ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗ್ಗಾನ್ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Last Updated 3 ನವೆಂಬರ್ 2021, 10:43 IST
ಅಕ್ಷರ ಗಾತ್ರ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಬುಧವಾರ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಾಗಿರುವ ಯಂತ್ರಗಳು ಹಾಳಾಗಿವೆ. ಸುಸ್ಥಿತಿಯಲ್ಲಿರುವ ಯಂತ್ರಗಳು ನುರಿತ ತಜ್ಞರಿಲ್ಲದೆ ಸ್ಥಗಿತಗೊಂಡಿವೆ. ಇಂತಹ ಅವ್ಯವಸ್ಥೆಯಿಂದ ರೋಗಿಗಳು ಕಂಗಾಲಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿರ್ಲಕ್ಷ್ಯದಿಂದ ಐತಿಹಾಸಿಕ ಆಸ್ಪತ್ರೆ ದುಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಯಾಲಿಸಿಸ್, ಎಂಆರ್‌ಐ, ಸಿ.ಟಿ ಸ್ಕ್ಯಾನಿಂಗ್‌, ಎಕ್ಸ್ ರೇ, ಸ್ಕ್ಯಾನ್ ಸೇರಿದಂತೆ ಬಹುತೇಕ ಯಂತ್ರಗಳು ದುರಸ್ತಿಗೆ ಬಂದಿವೆ. ಯಂತ್ರಗಳು ಹಾಳಾಗಿ ಹಲವು ತಿಂಗಳು ಕಳೆದರೂ ಸರಿಪಡಿಸಿಲ್ಲ. ದುರಸ್ತಿಗೂ ಹಣ ಇಲ್ಲದಷ್ಟು ಮೆಗ್ಗಾನ್ ಆಸ್ಪತ್ರೆ ದಿವಾಳಿಗೆ ಬಂದಿದೆ. ಇದು ಬಿಜೆಪಿ ಸರ್ಕಾರದ ನಿರ್ಲಕ್ಷ್ಯ, ಜಿಲ್ಲಾ ಉಸ್ತುವಾರಿ ಸಚಿವರ ಉದಾಸೀನತೆ ಎಂದು ದೂರಿದರು.

ಮೆಗ್ಗಾನ್‌ ವೈದ್ಯರು ರಕ್ತದೊತ್ತಡ, ರಕ್ತ, ಮೂತ್ರದಂತಹ ಚಿಕ್ಕ ಪುಟ್ಟ ಪರೀಕ್ಷೆಗಳಿಗೂ ಆಸ್ಪತ್ರೆಯ ಹೊರಗಿನ ಖಾಸಗಿ ಪ್ರಯೋಗಾಲಯಗಳಿಗೆ ರೋಗಿಗಳನ್ನು ಕಳುಹಿಸುತ್ತಾರೆ. ಹೆರಿಗೆ ವಿಭಾಗ ಅವ್ಯವಸ್ಥೆಯ ಆಗರವಾಗಿದೆ. ತಾಯಿ ಮಗು ಸುರಕ್ಷಿತವಾಗಿ ಹೆರಿಗೆಯಾಗಿ ಬರುವುದೇ ಕಷ್ಟವಾಗಿದೆ. ಸರ್ಕಾರದ ಯೋಜನೆ ‘ನಗು –ಮಗು’ ಸದ್ದಿಲ್ಲದೇ ನಿಂತು ಹೋಗಿದೆ ಎಂದು ಆರೋಪಿಸಿದರು.

ಈಗಲಾದರೂ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕರ ಆರೋಗ್ಯದ ಕಡೆ ಗಮನ ಹರಿಸಬೇಕು. ಕೆಟ್ಟು ಹೋಗಿರುವ ಯಂತ್ರಗಳನ್ನು ತಕ್ಷಣ ದುರಸ್ತಿಗೊಳಿಸಿ ಜನರ ಪ್ರಾಣ ಉಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಎಸ್.ಪಿ. ಶೇಷಾದ್ರಿ, ಇಸ್ಮಾಯಿಲ್ ಖಾನ್, ದೇವೇಂದ್ರಪ್ಪ, ವೈ.ಎಚ್.ನಾಗರಾಜ್, ಯಮುನಾ ರಂಗೇಗೌಡ, ರಾಮೇಗೌಡ, ಚಂದ್ರಭೂಪಾಲ್, ಆರೀಫ್, ಮಧುಸೂದನ್, ಇಕ್ಕೇರಿ ರಮೇಶ್, ಚೇತನ್, ರಾಜು, ಜಗದೀಶ್, ಎನ್.ಡಿ. ಪ್ರವೀಣ್, ಸೌಗಂಧಿಕಾ ರಘುನಾಥ್, ಜಿ.ಡಿ. ಮಂಜುನಾಥ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT