಿಂದ ಬರುವ ಅಗ್ಗದ ದರದ ಅಡಿಕೆಗೆ ಕಡಿವಾಣ ಬೀಳಲಿದೆ. ಸ್ಥಳೀಯ ರೈತರ ಅಡಿಕೆಗೂ ಉತ್ತಮ ಧಾರಣೆ ದೊರಕಲಿದೆ. ಅಕ್ರಮ ಸಾಗಣೆ ಕುರಿತು ಕೇಂದ್ರ ಸರ್ಕಾರಕ್ಕೆ ವಾರದ ಹಿಂದೆ ಮಾಹಿತಿ ನೀಡಿದ ನಂತರ ಮ್ಯಾನ್ಮಾರ್‌ನಿಂದ ಅಕ್ರಮವಾಗಿ ತಂದಿದ್ದ ₹ 3.52 ಕೋಟಿ  ಅಡಿಕೆ ಸೇರಿದಂತೆ ₹ 6 ಕೋಟಿ ಮೌಲ್ಯದ ಆವಕ ವಶಪಡಿಸಿಕೊಳ್ಳಲಾಗಿದೆ. ಹಾಗಾಗಿ, ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿದೆ ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಎಂ.ಎಸ್‌.ರಾಮಯ್ಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡಿದ್ದಾರೆ. ಅಡಿಕೆ ಆರೋಗ್ಯಕ್ಕೆ ಪೂರಕ ಎನ್ನುವುದು ಸಾಬೀತಾಗುವ ವಿಶ್ವಾಸವಿದೆ. ವರದಿ ಸಿದ್ಧವಾಗುವವರೆಗೆ ಪ್ರಕರಣದ ವಿಚಾರಣೆ ಮುಂದೂಡುವ ಅಗತ್ಯವಿದೆ. ಅಡಿಕೆ ಪರ ಸಮರ್ಥವಾಗಿ ವಾದ ಮಂಡಿಸಲು ವಕೀಲರನ್ನು ಸಜ್ಜುಗೊಳಿಸಬೇಕಿದೆ ಎಂದರು.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಡಿ ಅನಾನಸ್ ಸೇರಿದೆ. ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿ ನಿರ್ಧರಿಸಿದೆ. ಅಡಿಕೆ ಸಂಶೋಧನೆಗೆಗಾಗಿ ವಿಜ್ಞಾನಿಗಳ ಜತೆ ಸಹಕರಿಸಲು ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

₹ 3.59 ಕೋಟಿ ಅನುದಾನ ಬಿಡುಗಡೆ: ಅಡಿಕೆ ಕಾರ್ಯಪಡೆಗೆ ರಾಜ್ಯ ಸರ್ಕಾರ ₹ 10 ಕೋಟಿ ಅನುದಾನ ಘೋಷಿಸಿದೆ. ₹ 3.59 ಕೋಟಿ ಬಿಡುಗಡೆ ಮಾಡಿದೆ. ಅಡಿಕೆ ಬೆಳೆ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಡಿಕೆ ಬೆಳೆ ಮೇಲೆ ಖಾಸಗಿಯಾಗಿಯೂ ಹಲವು ಪ್ರಯೋಗಗಳು ನಡೆಯುತ್ತಿವೆ. ಗುರುಮೂರ್ತಿ ಹೆಗಡೆ ಸೇರಿದಂತೆ ಹಲವರು ಅಡಿಕೆ ಮೇಲೆ ಪ್ರಯೋಗ ಮಾಡಿದ್ದಾರೆ. ಅಡಿಕೆ ಆರೋಗ್ಯಕ್ಕೆ ಪೂರಕ, ಉಪ ಉತ್ಪನ್ನಗಳಿಂದ ಹಲವು ಉದ್ಯಮ ಸ್ಥಾಪಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹಾಲಪ್ಪ. ಎಚ್‌ ಹರತಾಳು ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು