ಗುರುವಾರ , ಡಿಸೆಂಬರ್ 1, 2022
20 °C
ಸಾಗರದ ಸಿವಿಲ್ ನ್ಯಾಯಾಲಯದಿಂದ ಮಧ್ಯಂತರ ಅರ್ಜಿ ಮೇಲೆ ಆದೇಶ

ಅರ್ಚಕ ಶೇಷಗಿರಿ ಭಟ್‌ರ ಪೂಜಾ ಹಕ್ಕಿಗೆ ಅಡ್ಡಿಪಡಿಸದಂತೆ ನಿರ್ಬಂಧಕಾಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಅರ್ಚಕ ಶೇಷಗಿರಿ ಭಟ್ ಅವರಿಗೆ ನಿತ್ಯ ಪೂಜೆ, ವಿಶೇಷ ಪೂಜೆ, ನವರಾತ್ರಿ ಪೂಜೆ, ಚಂಡಿಕಾ ಯಾಗ, ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಗಳಿಗೆ ಧರ್ಮದರ್ಶಿ ರಾಮಪ್ಪ ಅವರು ಅಡ್ಡಿ, ಆತಂಕ ಉಂಟು ಮಾಡಬಾರದು ಎಂದು ಇಲ್ಲಿನ ಸಿವಿಲ್ ನ್ಯಾಯಾಲಯ ಸೋಮವಾರ ನಿರ್ಬಂಧಕಾಜ್ಞೆಯ ಮಧ್ಯಂತರ ಆದೇಶ ಹೊರಡಿಸಿದೆ.

ದೇವಸ್ಥಾನದ ಅರ್ಚಕರಾಗಿ ಧಾರ್ಮಿಕಕಾರ್ಯ ನಡೆಸಲು ತಮಗೆ ಇರುವ ಹಕ್ಕಿಗೆ ಅಡ್ಡಿ ಉಂಟು ಮಾಡಬಾರದು, ಬೇರೆ ಅರ್ಚಕರ ಮೂಲಕ ಚಂಡಿಕಾ ಯಾಗ ಸೇರಿ ಇತರ ಧಾರ್ಮಿಕ ಕಾರ್ಯ ನಡೆಸಲು ತೊಂದರೆ ಕೊಡಬಾರದು ಎಂದು ಕಳೆದ ಸೆ. 20ರಂದು ಶೇಷಗಿರಿ ಭಟ್ ಅವರು ರಾಮಪ್ಪ ವಿರುದ್ಧ ದಾವೆ ದಾಖಲಿಸಿದ್ದರು.

ಸೆ. 23ರಂದು ಉಭಯ ಪಕ್ಷಗಾರರ ಪರ ವಕೀಲರು ವಾದ ಮಂಡಿಸಿದ್ದು, ಮಧ್ಯಂತರ ಅರ್ಜಿಯ ಮೇಲಿನ ಆದೇಶಕ್ಕಾಗಿ ಸೆ. 26ರಂದು ದಿನಾಂಕ ನಿಗದಿಪಡಿಸಲಾಗಿತ್ತು. ದಾವೆಯಲ್ಲಿ ಹಾಜರುಪಡಿಸಿರುವ ದಾಖಲೆಗಳಿಂದ ಮತ್ತು ಈ ಹಿಂದೆ ಶೇಷಗಿರಿ ಭಟ್ ಹಾಗೂ ರಾಮಪ್ಪ ಅವರ ನಡುವೆ ನ್ಯಾಯಾಲಯದಲ್ಲಿ ಆಗಿದ್ದ ರಾಜಿ ಸಂಧಾನದ ಅಂಶಗಳನ್ನು ಪರಿಶೀಲಿಸಿದಾಗ ಶೇಷಗಿರಿ ಭಟ್ ಅವರು ದೇವಸ್ಥಾನದ ಅರ್ಚಕರು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿಂದೆ ದೇವಸ್ಥಾನದ ಆವರಣದಲ್ಲಿ ಹೊಡೆದಾಟ ನಡೆದು ಅರ್ಚಕ ಶೇಷಗಿರಿ ಭಟ್ ಅವರ ಮೇಲೆ ಮೊಕದ್ದಮೆ ದಾಖಲಾಗಿ ಆರೋಪ ಪಟ್ಟಿ ಸಲ್ಲಿಕೆಯಾಗಿರುವ ಮಾತ್ರಕ್ಕೆ ಅವರಿಗೆ ಇರುವ ಪೂಜೆಯ ಹಕ್ಕನ್ನು ನಿರಾಕರಿಸಲಾಗದು ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪೂಜೆಯ ಹಕ್ಕನ್ನು ನೀಡಿದ ಮಾತ್ರಕ್ಕೆ ಶೇಷಗಿರಿ ಭಟ್ ಅವರು ದೇವಸ್ಥಾನದ ಆಡಳಿತವನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ಪಡೆಯುವ ಸಾಧ್ಯತೆ ಇದೆ ಎಂಬ ರಾಮಪ್ಪ ಪರ ವಕೀಲರ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಇಂತಹ ಸಾಧ್ಯತೆಗಳು ಇದೆ ಎನ್ನುವ ಬಗ್ಗೆ ಯಾವುದೇ ಪೂರಕ ದಾಖಲೆಗಳನ್ನು ಹಾಜರುಪಡಿಸಲಾಗಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ದಾವೆ ಇತ್ಯರ್ಥವಾಗುವವರೆಗೂ ಶೇಷಗಿರಿ ಭಟ್ ಅವರ ಪೂಜಾ ಹಕ್ಕಿಗೆ ಅಡ್ಡಿ ಪಡಿಸಬಾರದು ಎಂದು ಆದೇಶಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಅ. 31ಕ್ಕೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು