ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಮೇಶ್ವರ ವಿರುದ್ಧ ಪ್ರಕರಣ: ಇಂದು ಕಾಂಗ್ರೆಸ್‌ ಪ್ರತಿಭಟನೆ

Last Updated 8 ಮಾರ್ಚ್ 2021, 8:32 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ವಿರುದ್ಧ ದ್ವೇಷ ರಾಜಕಾರಣದ ಕುಮ್ಮಕ್ಕಿನಿಂದ ಪೊಲೀಸರು ದೂರು ದಾಖಲಿಸಿದ್ದಾರೆ. ಪೊಲೀಸರ ಪಕ್ಷಪಾತ ಧೋರಣೆ ಖಂಡಿಸಿ ಮಾರ್ಚ್‌ 9ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಬಿಜೆಪಿ ಜಿಲ್ಲೆಯಲ್ಲೂ ದ್ವೇಷದ ರಾಜಕಾರಣ ಮಾಡಲು ಹೊರಟಿದೆ. ಸ್ವಾತಂತ್ರ್ಯದ ನಂತರ ಜಿಲ್ಲೆಯ ರಾಜಕಾರಣ ಇತಿಹಾಸದಲ್ಲಿ ಇಂತಹ ರಾಜಕಾರಣ ಇರಲಿಲ್ಲ. ಎಲ್ಲಾ ಪಕ್ಷಗಳಲ್ಲೂ ಗೊಂದಲ, ಅಸಹನೆ, ಪರಸ್ಪರ ಮಾತು, ವಾಕ್ಸಮರ ಸಾಮಾನ್ಯವಾಗಿತ್ತು. ಆದರೆ, ಪೊಲೀಸರಿಗೆ ದೂರು ನೀಡುವ ದ್ವೇಷದ ರಾಜಕಾರಣ ಮಾಡುವ ದುಷ್ಟತನದ ಉದಾಹರಣೆ ಇದೇ ಮೊದಲು. ಬಿಜೆಪಿಯ ಮುಖಂಡರು ಇಂತಹ ಕೆಲಸ ಆರಂಭಿಸಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆರತ್ನಾಕರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಬೇಳೂರು ಗೋಪಾಲ ಕೃಷ್ಣ, ಶಾಂತವೀರಪ್ಪ ಗೌಡ ಸೇರಿದಂತೆ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

ಭದ್ರಾವತಿಯಲ್ಲಿ ನಡೆದದ್ದು ಒಂದು ಚಿಕ್ಕ ಘಟನೆ. ಕಾಂಗ್ರೆಸ್‌ ಪ್ರಾಯೋಜಿತ ಕಬಡ್ಡಿ ಪಂದ್ಯಾವಳಿ. ಬಿಜೆಪಿ ಕಾರ್ಯಕರ್ತರೂ ಪಕ್ಷಭೇದ ಮರೆತು ಭಾಗವಹಿಸಿದ್ದರು. ಪಂದ್ಯಮ ಸಮಾರೋಪದಲ್ಲಿ ವಿನಾಕಾರಣ ಜಗಳ ಆರಂಭಿಸಿದ್ದಾರೆ. ಸುಮಾರು 11 ಲಕ್ಷ ಬೆಲೆ ಬಾಳುವ ಮ್ಯಾಟ್‌ಗಳನ್ನು ಸುಡುಲು ಹೋದಾಗ ತಳ್ಳಾಟ, ನೂಕಾಟ ನಡೆದಿದೆ. ಕ್ಷುಲ್ಲಕ ಘಟನೆ ನೆಪವಾಗಿಟ್ಟುಕೊಂಡು ಕೋಮುಗಲಭೆ ಎಬ್ಬಿಸಿದ್ದಾರೆ. ವಿನಾಕಾರಣ ಶಾಸಕರು ಮತ್ತು ಅವರ ಕುಟುಂಬ, ಕಾರ್ಯಕರ್ತರ ವಿರುದ್ಧ 302 ಹಾಗೂ ಜಾತಿನಿಂದನೆ ಪ್ರಕರಣ ದಾಳಿಸಿದ್ದಾರೆ ಎಂದು ದೂರಿದರು.

ಬಿಜೆಪಿ ಸರ್ಕಾರ ಕೋಮಾದಲ್ಲಿದೆ. ಬಿಜೆಪಿಯ ಸಚಿವರು ಸಾಲು ಸಾಲಾಗಿ ಹೆಣ್ಣಿನ ಶೋಷಣೆ ಮಾಡುತ್ತಿರುವುದು ಜಗಜ್ಜಾಹೀರವಾಗಿದೆ. ಯಡಿಯೂರಪ್ಪ ಅವರು ಕೇವಲ ಎರಡು ತಿಂಗಳು ಮುಖ್ಯಮಂತ್ರಿಯಾಗಿರುತ್ತಾರೆ. ಇನ್ನಾದರೂ ಈ ದ್ವೇಷದ ರಾಜಕಾರಣ ಬಿಟ್ಟು ಒಳ್ಳೆಯ ಹೆಸರು ಪಡೆಯಲಿ ಎಂದು ಕುಟುಕಿದರು.

ಶಾಸಕ ಸಂಗಮೇಶ್ವರ ಅವರ ಸಹೋದರ ಜಗನ್ನಾಥ್, ‘ನನ್ನ ಹೆಸರು ಬಹುಶಃ ಪೊಲೀಸರಿಗೆ ಗೊತ್ತಿಲ್ಲ. ಹಾಗಾಗಿ, ನನ್ನ ಹೆಸರು ಕೈಬಿಟ್ಟಿದ್ದಾರೆ. ನಮ್ಮ ಕುಟುಂಬದ ಹಲವರು ಘಟನೆ ನಡೆದ ದಿನ ಇಲ್ಲದಿದ್ದರೂ ಪ್ರಕರಣದಲ್ಲಿ ಹೆಸರು ಸೇರಿಸಿದ್ದಾರೆ. ಬಿಜೆಪಿ ನೀಡಿದ ಪಟ್ಟಿಯ ಆಧಾರದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್, ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿ ಸೌಗಂಧಿಕಾ, ಪಂಡಿತ್‌ ವಿ. ವಿಶ್ವನಾಥ್ (ಕಾಶಿ), ಪಲ್ಲವಿ, ವಿಜಯಲಕ್ಷ್ಮಿ ಪಾಟೀಲ್, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ಚಂದ್ರಭೂಪಾಲ್, ಆರ್.ಸಿ.ನಾಯಕ್, ಪ್ರವೀಣ್ ಕುಮಾರ್, ಎಲ್.ರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT