ಬುಧವಾರ, ಮೇ 18, 2022
25 °C

ಶಿವಮೊಗ್ಗ: ಮತಾಂತರ ನಿಷೇಧ ಕಾಯ್ದೆಗೆ ಸಿಪಿಐ (ಎಂ) ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮತಾಂತರ ನಿಷೇಧ ಕಾಯ್ದೆ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು ಕಸಿಯುವ ಸಂವಿಧಾನ ವಿರೋಧಿ ಕ್ರಮ. ಧಾರ್ಮಿಕ ಸ್ವಾತಂತ್ರ್ಯ ಎಂದರೆ ಈ ದೇಶದ ಪ್ರಜೆಗಳು ತನಗೆ ಇಷ್ಟ ಬಂದ ಮತ ಧರ್ಮ ಅನುಸರಿಸಬಹುದು. ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡಬಹುದು. ಇದು ಪ್ರತಿಯೊಬ್ಬ ಪ್ರಜೆಯ ಮೂಲಭುತ ಹಕ್ಕು ಎಂದು ಪ್ರತಿಪಾದಿಸಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಂಡಿಸಿದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಒಂದು ದೌರ್ಜನ್ಯಕಾರಿ ಸರ್ವಾಧಿಕಾರದ ಕ್ರಮ. ಸಮಾನತೆ, ಸಾಮಾಜಿಕ ನ್ಯಾಯಗಳಿಗೆ ವಿರೋಧಿಯಾಗಿದೆ. ಭಾರತವನ್ನು ಜಾತಿ ತಾರತಮ್ಯ, ಅಸಮಾನತೆಯ ಆಧಾರದ ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಹುನ್ನಾರ ಅಡಗಿದೆ. ಈ ಕಾಯ್ದೆಯನ್ನು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಹಿಂಪಡೆಯಬೇಕು ಎಂದು  ಆಗ್ರಹಿಸಿದರು.

ಯಾವುದೇ ಒಂದು ಧರ್ಮದ ಜನ ಮತ್ತೊಂದು ಧರ್ಮಕ್ಕೆ ಬದಲಾಗುತ್ತಾರೆ ಎಂದಾದರೆ ಆ ಧರ್ಮದ ಧಾರ್ಮಿಕ ಮುಖಂಡರು, ಪ್ರತಿಪಾದಕರು ತಮ್ಮ  ಮತಗಳಲ್ಲಿರುವ ದೋಷ, ಸಮಸ್ಯೆ ನಿವಾರಿಸಬೇಕು. ಧರ್ಮವನ್ನೇ ಹೀಯಾಳಿಸುವುದು ಸರಿಯಲ್ಲ. ಸರ್ವಾಧಿಕಾರಿ ಕಾನೂನುಗಳ ಮೂಲಕ ಜಾರಿಗೆ ತರುವುದು ನ್ಯಾಯವಲ್ಲ. ರಾಜ್ಯಪಾಲರು ಈ ಕಾಯ್ದೆಗೆ ಅಂಕಿತ ಹಾಕಬಾರದು ಎಂದು ಒತ್ತಾಯಿಸಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ. ನಾರಾಯಣ, ಮುಖಂಡರಾದ ಅನಂತರಾಮು, ಹನುಮಮ್ಮ, ಲಕ್ಷ್ಮಿ ನಾರಾಯಣ್, ಶಿವಣ್ಣ, ಪ್ರಭಾಕರ್, ಕೃಷ್ಣೋಜಿರಾವ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು