ಶನಿವಾರ, ಸೆಪ್ಟೆಂಬರ್ 25, 2021
26 °C
ಮದ್ಯ ಮಾರಾಟ ಮಳಿಗೆ ತೆರವಿಗೆ ಆಗ್ರಹ: ಪ್ರತಿಭಟನೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ಮುಖಂಡರು

ಬೆಳ್ಳಿಕೊಪ್ಪ: ಮುಂದುವರಿದ ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನ ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಕೊಪ್ಪ ಗ್ರಾಮದಲ್ಲಿ ತೆರೆದಿರುವ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಯನ್ನು ಬಂದ್ ಮಾಡುವಂತೆ ಒತ್ತಾಯಿಸಿ ಬೆಳ್ಳಿಕೊಪ್ಪ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು ಮಂಗಳವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಕೆಳದಿ, ‘ಬೆಳ್ಳಿಕೊಪ್ಪ ಗ್ರಾಮದಲ್ಲಿ ಈ ಹಿಂದೆ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಕೆಲವರು ಮುಂದಾಗಿದ್ದಾಗ ಆ ಜಾಗದಲ್ಲಿ ಮಳಿಗೆ ತೆರೆಯಲು ಕಾನೂನಿನ ಪ್ರಕಾರ ಅವಕಾಶವಿಲ್ಲ ಎಂದು ಆ ಸಮಯದಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ವಿ.ಸಿ.ಪ್ರಸನ್ನ ಅವರು ಆದೇಶಿಸಿದ್ದರು. ಆದರೆ, ಆ ಆದೇಶವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ’ ಎಂದು ಆರೋಪಿಸಿದರು.

ಮದ್ಯ ಮಾರಾಟ ಮಳಿಗೆ ಆರಂಭಿಸಿರುವ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಕಾನೂನಿನ ನಿಯಮಗಳ ಪ್ರಕಾರ ಅವಕಾಶವಿಲ್ಲ. ಈ ವಿಷಯದ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ‘ಹಿಂದಿನ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಳಿಗೆ ತೆರೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇದಕ್ಕೆ ಸಹಕಾರ ನೀಡಿರುವ ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ಬೆಳ್ಳಿಕೊಪ್ಪ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿನ ಮದ್ಯದಂಗಡಿ ಬಂದ್ ಆಗುವವರೆಗೂ ಗ್ರಾಮದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಹಿಂದಿನ ಅಧಿಕಾರಿಗಳು ಮಾಡಿದ ಆದೇಶವನ್ನು ಗಾಳಿಗೆ ತೂರಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ‘ಸರ್ಕಾರಕ್ಕೆ ದೇವಸ್ಥಾನಕ್ಕಿಂತ ಮದ್ಯದಂಗಡಿಗಳ ಮೇಲೆ ಹೆಚ್ಚು ಪ್ರೀತಿ ಇರುವಂತೆ ಕಾಣುತ್ತಿದೆ. ಕೂಲಿ ಕಾರ್ಮಿಕರು ದುಡಿದ ಹಣವನ್ನು ಹೆಂಡದಂಗಡಿಗೆ ವ್ಯಯ ಮಾಡುವ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚರ ತೋರದೆ ಇದ್ದರೆ ಆಡಳಿತ ಇದ್ದೂ ಸತ್ತಂತೆ’ ಎಂದು ಟೀಕಿಸಿದರು.

ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿ ಕುಗ್ವೆ, ಮಧು ಮಾಲತಿ, ವೆಂಕಟೇಶ್ ಮೆಳವರಿಗೆ, ದಿನೇಶ್ ಶಿರವಾಳ, ಹೊಯ್ಸಳ ಗಣಪತಿಯಪ್ಪ, ಗಿರೀಶ್ ಇದ್ದರು.

***

ಏಕವಚನ ಬಳಕೆ: ಕ್ಷಮೆ ಕೋರಿದ ರಮೇಶ್
ಬೆಳ್ಳಿಕೊಪ್ಪ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ಆರಂಭಿಸಿರುವುದನ್ನು ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ವಿರುದ್ಧ ಏಕವಚನ ಬಳಸಿದ್ದಕ್ಕೆ ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಕೆಳದಿ ಕ್ಷಮೆ ಕೋರಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎನ್ನುವ ಬೇಸರದಿಂದ ಏಕವಚನ ಪದ ಪ್ರಯೋಗ ಮಾಡಿದ್ದು, ಅವರನ್ನು ನೋಯಿಸುವ ಉದ್ದೇಶವಿಲ್ಲ. ಈಗಲಾದರೂ ಅವರು ಗ್ರಾಮಸ್ಥರಿಗೆ ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು