ಸೋಮವಾರ, ನವೆಂಬರ್ 28, 2022
20 °C

ತಾಳಗುಂದ ಶಾಸನದಲ್ಲಿದೆ ದಾನ, ಧರ್ಮ, ಪೂಜೆಯ ವಿವರ

ಎಂ. ನವೀನ್‌ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ತಾಳಗುಂದವನ್ನು ಆಳಿದ ರಾಜರು ದಾನ ಮತ್ತು ಧರ್ಮ ಕಾರ್ಯಗಳನ್ನು ಹೆಚ್ಚು ಮಾಡಿರುವುದಕ್ಕೆ 12ನೇ ಶತಮಾನದ ಶಾಸನವೊಂದು ಸಾಕ್ಷಿಯಾಗಿದೆ.

ರೇಚರಸನೆಂಬ ಚಾಲುಕ್ಯರ ದಂಡನಾಯಕನು ಬನವಾಸಿ 12,000 ನಾಡನ್ನು ಆಳುತ್ತಿದ್ದ ಕೇಸಿಮಯ್ಯ ದಂಡನಾಯಕನಿಗೆ ದಾನದ ಮಹತ್ವ ತಿಳಿಸಿದ ವಿವರ ಇದೆ. ತ್ರಿವಿಧವಾದ ದಾನಗಳ (ಭೂ ದಾನ, ಅನ್ನದಾನ, ವಿದ್ಯಾದಾನ) ಕುರಿತು ವಿವರಿಸಿದ್ದಾನೆ. ಅದೇ ವಿಧಾನದಲ್ಲಿ ಅಂದಿನ ಶ್ರೇಷ್ಠ ಪವಿತ್ರ ಧರ್ಮಕ್ಷೇತ್ರವಾದ ತಾಣಗುಂದೂರಿನ ಪಂಚತೀರ್ಥದ ಪುಣ್ಯದ ನೆಲದಲ್ಲಿ ದಾನ ಕಾರ್ಯ ನೆರೆವೇರಿಸಿ, ನಂತರ ದಾನದ ಉದ್ದೇಶಗಳನ್ನು ವಿವರಿಸಿದ್ದಾನೆ. ದಾನ ಪಡೆದವರು ಸೂಕ್ತ ವಿಧಾನಗಳಲ್ಲಿ ದೈವಗಳನ್ನು ಪೂಜಿಸಿದರೆ ನಾಡಿನ ಸಕಲರಿಗೂ ಒಳಿತಾಗುವುದು ಎಂದು ಅರುಹಿ ಪೂಜಾ ವಿಧಾನಗಳನ್ನು ಶಾಸನದಲ್ಲಿ ವಿವರವಾಗಿ ಉಲ್ಲೇಖಿಸಿದ್ದಾನೆ.

ಶಾಸನವೊಂದರಲ್ಲಿ ಧಾರ್ಮಿಕ ವಿಧಾನದ ಬಗ್ಗೆ ಉಲ್ಲೇಖಿಸಿದ ಮಾಹಿತಿ ಬೇರೆಡೆ ಸಿಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ದಾನ ಪಡೆದ ದ್ರವ್ಯದಿಂದ ನಿತ್ಯವೂ ಗದ್ದುಗೆ ಪೂಜೆ, ಧೂಪದೀಪಾರತಿ, ನಂದಾದೀವಿಗೆ, ನೈವೇದ್ಯ, ನಿತ್ಯ ಸಹಸ್ರನಾಮ, ಹೋಮಗಳನ್ನು ನಡೆಸುವುದು. ಪ್ರತಿ ತಿಂಗಳು ಎರಡು ಅಷ್ಟಮಿ ಹಾಗೂ ಎರಡು ಚತುರ್ದಶಿಯ ಅಮಾವಾಸ್ಯೆ ಹಾಗೂ ಸಂಕ್ರಮಣಗಳಲ್ಲಿ, ಹಬ್ಬಗಳಲ್ಲಿ ಮತ್ತು ನಿತ್ಯವೂ ತಪ್ಪದೇ ಪೂಜೆಗೈದರೆ ನಾಡಿಗೆ ಒಳಿತಾಗುತ್ತದೆ ಎಂಬ ವಿವರ ಇಲ್ಲಿದೆ.

ಶಾಸ್ತ್ರ ಖಂಡಿಕದವರು ವಿದ್ಯಾಮಂಡಲ, ಗುರುಮಂಡಲ ಮತ್ತು ಶಿವ ಮಂಡಲಗಳನ್ನು ರಚಿಸಿ ಶಾಂತಾಧ್ಯಯನ ಪಠಿಸಿ ನಂತರ ವೇದ ಖಂಡಿಕದ ನಾಲ್ವರು ನಾಲ್ಕು ಬೃಹತ್ ಕಳಸಗಳಲ್ಲಿ ಪವಿತ್ರ ಉದಕವನ್ನು ತುಂಬಬೇಕು. ಆ ಕಳಸಗಳಲ್ಲಿ ಸುಗಂಧ ದ್ರವ್ಯ ಹೊಂದಿದ ಎಲೆಗಳನ್ನು ಇಟ್ಟು ಕಳಸದೊಳಗಿನ ಉದಕಕ್ಕೆ ಗೋಮೂತ್ರ, ಬಿಳಿ ಸಾಸಿವೆ ಮತ್ತು ಐದು ವಿಧವಾದ ಚಿಗುರುಗಳನ್ನು ಸೇರಿಸಿ, ಐದು ವಿಧವಾದ ಚಕ್ಕೆಗಳನ್ನು ಬೆರೆಸಿ, ಗೋವಿನ ಹಾಲು, ತುಪ್ಪ, ಗೋಮೂತ್ರದಂತಹ ಗೋವಿನ ಪಂಚ ಉತ್ಪನ್ನಗಳನ್ನು ಸೇರಿಸಬೇಕು. ಏಲಕ್ಕಿ ಚಂದನದಂತಹ ದ್ರವ್ಯಗಳನ್ನು ಹಚ್ಚಬೇಕು.

ನಂತರ ಈ ಕಳಸಗಳನ್ನು ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ನಾಲ್ಕು ವೇದದೊಳಗಣ ರುದ್ರ ಸೂಕ್ತಗಳನ್ನು ಪಠಿಸಬೇಕು. ಈಗ ಗದ್ದುಗೆ ಪೂರ್ಣವಾಗುತ್ತದೆ. ವೇದ ಖಂಡಿಕದವರು ದೇವರಿಗೆ ಎಂಟು ವಿಧವಾದ ಉದಕ ಅರ್ಪಣೆಮಾಡಿ ಪಂಚವಿಧವಾದ ಗೋವುತ್ಪನ್ನಗಳನ್ನು, ಪಂಚ ವಿಧದ ಮಕರಂದದ ಸಿಹಿಗಳನ್ನು (ತುಪ್ಪ, ಜೇನು, ಸಕ್ಕರೆ, ಕೊಬ್ಬರಿ ಹಾಲು ಇತರೆ) ತಯಾರಿಸಿ ಇವುಗಳ ಜೊತೆಗೆ ಗೋಧಿ ಮತ್ತು ಅಕ್ಕಿಯ ಹಿಟ್ಟನ್ನು ಬಿಸಿಯಾದ ನೀರಿನಲ್ಲಿ ಮಿಶ್ರಣ ಮಾಡಬೇಕು. ಈ ಮಿಶ್ರಣಕ್ಕೆ ಅಳಲೆಕಾಯಿ ಮತ್ತು ಅರಿಶಿಣದ ಪುಡಿಯನ್ನು ಸೇರಿಸಿ ಎಲ್ಲವನ್ನೂ ದೇವರಿಗೆ ಲೇಪಿಸಬೇಕು. ಇದಾದ ನಂತರ ಕುಶೋಧಕ, ಗಂಧದುದಕ, ಪುಷ್ಪದುದಕ, ಫಲದುದಕ, ಚಿನ್ನದುದಕ
ಮತ್ತು ರತ್ನೋಧಕಗಳಿಂದ ಮಜ್ಜನ ಮಾಡಿಸಬೇಕು ಎಂಬ ವಿವರ ಇದೆ.

ಇಂತಹ ಪೂಜಾ ವಿಧಾನ ಅನುಸರಿಸಿದ ಭಕ್ತಿಮಾರ್ಗವು ನಾಡನ್ನು ಆಳುವ ಅರಸರಿಗೆ, ಹೆಗ್ಗಡೆಗಳಿಗೆ, ಕರಣಕರಿಗೆ, ದ್ವಿಜರಿಗೆ ಮತ್ತು ನಾಡಿನ ಸಕಲ ಜೀವಿಗಳಿಗೂ ನೇರವಾಗಿ ಶ್ರೇಷ್ಠತೆ ಮತ್ತು ಒಳಿತನ್ನು ದೊರಕಿಸಿಕೊಡುವ ಬಗ್ಗೆ ಶಾಸನವು ವಿವರಿಸುತ್ತದೆ ಎಂದು ಇತಿಹಾಸ ಸಂಶೋಧಕ ರಮೇಶ್‌ ಹಿರೇಜಂಬೂರು ಹೇಳಿದರು.

ಪೂಜಾ ವಿಧಾನದ ಸಮಗ್ರ ವಿವರ ತಾಳಗುಂದದ ಶಾಸನದಲ್ಲಿದೆ. ಪೂಜಾ ವಿಧಾನದ ಬಗ್ಗೆ ವಿವರವಾಗಿ ತಿಳಿಸಿರುವ ಇಂತಹ ಅಪರೂಪದ ಶಾಸನ ಬೇರೆಡೆ ಕಾಣಸಿಗದು. 

–ರಮೇಶ್‌ ಹಿರೇಜಂಬೂರು, ಸಂಶೋಧಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.