ಸೋಮವಾರ, ಮೇ 23, 2022
30 °C
ಮೈಕ್ರೋ ಎಟಿಎಂ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ಲಾಘನೆ

ರಾಷ್ಟ್ರೀಕೃತ ಬ್ಯಾಂಕ್‌ಗಳ ಮಟ್ಟಕ್ಕೆ ಡಿಸಿಸಿ ಬ್ಯಾಂಕ್‌ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರಾಮಾಣಿಕ, ಪಾರದರ್ಶಕ ಕೆಲಸದ ಮೂಲಕ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ರಾಷ್ಟ್ರೀಕೃತ ಬ್ಯಾಂಕ್‌ ರಾಷ್ಟ್ರೀಕೃತ ಬ್ಯಾಂಕ್‌ ಮಟ್ಟಕ್ಕೆ ಸೇವೆ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ಲಾಘಿಸಿದರು.

ನಗರದ ಕುವೆಂಪು ರಂಗಮಂದಿರದ ಆವರಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಣೆ ಹಾಗೂ ವಿವಿಧ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಬ್ಯಾಂಕ್‌ಗಳು ರೈತರಿಗೆ ಸಾಕಷ್ಟು ನೆರವಾಗುತ್ತಿವೆ. ಶೂನ್ಯ ಬಡ್ಡಿದರದ ಸಾಲ ಆರಂಭಿಸಿದ್ದೇ ಬಿಜೆಪಿ ಸರ್ಕಾರ. ಸಹಕಾರ ಬ್ಯಾಂಕ್‌ಗಳು ರೈತರ ಪ್ರಗತಿಗೆ ಪ್ರಥಮ ಆದ್ಯತೆ ನೀಡುತ್ತಿವೆ. ಮಹಿಳೆಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಲು ನೆರವು ನೀಡುತ್ತಿವೆ. ಸಹಕಾರ ಕ್ಷೇತ್ರ ಎಲ್ಲಾ ರಂಗಗಳಲ್ಲಿಯೂ ದಾಪುಗಾಲು ಹಾಕುತ್ತಿದೆ ಎಂದರು. 

ಹಿಂದೆ ಅಧ್ಯಕ್ಷನಾಗಿದ್ದ ಮಹಾನುಭಾವರೊಬ್ಬರು ಡಿಸಿಸಿ ಬ್ಯಾಂಕ್ ಕೊಳ್ಳೆ ಹೊಡೆದು ಸುಮಾರು ₹ 62 ಕೋಟಿಗೂ ಹೆಚ್ಚು ನಷ್ಟ ಮಾಡಿದ್ದರು. ಈಗಿನ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಲಾಭದತ್ತ ತೆಗೆದುಕೊಂಡು ಹೋಗುತ್ತಿರುವುದು ಉತ್ತಮ ಸಾಧನೆ ಎಂದು ಹಿಂದಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರನ್ನು ಕುಟುಕಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಗ್ರಾಮೀಣ ಪ್ರದೇಶದ ರೈತರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ಮುಕ್ತಗೊಳಿಸುವಲ್ಲಿ ಸಹಕಾರ ಬ್ಯಾಂಕ್‌ಗಳ ಪಾತ್ರ ಅತ್ಯಂತ ಶ್ಲಾಘನೀಯ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಜೀವನಾಡಿ. ಒಂದು ಹಂತದಲ್ಲಿ ಭ್ರಷ್ಟಾಚಾರ, ಆರ್ಥಿಕ ನಷ್ಟದಿಂದ ಜನರ ವಿಶ್ವಾಸ ಕಳೆದುಕೊಂಡಿತ್ತು. ರೈತರ ಏಳಿಗೆಗಾಗಿ ಶ್ರಮಿಸಬೇಕಾದ ಬ್ಯಾಂಕ್‌ನಲ್ಲಿ ಅಹಿತಕರ ಘಟನೆಗಳು ನಡೆದು ಅಹೋರಾತ್ರಿ ಧರಣಿ ನಡೆಸಿ, ಅಲ್ಲೇ ಮಲಗಿದ್ದೆವು. ಜನಸಾಮಾನ್ಯರು ಈಗ ಅತಿ ಹೆಚ್ಚು ಠೇವಣಿ ನೀಡುವ ಮೂಲಕ ಬ್ಯಾಂಕ್‌ಗೆ ಪುನರುಜ್ಜೀವನ ನೀಡಿದ್ದಾರೆ. ಬ್ಯಾಂಕ್ ಮತ್ತೆ ಲಾಭದತ್ತ ಮುನ್ನುಗ್ಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ₹ 23 ಕೋಟಿ ಲಾಭಗಳಿಸಿರುವುದು ದಾಖಲೆ. ಇದು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ಆಗಿದೆ. ಈಗ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಿಸುವ ಮೂಲಕ ಗಣಕೀಕರಣದ ಹಾದಿಯಲ್ಲಿದೆ. ರೈತರಿಗೆ ಸಾಲ ನೀಡುವ ಜತೆಗೆ ಸಾಲ ವಸೂಲಾತಿಯಲ್ಲೂ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಎಚ್‌.ಹಾಲಪ್ಪ ಹರತಾಳು, ಕೆ.ಬಿ. ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್,  ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗ್ಡೆ, ಬ್ಯಾಂಕ್‌ ನಿರ್ದೇಶಕರಾದ ಎಸ್‌.ಪಿ.ದಿನೇಶ್, ದುಗ್ಗಪ್ಪ ಗೌಡ, ಸುಧೀರ್, ಗುರುರಾಜ್, ಭೂಕಾಂತ್, ಯೋಗೇಶ್, ಬಣಕಾರ್, ನಬಾರ್ಡ್‌ ಅಧಿಕಾರಿ ಬಿ.ರವಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.