ಗುರುವಾರ , ಜುಲೈ 29, 2021
23 °C

ಕುಡಿಯುವ ನೀರಿನ ಕಾಮಗಾರಿಗಳನ್ನು ಜುಲೈ 8ರ ಒಳಗೆ ಪೂರ್ಣಗೊಳಿಸಿ: ಕೆ.ಎಸ್.ಈಶ್ವರಪ್ಪ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಕಾಮಗಾರಿಗಳನ್ನು ಜುಲೈ 8ರ ಒಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ನಗರದ 35 ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳ ಮೇಲೆ ನಿರಂತರ ನಿಗಾ ವಹಿಸಬೇಕು. ನಿಗದಿಪಡಿಸಿದ ಅವಧಿಯ ಒಳಗೆ ನೀರು ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.

ನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ನಗರದ ಹಲವು ವಾರ್ಡ್‌ಗಳಲ್ಲಿ ಟ್ಯಾಂಕ್‌ಗಳ ನೀರು ಸಂಪೂರ್ಣ ತುಂಬುತ್ತಿಲ್ಲ. ಮೊದಲು ಈ ಸಮಸ್ಯೆ ಬಗೆಹರಿಸಬೇಕು. ಆಗ ಎಲ್ಲಾ ವಾರ್ಡ್‌ಗಳಿಗೂ ಸಮರ್ಪಕ ನೀರು ಸರಬರಾಜು ಮಾಡಲು ಸಾಧ್ಯ. ಕೂಡಲೇ ಅತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. 

ಸದಸ್ಯ ಶಂಕರಗನ್ನಿ, ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆ ನೀರಿನ ಸಮಸ್ಯೆ ಕಾರಣ. ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಮುಖ್ಯ. ಕೋಟಿಗಟ್ಟಲೆ ಖರ್ಚು ಮಾಡಿ ಕಾಮಗಾರಿ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಟ್ಯಾಂಕ್‌ಗಳಲ್ಲಿ ನೀರು ಸಂಪೂರ್ಣ ತುಂಬಬೇಕು. ಯಾವುದೇ ತೊಡಕುಗಳಿದ್ದರೆ ಕೂಡಲೇ ತಿಳಿಸಬೇಕು. ಜೂನ್ 10ರ ಸಂಜೆ 5ರ ಒಳಗೆ ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರಿನ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.

ಯಾವ ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಪ್ರಗತಿಯ ಸಮಗ್ರ ವಿವರ ನೀಡಬೇಕು. ಯುಜಿಡಿ ಕಾಮಗಾರಿ ಮುಗಿದಿರುವ ಭಾಗಗಳಲ್ಲಿ ಪಾಲಿಕೆ ಸದಸ್ಯರು ಮುಂದೆ ನಿಂತು ಮನೆಗಳಿಗೆ ಸಂಪರ್ಕ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅಶ್ವತ್ಥ ನಗರ, ಎಲ್‌ಬಿಎಸ್‌ ನಗರ, ಪಿ ಆ್ಯಂಡ್ ಟಿ ಕಾಲೋನಿ, ಬಸವೇಶ್ವರ ನಗರ, ಕೃಷಿ ನಗರ, ಸಹ್ಯಾದ್ರಿ ನಗರ, ಸಹ್ಯಾದ್ರಿ ಬಡಾವಣೆ, ಅಶೋಕ ನಗರ, ಅರವಿಂದ ನಗರ, ಮಂಜುನಾಥ ಬಡಾವಣೆ, ಆನಂದರಾವ್ ಬಡಾವಣೆ, ಗೋಪಾಳ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಆಲ್ಕೋಳ, ಅಮೃತ್ ಲೇಔಟ್, ಸೂರ್ಯ ಬಡಾವಣೆಯಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ ಅಧಿಕಾರಿಗಳು ಮಾಹಿತಿ ನೀಡಿದರು. 

ಪಾಲಿಕೆ ಉಪ ಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು