ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಪಿಎಫ್‌ಐ, ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಹೊಂದಾಣಿಕೆ

ಶಾಸಕ ಕೆ.ಎಸ್. ಈಶ್ವರಪ್ಪ ಆರೋಪ
Last Updated 19 ಮಾರ್ಚ್ 2023, 7:55 IST
ಅಕ್ಷರ ಗಾತ್ರ

ಶಿವಮೊಗ್ಗ: ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳೊಂದಿಗೆ ಸೇರಿ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದೆ. ಇದನ್ನು ರಾಜ್ಯದ ಜನರು ಗಮನಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಗಡಿಪಾರು ಮಾಡಲಾಗಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧಿಕಾರಕ್ಕಾಗಿ ರಾಷ್ಟ್ರದ್ರೋಹಿ ಸಂಘಟನೆಗಳ ಜೊತೆ ಶಾಮೀಲಾಗುತ್ತಿರುವುದು ಕಾಂಗ್ರೆಸ್‌ನ ನೀಚತನಕ್ಕೆ ಸಾಕ್ಷಿ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ಅವರಿಗೆ ತಕ್ಕ ಬುದ್ಧಿ ಕಲಿಸಬೇಕು ಹಾಗೂ ದೂರ ಇಡಬೇಕು. ಮುಸ್ಲಿಂ ಸಮುದಾಯದ ಮತ ಪಡೆಯಲು ಮುಸ್ಲಿಂ ಸಂಘಟನೆಗಳೊಂದಿಗೆ ಕಾಂಗ್ರೆಸ್ ಕೈ ಜೋಡಿಸುತ್ತಿರುವುದು ಖಂಡನೀಯ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ. ಕೋಲಾರದಲ್ಲಿ 60 ಸಾವಿರಕ್ಕೂ ಹೆಚ್ಚು ದಲಿತರ ಮತಗಳಿವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಅವರನ್ನು ಸೋಲಿಸಿರುವ ಸಿಟ್ಟನ್ನು ಅಲ್ಲಿನ ದಲಿತರು ಹಾಗೂ ಒಕ್ಕಲಿಗರು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ವರ್ತೂರು ಪ್ರಕಾಶ್‌ ಅವರಿಗೆ ಜಿಲ್ಲಾ ಕುರುಬರ ಸಂಘದ ಬೆಂಬಲವಿದೆ. ಮುಸ್ಲಿಮರ ಮತಗಳನ್ನೇ ನೆಚ್ಚಿಕೊಂಡರೆ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲುವುದು ಖಚಿತ ಎಂದರು.

ವಿಜಯಸಂಕಲ್ಪ ಯಾತ್ರೆ ಮಾರ್ಚ್‌ 1ರಿಂದ ಮಲೆ ಮಹಾದೇಶ್ವರ ಬೆಟ್ಟದಿಂದ ಆರಂಭವಾಗಿದ್ದು, ಮಾರ್ಗದುದ್ದಕ್ಕೂ ಜನರಿಂದ ಅಭೂತಪೂರ್ವ ಹಾಗೂ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತಿದೆ. ಈಗಾಗಲೇ 49 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಿದ್ದು ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ರಾಜ್ಯದ ನಾಲ್ಕೂ ದಿಕ್ಕುಗಳಿಂದಲೂ ಯಾತ್ರೆ ಆರಂಭವಾಗಿದ್ದು, ಮಾರ್ಚ್ 25ರಂದು ದಾವಣಗೆರೆ ತಲುಪಲಿವೆ. ಅಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.

ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಎಂ. ರಾಜೇಂದ್ರ, ಸಹ ಸಂಚಾಲಕ ಎಸ್. ದತ್ತಾತ್ರಿ, ಶಾಸಕರಾದ ಕೆ.ಬಿ. ಅಶೋಕ ನಾಯ್ಕ, ಎಸ್. ರುದ್ರೇಗೌಡರು, ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಶಿವರಾಜ್, ಬಿ.ಕೆ. ಶ್ರೀನಾಥ್, ಕೆ.ವಿ. ಅಣ್ಣಪ್ಪ, ಹೃಷಿಕೇಶ್ ಪೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT