ಬುಧವಾರ, ಡಿಸೆಂಬರ್ 7, 2022
22 °C
ತೀರ್ಥಹಳ್ಳಿ: ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಕಳ್ಳತನ l ಪೊಲೀಸ್ ಇಲಾಖೆ ಸೂಚನೆ

ಗುಡಿ, ಚರ್ಚ್, ಮಸೀದಿಗೆ ‘ಸಿಸಿಟಿವಿ’ ಕಣ್ಗಾವಲು

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಧಾರ್ಮಿಕ ಸ್ಥಳಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ ಮತ್ತಿತರ ಸ್ಥಳಗಳ ಸುತ್ತಮುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ತೀರ್ಥಹಳ್ಳಿ ಪೊಲೀಸರು ಆಯಾ ಧಾರ್ಮಿಕ ಕ್ಷೇತ್ರಗಳ ಉಸ್ತುವಾರಿ ಸಮಿತಿಯವರಿಗೆ ಸೂಚಿಸಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಎಚ್‌.ಡಿ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅದರಲ್ಲಿನ ದೃಶ್ಯಾವಳಿಯ ಬ್ಯಾಕಪ್ ಕನಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಇರಬೇಕು ಎಂದು ತಿಳಿಸಿ ನೋಟಿಸ್ ಹೊರಡಿಸಲಾಗಿದೆ.

ಹುಂಡಿ ಹಣ ವಿಲೇವಾರಿ: ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಸಂಗ್ರಹವಾಗುವ ಹುಂಡಿ ಹಣ ಕೂಡಲೇ ಬ್ಯಾಂಕಿಗೆ ವಿಲೇವಾರಿ ಮಾಡಬೇಕು. ದೇವರ ಮೇಲಿರುವ ಒಡವೆಗಳು ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ರಾತ್ರಿ ವೇಳೆಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಬಿಡದೇ ಬೇರೆ ಸುರಕ್ಷಿತ ಜಾಗದಲ್ಲಿ ಭದ್ರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಧಾರ್ಮಿಕ ಸ್ಥಳಗಳ ಸುತ್ತಲೂ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು. ಭದ್ರತೆಗೆ ಎರಡು ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳಬೇಕು, ಬೀಗ, ಲಾಕಿಂಗ್ ವ್ಯವಸ್ಥೆ ಬಲವಾಗಿರುವಂತೆ ಮಾಡಬೇಕು. ದುಷ್ಕರ್ಮಿಗಳು ಕಳ್ಳತನಕ್ಕೆ ಪ್ರಯತ್ನಿಸಿದಲ್ಲಿ ಎಚ್ಚರಿಸಲು ಅಲಾರಾಂ ವ್ಯವಸ್ಥೆ ಅಳವಡಿಸಬೇಕು. ದೇವಸ್ಥಾನದ ಸುತ್ತಲೂ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಅಡ್ಡಾಡಿದರೆ ಸಹಾಯವಾಣಿ ಸಂಖ್ಯೆ 112 ಇಲ್ಲವೇ ನಿಯಂತ್ರಣ ಕೊಠಡಿ, ಮೊಬೈಲ್ ನಂಬರ್ 9480803300ಗೆ ಸಂಪರ್ಕಿಸಲು ಹೇಳಲಾಗಿದೆ.

ಮುಂಜಾಗರೂಕತಾ ಕ್ರಮ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸದ್ಯ ಎಲ್ಲಿಯೂ ಧಾರ್ಮಿಕ ಸ್ಥಳಗಳಲ್ಲಿ ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳು ನಡೆದಿಲ್ಲ. ಆದರೆ ನೆರೆ ಜಿಲ್ಲೆಗಳಲ್ಲಿ ಕಳ್ಳತನ ಕೃತ್ಯಗಳು ಹೆಚ್ಚಳಗೊಂಡಿರುವ ಬಗ್ಗೆ ಮಾಹಿತಿ ಬಂದ ಕಾರಣ ಮುಂಜಾಗರೂಕತಾ ಕ್ರಮವಾಗಿ ನಾವು ನೋಟಿಸ್ ಹೊರಡಿಸಿದ್ದೇವೆ ಎಂದು ತೀರ್ಥಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಅಶ್ವತ್ಥಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

***

ಮುಜುರಾಯಿ ಇಲಾಖೆ: 643 ದೇವಸ್ಥಾನ

ಮುಜುರಾಯಿ ಇಲಾಖೆ ದೇವಸ್ಥಾನಗಳಲ್ಲಿ ಈ ಮೊದಲು ಅವಶ್ಯಕತೆ ಇದ್ದರೆ ಸಿ.ಸಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದೆವು. ಈಗ ಪೊಲೀಸ್ ಇಲಾಖೆ ಹೇಳಿರುವ ಕಾರಣ ಆಯಾ ದೇವಸ್ಥಾನಗಳಲ್ಲಿನ ಆದಾಯ ಬಳಸಿ ಸಿ.ಸಿ ಕ್ಯಾಮೆರಾ ಖರೀದಿಸಿ ಅಳವಡಿಸಿಕೊಳ್ಳುವಂತೆ ಸುತ್ತೋಲೆ ಹೊರಡಿಸಲಿದ್ದೇವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿ 643 ದೇವಸ್ಥಾನಗಳು ಇವೆ. ಭಕ್ತರ ಸಂಖ್ಯೆ ಹಾಗೂ ಆದಾಯ ಆಧರಿಸಿ ಈ ದೇವಸ್ಥಾನಗಳನ್ನು ಎ.ಬಿ.ಸಿ ಎಂದು ವರ್ಗೀಕರಿಸಲಾಗಿದೆ. ಈಗ ‘ಎ‘ ಗ್ರೇಡ್ ದೇವಸ್ಥಾನಗಳಲ್ಲಿ 2 ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತದೆ.

ಜಿಲ್ಲೆಯಲ್ಲಿ ಸೊರಬ ತಾಲ್ಲೂಕಿನ ಚಂದ್ರಗುತ್ತಿ, ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ, ಸಾಗರದ ಮಹಾಗಣಪತಿ ಹಾಗೂ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನ ಸೇರಿವೆ. ಶಿವಮೊಗ್ಗದ ಕೋಟೆ ಆಂಜನೇಯ ಹಾಗೂ ತೀರ್ಥಹಳ್ಳಿ ತಾಲ್ಲೂಕು ಮೃಗವಧೆಯ ಮಲ್ಲಿಕಾರ್ಜುನ ದೇವಸ್ಥಾನ ‘ಬಿ‘ ಗ್ರೇಡ್ ಹೊಂದಿವೆ. ಇಲ್ಲಿ ಕನಿಷ್ಠ 3 ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತದೆ. ಉಳಿದ 637 ದೇವಸ್ಥಾನಗಳು ‘ಸಿ‘ ಗ್ರೇಡ್ ಹೊಂದಿದ್ದು, ವರ್ಷಕ್ಕೊಮ್ಮೆ ತೆರೆಯುವ ಪರಿಪಾಟವಿದೆ ಎಂದು ಹೇಳಿದರು.

***

ವಿಶೇಷ ನಿಗಾ ವಹಿಸಲು ಸೂಚನೆ: ಎಸ್ಪಿ

ಜಿಲ್ಲೆಯ ಧಾರ್ಮಿಕ ಸ್ಥಳಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ನಿಗಾ ವಹಿಸಿ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.

ಶಿವಮೊಗ್ಗದ ದೊಡ್ಡಪೇಟೆ ಠಾಣೆ ವ್ಯಾಪ್ತಿಯ ದೇವಸ್ಥಾನವೊಂದರಲ್ಲಿ ಕಳಶ ಕದ್ದುಕೊಂಡು ಹೋಗಿದ್ದರು. ದುಷ್ಕರ್ಮಿಗಳನ್ನು ಪತ್ತೆ ಮಾಡಿದ್ದೇವೆ. ಕಳ್ಳತನ ತಡೆಯಲು ಎಲ್ಲ ಕಡೆಗೂ ಪೊಲೀಸ್ ಸಿಬ್ಬಂದಿ ಗಸ್ತು (ಬೀಟ್) ಹೆಚ್ಚಳಗೊಳಿಸಲಿದ್ದೇವೆ ಎಂದರು.

***

ಧಾರ್ಮಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದಂತೆ ಸದ್ಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸುತ್ತೋಲೆ ಹೊರಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಹೆಜ್ಜೆ ಇಡಲಿದ್ದೇವೆ.

ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎಸ್ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.