ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಹಸಿರು ಪಟಾಕಿ ಮಾರಾಟಕ್ಕೆ ವ್ಯಾಪಾರಿಗಳ ನಿರಾಸಕ್ತಿ

ಸೈನ್ಸ್ ಮೈದಾನದಲ್ಲಿ 22, ನೆಹರು ಕ್ರೀಡಾಂಗಣದಲ್ಲಿ 12 ಮಾರಾಟ ಮಳಿಗೆ ನಿರ್ಮಾಣ
Last Updated 14 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ನಿಯಂತ್ರಣಕ್ಕಾಗಿ ದೀಪಾವಳಿ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಲಿನ್ಯಕಾರಕ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದೆ. ಆದರೆ, ತಡವಾಗಿ ಮಾರಾಟದ ಮಾರ್ಗಸೂಚಿ ಹೊರಡಿಸಿರುವ ಪರಿಣಾಮ ಮಾರಾಟಗಾರರು ಗೊಂದಲಕ್ಕೆ ಒಳಗಾಗಿದ್ದಾರೆ.

ಪ್ರತಿ ವರ್ಷ ಸೈನ್ಸ್‌ ಮೈದಾನದಲ್ಲಿ 50ಕ್ಕೂ ಹೆಚ್ಚು ವ್ಯಾಪಾರಿಗಳು ಹಬ್ಬಕ್ಕೆ ಹಲವು ದಿನ ಬಾಕಿ ಇರುವಾಗಲೇ ಮಳಿಗೆ ನಿರ್ಮಿಸಿ, ವ್ಯಾಪಾರಕ್ಕೆ ಮುಂದಾಗುತ್ತಿದ್ದರು. ಆದರೆ, ಈ ಬಾರಿ ಸರ್ಕಾರ ಪಟಾಕಿ ಮಾರಾಟದ ಬಗ್ಗೆ ಸ್ಪಷ್ಟ ನಿರ್ದೇಶನ ಹೊರಡಿಸಲಿಲ್ಲ. ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಹಸಿರು ಪಟಾಕಿ ಮಾರಾಟಕ್ಕೆ ಆದೇಶ ಹೊರಡಿಸಿರುವುದರಿಂದ ಲಕ್ಷಾಂತರ ಬಂಡವಾಳ ಹಾಕಿ ತಂದ ಪಟಾಕಿ ಏನು ಮಾಡುವುದು ಎಂಬ ಪ್ರಶ್ನೆ ವ್ಯಾಪಾರಿಗಳು ಮುಂದಿಟ್ಟಿದ್ದಾರೆ.

ಈ ವರ್ಷ ನಗರದ ಸೈನ್ಸ್ ಮೈದಾನದಲ್ಲಿ 22 ಹಾಗೂ ನೆಹರು ಕ್ರೀಡಾಂಗಣದ ಬಳಿ 12 ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಪಟಾಕಿ ಅಂಗಡಿ ಮಾಲೀಕರು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50ರಷ್ಟು ಕಡಿಮೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಪ್ರತಿ ಬಾರಿಯೂ ₹ 4ರಿಂದ 5 ಲಕ್ಷ ಬಂಡವಾಳ ಹೂಡಿಕೆ ಮಾಡುತ್ತಿದ್ದ ಮಾಲೀಕರು ಈ ಬಾರಿ ಕೇವಲ ₹ 2ರಿಂದ 3 ಲಕ್ಷ ಬಂಡವಾಳ ಹೂಡಿಕೆಗೆ ಸೀಮಿತಗೊಳಿಸಿದ್ದಾರೆ.

ಈ ಹಿಂದೆ ಗಣೇಶನ ಹಬ್ಬದ ಸಮಯದಲ್ಲಿ ಮಣ್ಣಿನ ಗಣಪತಿಯನ್ನೇ ಕೂರಿಸಿ, ಪೂಜಿಸಬೇಕು ಎಂಬ ನಿಯಮ ಮಾಡಲಾಗಿತ್ತು. ಆದರೆ, ಹಬ್ಬಕ್ಕೆ 2–3 ದಿನ ಇರುವಾಗ 4 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿ ಕೂರಿಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಆಗ ಕಲಾವಿದರು ತಾವು ತಯಾರಿಸಿದ ಮೂರ್ತಿ ಮಾರಾಟವಾಗದೇ ನಷ್ಟ ಅನುಭವಿಸಿದ್ದರು. ಈಗ ನಷ್ಟ ಅನುಭವಿಸುವ ಸರದಿ ಪಟಾಕಿ ಮಾರಾಟಗಾರರದ್ದು.

‘ಹಬ್ಬಕ್ಕೆ ಒಂದು ತಿಂಗಳು ಮೊದಲೇ ನಿಷೇಧದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ಬಂಡವಾಳ ಹಾಕುತ್ತಲೇ ಇರಲಿಲ್ಲ. ಕೇವಲ ಹಸಿರು ಪಟಾಕಿಯನ್ನಷ್ಟೇ ತರಿಸುತ್ತಿದ್ದೆವು. ಈಗ ಹಬ್ಬ ನಾಲ್ಕು ದಿನ ಇದ್ದಾಗ ಸರ್ಕಾರ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶ ನೀಡಿದೆ. ಆದರೆ, ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಪಟಾಕಿ ಉತ್ಪಾದನೆಯಾಗಿಲ್ಲ. ಹಸಿರು ಪಟಾಕಿ ಉತ್ಪಾದಿಸಿದರೂ ಅವು ಸಾಮಾನ್ಯ ಪಟಾಕಿಗಿಂತಲೂ ದುಬಾರಿಯಾಗಿವೆ. ಸಾಮಾನ್ಯ ಜನರು ಅವುಗಳನ್ನು ಖರೀದಿಸಲು ಮುಂದಾಗುವುದಿಲ್ಲ. ಈ ಕಾರಣಕ್ಕೆ ಹಲವು ಮಂದಿ ಪಟಾಕಿ ಮಾರಾಟಗಾರರು ಈ ಬಾರಿ ವ್ಯಾಪಾರ ಕೈಬಿಟ್ಟಿದ್ದಾರೆ’ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT