ಭಾನುವಾರ, ಮೇ 22, 2022
21 °C
ತಾಲ್ಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಸಂಸದ ಬಿ.ವೈ.ರಾಘವೇಂದ್ರ

ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣಕ್ಕಾಗಿ ₹ 40 ಕೋಟಿ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಕೂಡಲೇ ಟೆಂಡರ್‌ ಕರೆಯಲಾಗುವುದು ಎಂದು ಸಂಸದ ಬಿ.ವೈ. ರಾಘವೆಂದ್ರ ಹೇಳಿದರು.

ಇಲ್ಲಿನ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಉಚಿತ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.

ಇನ್ನೂ ₹ 20 ಕೋಟಿ ಕೊರತೆ ಇದೆ. ಮಂಜೂರಾದ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಬಹುದು. ಈ ಆಸ್ಪತ್ರೆ ಕಟ್ಟಡವನ್ನು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಅಥವಾ ಬೇರೆಡೆ ಜಾಗ ನೋಡಿ ಮಾಡಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

‘ಕೋವಿಡ್‍ನಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ನಡೆದುಕೊಳ್ಳಬೇಕು. ಕೆಲಸದ ಒತ್ತಡಗಳ ನಡುವೆಯೂ ಒಂದು ಗಂಟೆಯಾದರೂ ಯೋಗಾಭ್ಯಾಸ, ವ್ಯಾಯಾಮಗಳಿಗೆ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು 1450 ಹಾಸಿಗೆಗಳುಳ್ಳ ಸಾಮರ್ಥ್ಯಕ್ಕೆ ಉನ್ನತೀಕರಿಸಲಾಗಿದೆ. ಶಿಕಾರಿಪುರದಲ್ಲೂ 150ರಿಂದ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಉನ್ನತೀಕರಿಸಲಾಗುತ್ತಿದೆ’ ಎಂದರು.

ಗರ್ಭಕೋಶ ಸಮಸ್ಯೆ ಬಗ್ಗೆ ಹಿಂಜರಿಕೆ ಬೇಡ: ಹೆಣ್ಣು ಮಕ್ಕಳು ಗರ್ಭಕೋಶದ ಸಮಸ್ಯೆ ಬಗ್ಗೆ ವೈದ್ಯರಲ್ಲಿ ತೋರಿಸಿಕೊಳ್ಳಲು ಹಿಂಜರಿಯುತ್ತಾರೆ. ಮಂಡ್ಯದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಒಂದರಲ್ಲಿ 900 ಗರ್ಭಕೋಶದ ಸಮಸ್ಯೆಗಳು ವರದಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದರು.

ಹೆಣ್ಣುಮಕ್ಕಳ ಗರ್ಭಕೋಶದ ಸಮಸ್ಯೆಗಳು ಸೇರಿ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇಂತಹ ಮೇಳಗಳು ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕಾಳಜಿ ವಹಿಸಬೇಕು. ಕೇಂದ್ರ ಸರ್ಕಾರ ಆರೋಗ್ಯಕ್ಕೆ ಪೂರಕವಾಗಿರುವ ಯೋಗಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕ್ರೀಡಾ ವಲಯದಲ್ಲಿ, ಹಳ್ಳಿ ಹಳ್ಳಿಯಲ್ಲಿ ಯೋಗ ಕೇಂದ್ರ ತೆರೆಯುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.

ಕೋವಿಡ್‍ನಂತಹ ಸಂಕಷ್ಟ ಮತ್ತೊಮ್ಮೆ ಬರಬಾರದೆಂದು ಮನೆ ಮನೆಗೆ ತೆರಳಿ ಲಸಿಕೆ ನೀಡುವಂತಹ ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರು, ಕಾರ್ಯಕರ್ತರು ರಾಜ್ಯಕ್ಕೆ ಗೌರವ ತರುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ‘185 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ ನಮ್ಮ ದೇಶ ಲಸಿಕಾ ಅಭಿಯಾನದಲ್ಲಿ ನಂ.1 ಸ್ಥಾನದಲ್ಲಿದೆ. ಆರೋಗ್ಯ ಕಾರ್ಡ್, ಕೋವಿಡ್ ಲಸಿಕಾ ಅಭಿಯಾನದಲ್ಲಿ ಶಿವಮೊಗ್ಗ ಜಿಲ್ಲೆ ಮುಂಚೂಣಿಯಲ್ಲಿರಲು ವೈದ್ಯರು, ಸಿಬ್ಬಂದಿ ತಂಡದ ಶ್ರಮವೇ ಕಾರಣ’ ಎಂದರು.

ಸಿಮ್ಸ್‌ ನಿರ್ದೇಶಕ ಡಾ. ಸಿದ್ದಪ್ಪ ಸ್ವಾಗತಿಸಿದರು. ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ಡಿಎಚ್‍ಒ ಡಾ. ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು