ಭಾನುವಾರ, ಏಪ್ರಿಲ್ 2, 2023
33 °C
ಹೊಂಬುಜದಲ್ಲಿ ಪಂಚಕಲ್ಯಾಣ ಮಹೋತ್ಸವ, ಧರ್ಮಸಭೆ

ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸಿ: ದಂಡಾವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಪ್ಪನ್‌ಪೇಟೆ: ‘ವರ್ತಮಾನದ ಕಾಲಘಟ್ಟದಲ್ಲಿ ಮೊಬೈಲ್ ಮಕ್ಕಳ ಆರೋಗ್ಯವನ್ನು ಹಾಳು ಮಾಡಿದೆ. ಮನೆಯವರ ಸಂಬಂಧ ಶಿಥಿಲ ಮಾಡಿದೆ. ಆದರೆ ಪುಸ್ತಕಗಳು ಹಾಗಲ್ಲ. ಅವು ನಮಗೆ ಘನವಾದ ಮಾನವೀಯ ಮೌಲ್ಯಗಳನ್ನು ಕಲಿಸುತ್ತವೆ’ ಎಂದು ಪತ್ರಕರ್ತ ಪದ್ಮರಾಜ ದಂಡಾವತಿ ಅಭಿಪ್ರಾಯಪಟ್ಟರು.

ಸಮೀಪದ ಹೊಂಬುಜದ ಪಾಶ್ವನಾಥ ತೀರ್ಥಂಕರರ ಮತ್ತು ಪದ್ಮಾವತಿ ಅಮ್ಮನವರ ಸನ್ನಿಧಾನದಲ್ಲಿ ಗುರುವಾರ ನಡೆದ ಐದನೇ ದಿನದ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ  ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಪಂಪ, ರನ್ನ, ಜನ್ನ, ಪೊನ್ನ, ಶ್ರೀವಿಜಯ, ನಾಗಚಂದ್ರ ಇವರೆಲ್ಲ ಜೈನ ಕವಿಗಳು. ಇಂದು ನಾವು ಇವರನ್ನು ಮರೆತಿರುವುದು ವಿಷಾದಕರ ಸಂಗತಿ. ಪ್ರತಿಯೊಬ್ಬ ಜೈನರ ಮನೆಯಲ್ಲಿ ಕನಿಷ್ಠ ಒಂದು ನೂರು ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.
ಬಾಲ್ಯದಲ್ಲೇ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿ, ಸುಸಂಸ್ಕೃತರ
ನ್ನಾಗಿ ಮಾಡಬೇಕು. ತಾಯಂದಿರು ಮಕ್ಕಳನ್ನು ಮಲಗಿಸುವಾಗ ಕೈಯಲ್ಲಿ ಮೊಬೈಲ್ ನೀಡದೆ ಜೋಗುಳ ಹಾಗೂ  ರಾಮಾಯಣ ಮಹಾಭಾರತದಂತಹ ಕಥೆಗಳನ್ನು ಹೇಳಿ ಮಲಗಿಸುವುದರಿಂದ ಮಕ್ಕಳಲ್ಲಿ ವೈಚಾರಿಕತೆ ಬೆಳೆಯಲು ಸಹಕಾರಿಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಹತ್ತು ವರ್ಷಗಳಲ್ಲಿ ಈ ಕ್ಷೇತ್ರ ಅಸಾಧ್ಯವಾದ ಅಭಿವೃದ್ಧಿ ಕಂಡಿದೆ. ರೂಪಾಂತರ ಎನ್ನಬಹುದಾದ ಬದಲಾವಣೆ ಇದು.
ಹೊಂಬುಜ ಶ್ರೀ ಮಠಕ್ಕೆ ಇಂಥ ಗುರುಗಳನ್ನು ದಯಪಾಲಿಸಿದ ಶ್ರವಣಬೆಳಗೊಳದ ಶ್ರೀಗಳು ಬಹಳ ದೊಡ್ಡವರು, ದಾರ್ಶನಿಕರು. ಈ ಎಲ್ಲ ಸ್ವಾಮೀಜಿಗಳದ್ದು ಅದ್ಭುತವಾದ ತ್ಯಾಗ, ಶ್ರದ್ಧೆ. ಸಮಾಜಕ್ಕಾಗಿ ತಮ್ಮ ಜೀವನ ಮುಡುಪು ಇಟ್ಟಿದ್ದಾರೆ ಎಂದರು.

ಜೈನ ಕ್ಷೇತ್ರಗಳಲ್ಲಿ ಮಠಗಳನ್ನು ಸ್ಥಾಪಿಸಿ, ಆರೋಗ್ಯ, ಉನ್ನತವಾದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉನ್ನತ ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಜೈನ ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸರ್ಕಾರ ಗುರುತಿಸಿ ಗೌರವಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಬೇಸರದ ಸಂಗತಿ ಎಂದರು.

ಹೊಂಬುಜ ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಿನಮಂದಿರದಲ್ಲಿ 108 ಕಳಸ ಸಹಿತ ಪಂಚಾಮೃತ ಅಭಿಷೇಕ, ಯಾಗ ಶಾಲೆಯಲ್ಲಿ ಅಭಿಷೇಕ ತ್ರಿಕುಂಡ ಹೋಮವಿಧಿ, ಪಂಚಾಮೃತ ಅಭಿಷೇಕ, ಅಮ್ಮನವರ ಬಸದಿಯಲ್ಲಿ ಪಂಚಾಮೃತ ಅಭಿಷೇಕ, ಪುನರ್ ಪ್ರತಿಷ್ಠೆ, ಶ್ರೀಬಲಿ, ಯಕ್ಷ ನೃತ್ಯ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

ಕಾರ್ಕಳದ ಲಲಿತ ಕೀರ್ತಿ ಯಕ್ಷಗಾನ ಕಲಾ ಮಂಡಳಿಯಿಂದ ಶ್ರೀಪಾರ್ಶ್ವನಾಥ ಚರಿತ್ರೆ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗ ನಡೆಯಿತು.

ಆಚಾರ್ಯ ಗುಣಧರನಂದಿ ಮುನಿ ಮಹಾರಾಜರು, ಮುನಿಶ್ರೀ ಪುಣ್ಯಸಾಗರ ಮಹಾರಾಜರು, ಆಯಿರ್ಕ ನೂತನ ಮತಿ ಮಾತಾಜಿ, ಅರಿಹಂತಗಿರಿ ದವಳಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಶಾಸಕ ಅಭಯ ಪಾಟೀಲ, ಸಂಜಯ ಪಾಟೀಲ, ವಿನೋದ ದೊಡ್ಡಣವರ, ರವಿರಾಜ
ಪಾಟೀಲ, ಸತೀಶಜೈನ್, ಅನಿಲಕಾಠ್ಮಂಡೋ, ಡಿ.ಆರ್.ಶಹಾ, ಎಂ.ಎಸ್.ಮೃತ್ಯುಂಜಯ, ಬಾಗಚಂದ್ ಸರಾವಗೀ, ಪದ್ಮಲತಾ ಡಾ.ನಿರಂಜನ್ ಜೈನ್, ಅನಿಲಶೇಠಿ, ಪುಷ್ಪರಾಜ ಜೈನ್, ಮುಖೇಶ್‌ಶಹಾ, ಸಂಜಯ ಬಾಕ್ಲೀವಾಲ, ಮನೋಜ್ ಪಾಟ್ನಿ, ರಾಜೇಂದ್ರಛಾವಾಡಾ, ಸರೋಜ್ ಜೈನ್ ಇದ್ದರು.

‘ಪಂಚ ಬಸದಿಯ ಜೀರ್ಣೋದ್ಧಾರ ಕೈಗೊಳ್ಳಿ’

ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಹೊಂಬುಜದ ಪಂಚ ಬಸದಿಯ ಜೀರ್ಣೋದ್ಧಾರ ಮಾಡಲು ಇಲಾಖೆಯು ಮುಂದಾಗುತ್ತಿಲ್ಲ. ಶ್ರೀ ಮಠಕ್ಕೂ ನಿರ್ವಹಣೆ ಮಾಡಲು ಬಿಡುತ್ತಿಲ್ಲ. ಕೂಡಲೇ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿ, ಜೈನ ಸಮುದಾಯದ ಆರಾಧ್ಯ ಮಂದಿರವಾದ ಪಂಚ ಬಸದಿಯನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಬೇಕು. ಅದರ ಸಮಗ್ರ ನಿರ್ವಹಣೆಯನ್ನು ಶ್ರೀಮಠದ ಆಡಳಿತಕ್ಕೆ ಹಸ್ತಾಂತರಿಸಬೇಕು. ಮುತ್ತಿನಕೆರೆ ಅಭಿವೃದ್ಧಿಪಡಿಸಬೇಕು ಎಂದು ಪದ್ಮರಾಜ ದಂಡಾವತಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು