ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದಲ್ಲಿ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನ ನಾಳೆಯಿಂದ

Last Updated 27 ನವೆಂಬರ್ 2020, 16:42 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಕಾರಣ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದ ರಂಗ ಚಟುವಟಿಕೆಗೆ ಮತ್ತೆ ಚಾಲನೆ ದೊರಕಿದ್ದು, ಶಿವಮೊಗ್ಗದ ರಂಗಾಯಣ ಕಲಾವಿದರು ಅಭಿನಯಿಸಿರುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನ ನ.29 ಮತ್ತು 30ರಂದು ನಡೆಯಲಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.

‘ಶಿವಮೊಗ್ಗ ರಂಗಾಯಣದ ಎರಡನೇ ರೆಪರ್ಟರಿಯ ಪ್ರಥಮ ನಾಟಕ ಇದಾಗಿದೆ. ಪ್ರಥಮ ಪ್ರಯೋಗವಾಗಿ ಕೆ.ವಿ.ಸುಬ್ಬಣ್ಣ ರಚನೆಯ, ಬಿ.ಆರ್. ವೆಂಕಟರಮಣ ಐತಾಳ ಅವರ ನಿರ್ದೇಶನದ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ಸುವರ್ಣ ಸಾಂಸ್ಕೃತಿಕ ಭವನದಲ್ಲಿ 29ರಂದು ಸಂಜೆ 6.15ಕ್ಕೆ ನಾಟಕ ಪ್ರದರ್ಶನ ಆರಂಭವಾಗಲಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಟಕಕ್ಕೆ ರಾಘು ಪುರಪ್ಪೇಮನೆ ಮತ್ತು ಎಚ್‌.ಕೆ. ಶ್ವೇತಾರಾಣಿ ಸಹ ನಿರ್ದೇಶನ ಮಾಡಿದ್ದು, ಕೆ.ಎನ್.ಭಾರ್ಗವ ಮತ್ತು ಶ್ರೀಪಾದ ತೀರ್ಥಹಳ್ಳಿ ಅವರ ಸಂಗೀತವಿದೆ. ರಂಗವಿನ್ಯಾಸವನ್ನು ವಿನೀತ್ ಕುಮಾರ್ ನಿರ್ವಹಿಸಿದ್ದಾರೆ. ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಪ್ರಸಾಧನ ಹಾಗೂ ಬೆಳಕಿನ ವಿನ್ಯಾಸವನ್ನು ಶಂಕರ್ ಬೆಳಕಟ್ಟೆ ನಿರ್ವಹಿಸಿದ್ದಾರೆ ಎಂದರು.

ವಿಶಾಖದತ್ತನ ‘ಮುದ್ರಾರಾಕ್ಷಸ’ ಎಂಬ ಸಂಸ್ಕೃತ ನಾಟಕ ಆಧರಿಸಿ ಕೆ.ವಿ. ಸುಬ್ಬಣ್ಣ ಅವರು ಮರುರೂಪಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರಂಗಾಯಣ, ಶಿವಮೊಗ್ಗ ರೆಪರ್ಟರಿಯ ನೂತನ ಕಲಾವಿದ ಆರ್. ಪ್ರಸನ್ನ ಕುಮಾರ್, ಡಿ.ಆರ್.ನಿತಿನ್, ಎಸ್.ಎಂ. ರವಿಕುಮಾರ್, ಸುಜಿತ್ ಕಾರ್ಕಳ, ಎನ್. ಚಂದನ್, ಎಂ.ಎಲ್. ಶತರ್ ಬಾಬು, ಬಿ.ಕೆ.ಮಹಾಬಲೇಶ್ವರ್,ಆರ್. ರಮ್ಯ, ಆರ್.ಸವಿತಾ ಕಾಳಿ, ಆರ್. ರಂಜಿತ, ಎಂ.ಎಚ್‌. ದೀಪ್ತಿ, ಕಾರ್ತಿಕ ಕಲ್ಲುಕುಟಿಕರ್, ಕೆ.ಶಂಕರ್, ಪ್ರಶಾಂತ್ ಕುಮಾರ್, ರಾಘವೇಂದ್ರ, ಎಂ.ಯು. ಪ್ರಭು ನಾಟಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಪ್ರದರ್ಶನದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಪ್ರೇಕ್ಷಕರು ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಪಾಡಬೇಕು. 250 ಜನಕ್ಕೆ ಮಾತ್ರ ಪ್ರವೇಶವಿದ್ದು, ₹20 ಪ್ರವೇಶ ಶುಲ್ಕವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT