ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Last Updated 8 ಅಕ್ಟೋಬರ್ 2022, 6:08 IST
ಅಕ್ಷರ ಗಾತ್ರ

ಸಾಗರ: ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ‘ಪ್ರಜಾಪ್ರಭುತ್ವದಲ್ಲಿ ಲೋಕಸಭೆ, ವಿಧಾನಸಭೆಗೆ ಇರುವಷ್ಟೇ ಪ್ರಾಮುಖ್ಯತೆ ಗ್ರಾಮ ಪಂಚಾಯಿತಿಗೂ ಇದೆ. ಆದರೆ ಪಂಚಾಯಿತಿ ಅಧ್ಯಕ್ಷರಿಗೆ ಇದ್ದ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಕಿತ್ತುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವುದು ಪ್ರಜಾಪ್ರಭುತ್ವದ ತಳಪಾಯವನ್ನು ಅಲುಗಾಡಿಸಿದಂತಾಗಿದೆ’ ಎಂದು ಟೀಕಿಸಿದರು.

‘ರಾಜ್ಯದ ಬೆರಳೆಣಿಕೆಯ ಪಂಚಾಯಿತಿ ಅಧ್ಯಕ್ಷರಿಂದ ಹಣ ದುರುಪಯೋಗ ಆಗಿದೆ ಎಂಬ ಕಾರಣಕ್ಕೆ ಎಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಅನುಮಾನದಿಂದ ನೋಡುವ ಮೂಲಕ ರಾಜ್ಯ ಸರ್ಕಾರ ಪಂಚಾಯಿತಿ ವ್ಯವಸ್ಥೆಗೆ ಅಪಮಾನ ಮಾಡಿದೆ. ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವುದು ಎಂದರೆ ಅದು ಗ್ರಾಮೀಣ ಜನರ ಅಧಿಕಾರವನ್ನು ಕಿತ್ತುಕೊಂಡಂತೆ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವ ಮೂಲಕ ಗಾಂಧೀಜಿ ತತ್ವಗಳಿಗೆ ತಿಲಾಂಜಲಿ ಇಡಲು ಮುಂದಾಗಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ ಚೆಕ್‌ಗಳಿಗೆ ಸಹಿ ಮಾಡಲು ಪಂಚಾಯಿತಿ ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಕೋವಿ, ‘ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಪಿಡಿಒಗಳಿಗೆ ನೀಡುವ ಮೂಲಕ ರಾಜ್ಯ ಸರ್ಕಾರ ಅವರಿಂದ ಶೇ 40 ಕಮಿಷನ್ ಪಡೆಯಲು ಹುನ್ನಾರ ನಡೆಸಿರುವಂತೆ ಕಾಣುತ್ತಿದೆ. ಈ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಸರ್ಕಾರ ಮುಂದಾಗಿದೆ’ ಎಂದು ದೂರಿದರು.

ಮಾಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ, ‘ಪಂಚಾಯಿತಿ ಅಧ್ಯಕ್ಷರು ಭ್ರಷ್ಟಾಚಾರ ನಡೆಸಿದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ನೆಪ ಹೇಳುತ್ತಿದೆ. ಸಂಸದರು, ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಅವರ ಮೇಲೆ ಉತ್ತರದಾಯಿತ್ವದ ಹೊರೆ ಹೊರಿಸಲು ಸರ್ಕಾರಕ್ಕೆ ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಪ್ರಮುಖರಾದ ಮಹಾಬಲ ಕೌತಿ, ರವಿಕುಮಾರ ಗೌಡ, ಮಧು ಮಾಲತಿ, ಆನಂದ ಭೀಮನೇರಿ, ಮನೋಜ್ ಜನ್ನೆಹಕ್ಲು, ಡಿ.ಎಂ.ರಾಘವೇಂದ್ರ ಸಫಿಯಾ ಅಬೂಬಕರ್, ಅಣ್ಣಪ್ಪ ಭೀಮನೇರಿ, ಲೋಕೇಶ್ ಗಾಳಿಪುರ, ಮಹ್ಮದ್ ಜಿಕ್ರಿಯಾ, ನಾರಾಯಣ ಸೂರನಗದ್ದೆ, ವೀರಭದ್ರ, ಸಂದೀಪ್, ಶರತ್ ನಾಗಪ್ಪ ಇದ್ದರು.

‘ಹಗರಣದ ತನಿಖೆ ನಡೆದರೆ ಈಶ್ವರಪ್ಪ ಜೈಲಿಗೆ’

‘ಗ್ರಾಮ ಪಂಚಾಯಿತಿಗಳ ಒಪ್ಪಿಗೆ ಇಲ್ಲದೇ ರಾಜ್ಯದ ಎಲ್ಲ ಪಂಚಾಯಿತಿಗಳಿಗೆ ಕಸ ವಿಲೇವಾರಿ ವಾಹನ ಪೂರೈಸುವ ಯೋಜನೆಗೆ ಹಿಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದ್ದಾರೆ. ಈ ವಾಹನ ಹಾಗೂ ಸೋಲಾರ್ ಅಳವಡಿಸುವ ಟೆಂಡರ್ ಸಚಿವರ ಪುತ್ರನಿಗೆ ದೊರಕಿದೆ ಎಂಬ ಆರೋಪವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆದರೆ ಈಶ್ವರಪ್ಪ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್. ಜಯಂತ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT