ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಕಾಮಗಾರಿಗೆ ಖಂಡನೆ

Last Updated 8 ಮೇ 2022, 3:18 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಹೊರಟಿರುವುದನ್ನು ವಿರೋಧಿಸಿ ಭದ್ರಾವತಿಯ ಜನ್ನಾಪುರ–ಸಿದ್ಧಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜನ್ನಾಪುರ ಸರ್ವೆ ನಂ. 70ರಲ್ಲಿನ 52 ಎಕರೆ ಕೆರೆ ಜಾಗವನ್ನು ಗುರುತಿಸಬೇಕು. ಕೆರೆಯ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು. ನೂರಾರು ವರ್ಷಗಳಿಂದ ಮಲ-ಮೂತ್ರದಿಂದ ತುಂಬಿರುವ ಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ವೈಜ್ಞಾನಿಕವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆರೆ ಅಭಿವೃದ್ಧಿಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರೈತರು ಬೆಳೆಯುವ ಬೆಳೆಗಳಿಗೆ ಅನುಕೂಲವಾಗಲೆಂದು ಪೂರ್ವಿಕರು ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಜನ್ನಾಪುರದ 52 ಎಕರೆ ಜಾಗದಲ್ಲಿ
ವ್ಯವಸ್ಥಿತವಾಗಿ ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ, ಇಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ರೈತರ ಅನುಕೂಲಕ್ಕಾಗಿ ನಿರ್ಮಾಣ ಮಾಡಿದಂತಹ ಕೆರೆಯನ್ನು ತಮ್ಮ ಸ್ವಾರ್ಥಕ್ಕಾಗಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ಕೆರೆಗಳ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತಗಳಿಗೆ ಸ್ಪಷ್ಟ ಆದೇಶ ನೀಡಿದ್ದರೂ ಪಾಲನೆಯಾಗಿಲ್ಲ. ಭದ್ರಾವತಿ ತಾಲ್ಲೂಕು ಆಡಳಿತ 52 ಎಕರೆ ಕೆರೆ ಜಾಗವನ್ನು ಕೇವಲ 45 ಎಕರೆ 20 ಗುಂಟೆಗೆ ಸೀಮಿತಗೊಳಿಸಿ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೋಟ್ಯಂತರ ರೂಪಾಯಿಗಳಿಗೆ ಟೆಂಡರ್ ಕರೆದು ಮೊದಲ ಕಂತಿನ ಹಣ ₹ 4.48 ಕೋಟಿ ಬಿಡುಗಡೆಗೊಳಿಸಿ ಅವೈಜ್ಞಾನಿಕವಾಗಿ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಸಂಚಾಲಕ ಸುರೇಶ್, ಪ್ರಮುಖರಾದ ಮಂಜುನಾಥ್, ಕಾಂತರಾಜ್, ಜಿ. ರಾಜು, ಚಂದ್ರಶೇಖರ್, ರಾಮಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT