ಸಾಗರ: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಅಜೀಂ ಪ್ರೇಮ್ ಜೀ ಪ್ರತಿಷ್ಠಾನ ಕೈ ಜೋಡಿಸಿರುವ ರೀತಿಯಲ್ಲೇ ರಾಜ್ಯದ ಇತರ ಪ್ರತಿಷ್ಠಿತ ಕಂಪೆನಿಗಳು ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದ್ದಾರೆ.
ಇಲ್ಲಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ 14 ವರ್ಷದೊಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಂದರೆ ಅಲ್ಲಿನ ಶೈಕ್ಷಣಿಕ ವಾತಾವರಣದ ಬೆಳವಣಿಗೆಯಲ್ಲಿ ಕ್ರೀಡೆ ಕೂಡ ಸೇರಿಕೊಳ್ಳುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಾರದ ವಿಶಿಷ್ಟ ಕ್ರೀಡಾ ಪ್ರತಿಭೆಗಳು ಇದ್ದು ಅಂತಹವರನ್ನು ಗುರುತಿಸಿ ಸೂಕ್ತ ತರಬೇತಿ ನೀಡುವ ಕೆಲಸದಲ್ಲಿ ಸಂಘ ಸಂಸ್ಥೆಗಳು, ಕಂಪೆನಿಗಳು ಆಸಕ್ತಿ ತೋರಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯ ನಡುವೆಯೂ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಗರದ ನೆಹರೂ ಮೈದಾನದ ಅಭಿವೃದ್ಧಿಗೆ ರೂ. 40 ಲಕ್ಷ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಾಲತೇಶ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಪ್ರಮುಖರಾದ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ರವಿ ವಿಜಯನಗರ, ಕೆ.ಜಗನ್ನಾಥ್, ಚಂದ್ರಪ್ಪ ಈಳಿ, ಪ್ರಭು ಇ.ಎನ್. ಗವಿಯಪ್ಪ, ಮಂಜುನಾಥ್ ಇದ್ದರು.
ಶಾರದಾ ಪ್ರಾರ್ಥಿಸಿದರು. ಅನ್ನಪೂರ್ಣ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು.