ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂದಾಣಿಕೆ ರಾಜಕಾರಣ ನಮ್ಮ ಜಾಯಮಾನವಲ್ಲ: ಸಂಸದ ಬಿ.ವೈ. ರಾಘವೇಂದ್ರ

ಶಿಕಾರಿಪುರ: ವಿಜಯೇಂದ್ರ ಮತ್ತೊಂದು ನಾಮಪತ್ರ ಸಲ್ಲಿಕೆ, ಸಂಸದ ಬಿವೈಆರ್ ಅಭಿಮತ
Last Updated 20 ಏಪ್ರಿಲ್ 2023, 4:20 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೆರಡು ದಿನಗಳಿಂದ ಹೊಂದಾಣಿಕೆ ರಾಜಕಾರಣದ ಚರ್ಚೆ ಆಗುತ್ತಿದೆ. ಆದರೆ ಬಿಜೆಪಿ ಯಾವತ್ತೂ ಅಂತಹ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ಪಕ್ಷಕ್ಕೆ ಇಲ್ಲ’ ಎಂದು ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟಪಡಿಸಿದರು.

ಶಿಕಾರಿಪುರದಲ್ಲಿ ಬುಧವಾರ ಸಹೋದರ ಬಿ.ವೈ. ವಿಜಯೇಂದ್ರ ಅವರಿಂದ ನಾಮಪತ್ರ ಸಲ್ಲಿಕೆಯ ನಂತರ ಸಂತೆ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ರೈತಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಚುನಾವಣೆಗೆ ಹೋಗಲಿದ್ದೇವೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರದ್ದು ಹೊಂದಾಣಿಕೆಯ ಜಾಯಮಾನವಲ್ಲ. ಪುರಸಭೆ ಅಧ್ಯಕ್ಷರಾಗಿ ಅವರ ಜನಾನುರಾಗಿ ಕೆಲಸ ನೋಡಲಾಗದೇ ಊರು ಬಿಡಿಸಲು ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ನೆಲಕ್ಕೆ ಬಿದ್ದ ಯಡಿಯೂರಪ್ಪ ಅವರ ರಕ್ತ, ಜನರ ಆಶೀರ್ವಾದದ ಫಲವಾಗಿ ಶಿಕಾರಿಪುರ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳ ತಂದು ಕೆರೆಗಳ ತುಂಬಿಸಿ ಹಸಿರುಡಿಸಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸ್ಪರ್ಧೆ ಮಾಡಿದಾಗಲೂ ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ ಮಾಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜೆಡಿಎಸ್‌–ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ ಮಾಡಿದಾಗಲೂ ಕ್ಷೇತ್ರದ ಜನರು ನಮ್ಮ ಕೈ ಬಿಟ್ಟಿಲ್ಲ. ಹೀಗಾಗಿ ಯಡಿಯೂರಪ್ಪ ಕುಟುಂಬ ಹೊಂದಾಣಿಕೆ ರಾಜಕಾರಣವನ್ನು ಯಾವತ್ತೂ ಮಾಡಿಲ್ಲಎಂದರು.

‘ನಾವು ಬೇಗ ತಾಯಿ ಕಳೆದುಕೊಂಡೆವು. ಆದರೂ ಶಿಕಾರಿಪುರದ ಮತದಾರರ ಬಂಧುಗಳು ತಾಯಿಯ ಪ್ರೀತಿ ಕೊಟ್ಟಿದ್ದೀರಿ. ಶಿಕಾರಿಪುರದ ಎಲ್ಲ ತಾಯಂದಿರು ನನಗೆ ತಾಯಿಯ ಪ್ರೀತಿ ಕೊಟ್ಟಿದ್ದೀರಿ. ಅದನ್ನೇ ವಿಜಯಣ್ಣನಿಗೂ ಕೊಡಿ. ಅವರ ಗೆಲುವಿಗೆ ಹಾರೈಸಿ’ ಎಂದು ಮನವಿಮಾಡಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾದ ವೇಳೆ ತಾಲ್ಲೂಕಿನ ಜನರ ಒತ್ತಾಯದ ಮೇರೆಗೆ ಶಿಕಾರಿಪುರದಿಂದ ನಾನು ಸ್ಪರ್ಧಿಸುತ್ತಿದ್ದೇನೆ’ ಎಂದರು.

‘ಶಿಕಾರಿಪುರ ತಾಲ್ಲೂಕಿನ ಜನರ ಆಶೀರ್ವಾದದಿಂದ ಯಡಿಯೂರಪ್ಪ ಅವರಿಗೆ ರಾಜ್ಯದ ವಿರೋಧ ಪಕ್ಷದ ನಾಯಕ ಸ್ಥಾನದ ಜೊತೆಗೆ, ನಾಲ್ಕು ಬಾರಿ ಮುಖ್ಯಮಂತ್ರಿ ಆಗಲು ಅವಕಾಶವಾಯಿತು. ದೇಶದಲ್ಲಿಯೇ ಅವರನ್ನು ಗುರುತಿಸುವ ಕೆಲಸ ಆಗಿದ್ದರೆ ಅದಕ್ಕೆ ಶಿಕಾರಿಪುರ ಕ್ಷೇತ್ರದ ಮತದಾರರು ಕಾರಣ. ಯಡಿಯೂರಪ್ಪ ಅವರಿಗೆ ಕೊಟ್ಟಿರುವ ಶಕ್ತಿಯಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅದನ್ನೇ ಮುಂದುವರಿಸಿಕೊಂಡು ಹೋಗುವೆ’ ಎಂದು ತಿಳಿಸಿದರು.

ಒಳಮೀಸಲಾತಿ ಬಗ್ಗೆ ಅಪಪ್ರಚಾರ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ‘ಒಳಮೀಸಲಾತಿಯಿಂದ ಹಲವರಿಗೆ ಅನ್ಯಾಯ ಆಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆರು ವರ್ಷಗಳ ಹಿಂದೆ ಕೇಂದ್ರ ಪರಿಶಿಷ್ಟ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೊಟ್ಟು ಭೋವಿ ಹಾಗೂ ಬಂಜಾರ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡಬಹುದೇ ಎಂದು ಕೇಳಿತ್ತು. ಅದಕ್ಕೆ ಉತ್ತರ ಕೊಡದೇ ಸಿದ್ದರಾಮಯ್ಯ ಸರ್ಕಾರ ಸುಮ್ಮನಿತ್ತು. ಆದರೆ ಬಿಜೆಪಿ ಸರ್ಕಾರ ಒಳಮೀಸಲಾತಿ ಕೊಡುವ ಮೂಲಕ ಆ ಸಂಕಷ್ಟ ತಪ್ಪಿಸಿದೆ’ ಎಂದು ಹೇಳಿದರು.

**

ಎಂಟು ಬಾರಿ ನನ್ನನ್ನು ಆಶೀರ್ವದಿಸಿದ್ದೀರಿ. ಈ ಬಾರಿ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು 50,000 ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡುವೆ
- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

**

ಕಾಂಗ್ರೆಸ್ ಕುತಂತ್ರಕ್ಕೆ ಕಿವಿಗೊಡಬೇಡಿ: ಉಮೇಶ ಜಾಧವ್‌

ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ನ ಕುತಂತ್ರಕ್ಕೆ ಕಿವಿಗೊಡಬೇಡಿ. ಬಂಜಾರ, ಬೋವಿ ಸಮಾಜದ ಮೇಲೆ 25 ವರ್ಷಳಿಂದಲೂ ತೂಗುಗತ್ತಿ ಇತ್ತು. ಆ ಸಮಸ್ಯೆಯನ್ನು ಒಳಮೀಸಲಾತಿ ಮೂಲಕ ಬಗೆಹರಿಸಿ ಬಸವರಾಜ ಬೊಮ್ಮಾಯಿ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಕಲಬುರ್ಗಿ ಸಂಸದ ಉಮೇಶ ಜಾಧವ್‌ ಹೇಳಿದರು.

ಬಂಜಾರ ಸಮುದಾಯ ಯಡಿಯೂರಪ್ಪ ಅವರನ್ನು ಯಾವತ್ತೂ ಮರೆಯೊಲ್ಲ. ವಿಸಿ, ಕೆಪಿಎಸ್ಸಿಗೆ, ಎಂಟು ಜನರಿಗೆ ಎಂಎಲ್‌ಎ ಸೀಟ್ ಕೊಟ್ಟವರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ 45 ಡಿಗ್ರಿ ಉಷ್ಣಾಂಶ ಇದ್ದರೂ ಅಲ್ಲಿ ಓಡಾಡಿ ನನ್ನ ಮಗ ಅವಿನಾಶ್‌ ಜಾಧವ್ ಗೆಲ್ಲಿಸಿ ಕೊಟ್ಟಿದ್ದರು. ಹೀಗಾಗಿ ವಿಜಯೇಂದ್ರ ಅವರನ್ನು ಬಹುಮತದಿಂದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

**

ವಿಜಯಣ್ಣ ಹೆಬ್ಬುಲಿ: ರಾಜುಗೌಡ

’ಯಡಿಯೂರಪ್ಪ ಸಾಹೇಬರು ಕರ್ನಾಟಕದ ರಾಜಾಹುಲಿ. ನಾವು ವಿಜಯಣ್ಣ (ಬಿ.ವೈ.ವಿಜಯೇಂದ್ರ) ಅವರನ್ನು ಇಲ್ಲಿಯವರೆಗೂ ಮರಿಹುಲಿ ಅಂದುಕೊಂಡಿದ್ದೆವು. ಆದರೆ ರಾಜ್ಯದಲ್ಲಿ ಇತ್ತೀಚೆಗೆ ಅವರೊಂದಿಗೆ ಪ್ರವಾಸ ಮಾಡಿದ್ದು, ಅವರು ಮರಿಹುಲಿ ಅಲ್ಲ ಹೆಬ್ಬುಲಿ ಎಂಬುದು ಅರ್ಥವಾಯಿತು‘ ಎಂದು ಸುರಪುರದ ಶಾಸಕ ರಾಜುಗೌಡ ಹೇಳಿದರು.

ವಿಜಯಣ್ಣನಿಗೆ ಯಡಿಯೂರಪ್ಪ ಸಾಹೇಬರು ಕಲಬುರ್ಗಿಯಲ್ಲಿ ಹೆಣ್ಣು ತಂದಿದ್ದಾರೆ. ಹೀಗಾಗಿ ಹೆಣ್ಣಿನ ಕಡೆಯವರು ನಾವು. ಆಗ ವರದಕ್ಷಿಣೆ ಕೊಡಲು ಹೋದರೆ ಯಡಿಯೂರಪ್ಪ ಅದೇನೂ ಬೇಡ ಅಂದಿದ್ದರು. ವಿಜಯೇಂದ್ರ ಚುನಾವಣೆಗೆ ನಿಂತಾಗ ನೀವೆಲ್ಲಾ ಅಳಿಯಂದಿರು ಬಂದು ಕೆಲಸ ಮಾಡಲು ಹೇಳಿದ್ದರು. ಈಗ ನಮ್ಮ ತಂಗಿಯ ಪರವಾಗಿ ನಾವು ಚುನಾವಣೆ ಮಾಡಲು ಬಂದಿದ್ದೇವೆ ಎಂದು ರಾಜುಗೌಡ ಹೇಳಿದರು.

ದ್ರೋಣಾಚಾರ್ಯರು ಏಕಲವ್ಯನ ಬೆರಳು ಕೇಳಿದಂತೆ ಬಿಜೆಪಿಯವರು ವಾಲ್ಮೀಕಿ ಸಮಾಜದವರಿಂದ ಬೆರಳು ಕೇಳಲಿಲ್ಲ. ಬದಲಿಗೆ ಶೇ 3ರಷ್ಟು ಇದ್ದ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಿಸಿದ್ದಾರೆ. ಆದರೆ ಕಾಂಗ್ರೆಸ್‌ನವರು ಏನೂ ಕೊಡದೇ ನಮ್ಮ ಹೆಬ್ಬೆಟ್ಟು ಕಿತ್ತುಕೊಂಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT