ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಜಲಾಶಯ: ಬಿದಿರು ಮೆಳೆ ತೆಗೆದು, ತಡೆಗೋಡೆ ದುರಸ್ತಿಗೆ ವಿಘ್ನ

ಭದ್ರಾ ಜಲಾಶಯದ ತಡೆಗೋಡೆ ಸೋರಿಕೆ: ನೀರಾವರಿ ನಿಗಮ, ಅರಣ್ಯ ಇಲಾಖೆ ನಡುವೆ ಪತ್ರ ಸಮರ
Published 27 ಜುಲೈ 2023, 6:06 IST
Last Updated 27 ಜುಲೈ 2023, 6:06 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಉಂಬ್ಳೆಬೈಲು ಹುಲಿ ಸಂರಕ್ಷಿತ ಪ್ರದೇಶದ ಬಳಿ ಭದ್ರಾ ಜಲಾಶಯದ ತಡೆಗೋಡೆಯ (Saddle) ಮೇಲೆ ಬಿದಿರು ಮೆಳೆ ಬೆಳೆದಿದ್ದು, ತಡೆಗೋಡೆಯಿಂದ ನೀರು ಸೋರಲು ಆರಂಭಿಸಿದೆ. ಆದರೆ, ಬೆಳೆದ ಕಳೆ ತೆಗೆದು, ಜಲಾಶಯ ದುರಸ್ತಿಗೊಳಿಸುವ ವಿಷಯವು ಅರಣ್ಯ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮದ ನಡುವಿನ ಪತ್ರ ಸಮರಕ್ಕೆ ಕಾರಣವಾಗಿದೆ.

ಬಿದಿರುಮೆಳೆ ಕೊಳೆತಿದ್ದು ಅಲ್ಲಿ ಮಣ್ಣು ಸಡಿಲಗೊಂಡು ತಡೆಗೋಡೆಯಲ್ಲಿ ಕಳೆದೊಂದು ವರ್ಷದಿಂದ ಸಣ್ಣದಾಗಿ ನೀರು ಸೋರಿಕೆ ಆಗುತ್ತಿದೆ. ಕೊಳೆತಿರುವ ಬಿದಿರು ಮೆಳೆ ತೆಗೆದು ಹಾಕಿ ತಡೆಗೋಡೆ ದುರಸ್ತಿ ಮಾಡಲು ಅವಕಾಶ ಕೊಡಿ ಎಂದು ಕರ್ನಾಟಕ ನೀರಾವರಿ ನಿಗಮದಿಂದ ಬರೆದ ಪತ್ರಕ್ಕೆ ಅರಣ್ಯ ಇಲಾಖೆ ಮನ್ನಣೆ ಕೊಡುತ್ತಿಲ್ಲ ಎನ್ನುವುದು ನಿಗಮದ ದೂರು.

ಸುರಕ್ಷತೆಯ ಆಶಯ: ‘ಜಲಾಶಯದ ಆ ಭಾಗ ಭದ್ರಾ ಅಭಯಾರಣ್ಯದ ಹುಲಿ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಅದು ನಮ್ಮ ಜಾಗ. ಸಂರಕ್ಷಿತ ಪ್ರದೇಶ ಕೂಡ. ಅಲ್ಲಿ ಯಾವುದೇ ಕಾಮಗಾರಿಗೆ ಅವಕಾಶವಿಲ್ಲ. ಆ ಜಾಗ ನಿಮ್ಮದು ಎಂಬುದಕ್ಕೆ ಭೂಸ್ವಾಧೀನ ಪ್ರಕ್ರಿಯೆಯ ದಾಖಲೆ ಇದ್ದರೆ ಕೊಡಿ ಎಂದು ಅರಣ್ಯ ಇಲಾಖೆ ಕೇಳುತ್ತಿದೆ. ಇದರಿಂದಾಗಿ ನಮಗೆ ಜಲಾಶಯದ ಸುರಕ್ಷತೆಯ ಚಿಂತೆ ಮೂಡಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

‘ನೀರು ಸೋರಿಕೆ ತಡೆದು ದುರಸ್ತಿ ಮಾಡಲು ನಮಗೆ ಅವಕಾಶ ಕೊಡದಿದ್ದರೆ ಅವರಾದರೂ (ಅರಣ್ಯ ಇಲಾಖೆ) ಆ ಕೆಲಸ ಮಾಡಲಿ. ಈಗಷ್ಟೇ ಸೋರಿಕೆ ಶುರುವಾಗಿದೆ. ಸೋರಿಕೆ ಹೆಚ್ಚಿ ತಡೆಗೋಡೆ ಕುಸಿದರೆ ಜಲಾಶಯದಿಂದ ಒಮ್ಮೆಲೆ 10ರಿಂದ 12 ಟಿಎಂಸಿ ಅಡಿ ನೀರು ಹರಿದು ಹೋಗಿ ಅರಣ್ಯ ಪ್ರದೇಶದಲ್ಲಿ ಪ್ರವಾಹ ಉಂಟಾಗಲಿದೆ. ಸುತ್ತಲಿನ ಹಳ್ಳಿಗಳು ಮುಳುಗಡೆ ಆಗಲಿವೆ. ಜಲಾಶಯದ ಸುರಕ್ಷತೆ ಮಾತ್ರ ನಮ್ಮ ಆಶಯ’ ಎಂದು ಹೇಳಿದರು.

ನೀರಿನ ಸೋರಿಕೆಯ ಪ್ರಮಾಣ ಸದ್ಯಕ್ಕೆ ಜಾಸ್ತಿ ಇಲ್ಲ. ಈ ಬಾರಿ ಜಲಾಶಯ ಭರ್ತಿ ಆದರೆ ಮತ್ತೆ ಸೋರಿಕೆ ಕಾಣಿಸಿಕೊಳ್ಳಬಹುದು. ಕಳೆದೊಂದು ವರ್ಷದಿಂದ ಹುಲಿ ಯೋಜನಾ ಪ್ರದೇಶದ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೂ ದುರಸ್ತಿಗೆ ಸಹಕಾರ ಸಿಕ್ಕಿಲ್ಲ ಎಂದೂ ತಿಳಿಸಿದರು.

‘ಕೆಳಹಂತದಲ್ಲಿ ಬಹುಶಃ ಸಮಸ್ಯೆಯ ಗಾಂಭೀರ್ಯ ಮನವರಿಕೆ ಆಗಿಲ್ಲ. ಹೀಗಾಗಿ ಅನುಮತಿ ಕೊಡಲು ತಡ ಮಾಡಿರಬಹುದು. ಈ ಬಗ್ಗೆ ಚಿಕ್ಕಮಗಳೂರು ವೃತ್ತದ ಹುಲಿ ಯೋಜನೆಯ ಅಧಿಕಾರಿಯ ಜೊತೆ ಚರ್ಚಿಸುವೆ’ ಎಂದು ಶಿವಮೊಗ್ಗದ ಮುಖ್ಯ ಅರಣ್ಯಸಂರಕ್ಷಣಾಧಿರಿ ಕೆ.ಟಿ. ಹನುಮಂತಪ್ಪ ತಿಳಿಸಿದರು.

ಭದ್ರಾ ಜಲಾಶಯಕ್ಕೆ ಸಂಬಂಧಿಸಿದಂತೆ ಗಂಭೀರ ವಿಚಾರ ಪ್ರಸ್ತಾಪಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅರಣ್ಯಾಧಿಕಾರಿಗೆ ಮಾತನಾಡಿ ಅನುಮತಿ ಕೊಡಿಸಲು ಮುಂದಾಗುವೆ.
ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ

ಕೆಎನ್‌ಎನ್‌ ಮುಖ್ಯ ಎಂಜಿನಿಯರ್ ಸ್ಥಳ ಪರಿಶೀಲನೆ.. ತಡೆಗೋಡೆಯಿಂದ ನೀರು ಸೋರಿಕೆ ಆಗುವ ಪ್ರದೇಶಕ್ಕೆ ಈಚೆಗೆ ಭೇಟಿ ನೀಡಿರುವ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಾನಂದ ಬಣಕಾರ್ ಪರಿಶೀಲಿಸಿದ್ದಾರೆ. ಅವರ ಸೂಚನೆಯಂತೆ ಈಗ ಭದ್ರಾ ವನ್ಯಜೀವಿ ವಿಭಾಗದ ಚಿಕ್ಕಮಗಳೂರು ಡಿಎಫ್‌ಒಗೆ ಪತ್ರ ಬರೆದಿದ್ದೇವೆ. ಇನ್ನೊಂದು ವಾರ ಕಾಯಲಿದ್ದೇವೆ. ಅಲ್ಲಿಂದಲೂ ಪ್ರತಿಕ್ರಿಯೆ ಬರದಿದ್ದರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಸಿಸಿಎಫ್) ಪತ್ರ ಬರೆಯಲಾಗುವುದು ಎಂದು ರವಿಕುಮಾರ್ ಹೇಳಿದರು. ಸಚಿವ ಮಧು ಬಂಗಾರಪ್ಪಗೆ ಮನವಿ ಜಲಾಶಯದ ತಡೆಗೋಡೆ ದುರಸ್ತಿಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಕೋರಿ ಕರ್ನಾಟಕ ನೀರಾವರಿ ನಿಗಮದ ಭದ್ರಾ ಜಲಾಶಯ ಎಡದಂಡೆ ಕಾಲುವೆ (ಬಿಆರ್‌ಎಲ್‌ಬಿಸಿ) ವಿಭಾಗದಿಂದ ಬುಧವಾರ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಮಾಡಲಾಯಿತು.

ಸಹಕಾರ ನೀಡಲು ಸೂಚಿಸಿರುವೆ: ಡಿಸಿಎಫ್ ‘ಜಲಾಶಯದ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಉಂಬ್ಳೆಬೈಲು ವಲಯದ ಅಧಿಕಾರಿಗಳು ಬುಧವಾರ ಗಮನಕ್ಕೆ ತಂದಿದ್ದಾರೆ. ಕೆಎನ್‌ಎನ್‌ ಎಂಜಿನಿಯರ್‌ಗಳೊಂದಿಗೆ ಸ್ಥಳಕ್ಕೆ ತೆರಳಿ ಜಂಟಿ ಸಮೀಕ್ಷೆ ನಡೆಸಿ ಬಿದಿರು ಮೆಳೆ ತೆಗೆದು ತಡೆಗೋಡೆ ದುರಸ್ತಿ ಮಾಡಲು ಅವಕಾಶ ಮಾಡಿಕೊಡುವಂತೆ ವಲಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ’ ಎಂದು ಚಿಕ್ಕಮಗಳೂರು ವೃತ್ತದ ಭದ್ರಾ ಹುಲಿ ಸಂರಕ್ಷಣೆ ಯೋಜನೆ ಡಿಸಿಎಫ್ ಎಸ್.ಪ್ರಭಾಕರನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT