ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಅಕ್ರಮ ಗಣಿಗಾರಿಕೆ ರಕ್ಷಣೆಗೆ ಅಭಿವೃದ್ಧಿಯ ಕವಚ!

Last Updated 11 ಸೆಪ್ಟೆಂಬರ್ 2020, 3:35 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಲ್ಲೂಕಿನ ಗೆಜ್ಜೇನಹಳ್ಳಿ ಬಳಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಇಬ್ಬರು ಕಾರ್ಮಿಕರ ಮೇಲೆ ಕಲ್ಲುಜರುಗಿದ‍ಪರಿಣಾಮ ಜೀವ ಕಳೆದುಕೊಂಡರು. ಇದು ಆಕಸ್ಮಿಕ ಘಟನೆಯಾದರೂ ಕಲ್ಲು ಗಣಿಗಾರಿಕೆಯ ಪ್ರಪಂಚದ ಆಳ–ಅಗಲ ನೋಡುತ್ತಾ ಸಾಗಿದರೆ ಅಲ್ಲಿ ಬೇರೆಯದೇ ಲೋಕ ಅನಾವರಣಗೊಳ್ಳುತ್ತದೆ.

ಕಲ್ಲುಕ್ವಾರಿ ಪ್ರದೇಶ, ಕ್ರಷರ್‌ ಘಟಕಗಳ ಬಳಿಇಂತಹ ಅವಘಡಗಳು ನಡೆಯುತ್ತಲೇ ಇರುತ್ತವೆ. ಯಂತ್ರಗಳ ವೈಫಲ್ಯ, ಸಿಡಿ ಮದ್ದು ಸ್ಫೋಟ, ಕಲ್ಲುಗಳ ಸಿಡಿತದಿಂದಾಗುವ ಅನಾಹುತ; ಮಿತಿ ಮೀರಿ ತೆಗೆದ ಆಳವಾದ ಗುಂಡಿಗಳಲ್ಲಿ ಅರಿವಿಲ್ಲದೇ ಇಳಿದು ಮುಳುಗಿ ಹೋದವರು; ವಿದ್ಯುತ್ಅವಘಡ... ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಇಂತಹ ಅವಘಡಗಳಿಂದ ಸಂಭವಿಸಿದ ಸಾವುಗಳಲ್ಲಿ ಕೆಲವು ಬೆಳಕಿಗೆ ಬರುತ್ತವೆ. ಕೆಲವು ಹಣದ ಸೆಟಲ್‌ಮೆಂಟ್‌ಗಳ ಮೂಲಕ, ಕುಟುಂಬಸ್ಥರಿಗೆ ನೀಡುವ ಆಮಿಷಗಳಲ್ಲಿ ಮುಚ್ಚಿಹೋಗುತ್ತವೆ. ಸಾಮಾನ್ಯವಾಗಿ ಕ್ವಾರಿಗಳ ಒಡೆತನ ಹೊಂದಿರುವವರು ಜನಪ್ರತಿನಿಧಿಗಳು,ರಾಜಕೀಯಪಕ್ಷಗಳ ಮುಖಂಡರು. ಹಣ ಬಲದ ಪ್ರಭಾವಿಗಳ ಹಿಡಿತದಲ್ಲಿರುವ ಕಾರಣ ಎಷ್ಟೇ ಬಿಗಿ ಕಾನೂನು ಇದ್ದರೂ, ಪ್ರಭಾವಗಳ ಮುಂದೆ ಅವುಗಳೆಲ್ಲ ಗೌಣವೇ ಆಗಿವೆ.

ಶಿವಮೊಗ್ಗ, ಭದ್ರಾವತಿ, ಹೊಸನಗರ ತಾಲ್ಲೂಕು ಸೇರಿ ಜಿಲ್ಲೆಯ ವಿವಿಧೆಡೆ 100ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿವೆ. ಅವುಗಳಲ್ಲಿ ಅರ್ಧದಷ್ಟುಪರವಾನಗಿ ಪಡೆದ ಅಧಿಕೃತ ಕ್ವಾರಿಗಳು. ಉಳಿದವು ಅನಧಿಕೃತ.ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಊರುಗಡೂರು, ಕಲ್ಲಗಂಗೂರು, ಮತ್ತೂರು, ಭದ್ರಾವತಿ ಭಾಗ, ಪಶ್ವಿಮ ಘಟ್ಟದ ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಕಲ್ಲುಗಣಿಗಾರಿಗೆ ನಿರಂತರವಾಗಿ ನಡೆಯುತ್ತಿದೆ.ಹಲವುವರ್ಷಗಳಿಂದ ನಡೆಯುತ್ತಿದ್ದ ಈ ಕ್ವಾರಿಗಳಲ್ಲಿ ಭಾರಿ ಆಳದವರೆಗೆ ಕಲ್ಲುಗಳನ್ನು ತೆಗೆಯಲಾಗಿದೆ. ಒಂದೊಂದು ಕ್ವಾರಿಯೂ ನೂರಾರು ಅಡಿ ಆಳ, ಅಗಲದ ಕಂದಕಗಳಾಗಿವೆ. ಕಲ್ಲು ಖಾಲಿಯಾಗಿ ವ್ಯರ್ಥವಾದ ನಂತರ ಕಂದಕಗಳಲ್ಲಿ ನೀರು ತುಂಬಿಕೊಂಡು ಅಪಾಯಕಾರಿ ತಾಣಗಳಾಗಿ ಉಳಿದುಕೊಂಡಿವೆ. ಎಷ್ಟೋ ದನ, ಕರುಗಳೂ ನೀರಲ್ಲಿ ಮುಳುಗಿ ಜೀವ ಕಳೆದುಕೊಂಡಿವೆ.

ದಂಡದ ಅಸ್ತ್ರಕ್ಕೆಸೊಪ್ಪುಹಾಕದಮಾಲೀಕರು

ಹಲವು ವರ್ಷಗಳಿಂದ ಅನಧಿಕೃತ ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸುವ ಗೋಜಿಗೆ ಹೋಗಿಲ್ಲ.ಈ ಕುರಿತು ಲೆಕ್ಕಪರಿಶೋಧಕರು ಎರಡು ವಷಗಳ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಕ್ಷೇಪದ ನಂತರ 2018-19ನೇ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಡ್ರೋನ್ ತಂತ್ರಜ್ಞಾನ ಬಳಸಿ ಜಿಲ್ಲೆಯ 55 ಕಲ್ಲು ಕ್ವಾರಿಗಳಲ್ಲಿ ಸರ್ವೆ ಕಾರ್ಯ ನಡೆಸಿದ್ದರು. ಆಗ ಹಲವು ಕ್ವಾರಿಗಳು ನಿಯಮ ಮೀರಿ ಕಾರ್ಯನಿರ್ವಹಿಸಿರುವುದು ದೃಢಪಟ್ಟಿತ್ತು.

ಅವಘಡಗಳು ನಡೆದಾಗ, ಸಾರ್ವಜನಿಕರ ಪ್ರತಿಭಟನೆ, ಒತ್ತಡಗಳು ಹೆಚ್ಚಾದಾಗ ಅಂತಹ ಕ್ವಾರಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಲಾಗುತ್ತದೆ. ಕೆಲವರು ದಂಡ ಕಟ್ಟಿದರೆ, ಇನ್ನು ಕೆಲವರು ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ಅದರಲ್ಲೂ ವಿನಾಯಿತಿ ಪಡೆಯುತ್ತಾರೆ. ಇಲ್ಲವೇ, ವಿಳಂಬ ನೀತಿ ಅನುಸರಿಸುತ್ತಾರೆ. ಸ್ವಲ್ಪ ದಿನಗಳಲ್ಲೇ ಮತ್ತೆ ಕಾರ್ಯ ಆರಂಭವಾಗುತ್ತವೆ. ಇಂತಹ ದಂಡದ ಬಾಕಿ ಮೊತ್ತವೇ ಜಿಲ್ಲೆಯಲ್ಲಿ ಸುಮಾರು ₹ 150 ಕೋಟಿಯಷ್ಟಿದೆ.

ಕ್ವಾರಿ ಇಲ್ಲದೇ ಕ್ರಷರ್‌ಗಳಿಗೆ ಅನುಮತಿ

ಜಿಲ್ಲೆಯಲ್ಲಿರುವ ಬಹುತೇಕ ಕ್ರಷರ್‌ ಘಟಕಗಳಿಗೆ‌ ಕ್ವಾರಿಗಳೇ ಇಲ್ಲ. ದೂರದ ಕ್ವಾರಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕ್ರಷರ್ ಮಾಲೀಕರು ನಂತರ ಅನಧಿಕೃತವಾಗಿ ಕ್ವಾರಿಗಳನ್ನು ನಿರ್ವಹಣೆ ಮಾಡುತ್ತಾರೆ. ಕ್ರಷರ್‌ಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆ ಎಲ್ಲಿಂದ ಸರಬರಾಜಾಗುತ್ತದೆ, ಒಪ್ಪಂದಂತೆ ನಿಗದಿತ ಕ್ವಾರಿಗಳ ಕಲ್ಲನ್ನೇ ತೆಗೆಯುತ್ತಿದ್ದಾರೆಯೇ ಎಂಬ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಲ್ಲೂಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉದಾಸೀನ ತೋರುತ್ತಿದೆ. ಇದೂ ಅಕ್ರಮ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಕ್ವಾರಿಗಳಿಂದ ಕ್ರಷರ್‌ಗಳಿಗೆ ಕಲ್ಲು ಸಾಗಿಸಲು, ನಂತರ ಕ್ರಷರ್‌ಗಳಿಂದ ಜಲ್ಲಿ ಸಾಗಿಸಲು ಪರವಾನಗಿ ಪಡೆಯುವ ಟಿಪ್ಪರ್‌ಗಳಲ್ಲೂ ಅಕ್ರಮ ನಡೆಯುತ್ತದೆ. ನಿಗದಿತ ಭಾರಕ್ಕಿಂತ ಹೆಚ್ಚು ತುಂಬಲಾಗುತ್ತದೆ. ಹಲವು ಬಾರಿ ದ್ವಿಚಕ್ರವಾಹನ ಸವಾರರು, ಪಾದಚಾರಿಗಳ ಮೇಲೆ ಜಲ್ಲಿ ಬಿದ್ದು ಅನಾಹುತಗಳಾಗಿವೆ.

ಹಣ ಕೊಟ್ಟರೆ ಎಲ್ಲಿಗಾದರೂ ವಿದ್ಯುತ್ ಸಂಪರ್ಕ

ಜಿಲ್ಲೆಯಲ್ಲಿ ಶೇ 50ರಷ್ಟು ಕ್ರಷರ್‌ಗಳು, ಕ್ವಾರಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ಆಶ್ಚರ್ಯ ಎಂದರೆ ಈ ಎಲ್ಲ ಕ್ರಷರ್‌ಗಳಿಗೂ ಮೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಹಣ ಕೊಟ್ಟರೆ ಎಲ್ಲಿಗಾದರೂ ಸಂಪರ್ಕ ಪಡೆಯಬಹುದು ಎನ್ನುವುದನ್ನುಮೆಸ್ಕಾಂ ಅಧಿಕಾರಿಗಳು ಸಾಬೀತು ಮಾಡಿದ್ದಾರೆ.

ಅರಣ್ಯ ಪ್ರದೇಶಗಳಲ್ಲೂ ಸ್ಫೋಟಕಗಳ ಸದ್ದು

ಕೆಲವು ಕ್ವಾರಿಗಳು ದಟ್ಟ ಕಾನನದ ಸೂಕ್ಷ್ಮ ಪರಿಸರ,ಸುರಕ್ಷಾವಲಯದ ಮಿತಿ ದಾಟಿಸ್ಥಾಪಿತವಾಗಿವೆ. ಹೊಸನಗರ ತಾಲ್ಲೂಕಿನದಟ್ಟ ಕಾನನದ ಮಧ್ಯೆಯೂ ಅವಕಾಶ ಕಲ್ಪಿಸಲಾಗಿತ್ತು.ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದರೂ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮವಲಯ ಪ್ರದೇಶಗಳಲ್ಲೂಕಲ್ಲು ಗಣಿಕಾರಿಕೆ ನಡೆಸಲು ರಾಜ್ಯ ಸರರ್ಕಾರ ಅನುಮತಿ ನೀಡಿತ್ತು. ಸರ್ಕಾರದ ಈ ನಿರ್ಧಾರ ಜಿಲ್ಲಾಡಳಿತ–ಸ್ಥಳೀಯರ ಮಧ್ಯೆ ಸಂಘರ್ಷ ಹುಟ್ಟು ಹಾಕಿತ್ತು.

ಹುಂಚ ಭೂ ಸಂರಕ್ಷಣಾ ಸಮಿತಿ, ಗ್ರಾಮ ಭೂಮಿ ಸಂರಕ್ಷಣಾ ಸಮಿತಿ, ಅಮೃತ, ಹನಿಯ, ಬಿಲ್ಲೇಶ್ವರ ಗ್ರಾಮ ಅರಣ್ಯ ಸಮಿತಿಗಳು ಹೋರಾಟಸಮಿತಿಗಳು, ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ, ಕುಬವಳ್ಳಿ ಗ್ರಾಮಸ್ಥರು ಬೀದಿಗಿಳಿದು ಹೋರಾಟನಡೆಸಿದ ಪರಿಣಾಮ ಕೆಲವು ಗಣಿಗಳ ಪರವಾನಗಿ ರದ್ದುಪಡಿಸಲಾಗಿದೆ. ಈ ಪ್ರದೇಶಗಳುಚಕ್ರ–ವರಾಹಿ, ಸಾವೇಹಕ್ಲು, ಮಾಣಿ ಜಲಾಶಯಗಳಸಮೀಪದಲ್ಲೇ ಇವೆ. ಹಲವು ಬಾರಿ ಅಲ್ಲಿ ಭೂಕಂಪನವಾಗಿದೆ. ಭೂ ಕುಸಿತಗಳಾಗಿವೆ. ನದಿಮೂಲಗಳ ಬಳಿ ಗಣಿಗಾರಿಕೆಗೆ ಅವಕಾಶ ಬೇಡ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿತ್ತು. ಆದರೂ, ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಹೇಗೆ ಅನುಮತಿ ನೀಡುತ್ತಾರೆ ಎನ್ನುವುದೇಸೋಜಿಗದ ಸಂಗತಿ.

ಅಮ್ಮನಘಟ್ಟ ಪ್ರದೇಶದಲ್ಲಿ ಸ್ಥಳೀಯರ ಪ್ರತಿಭಟನೆಯ ನಂತರ ಗಣಿಗಾರಿಕೆ ಸ್ಥಗಿತವಾಗಿತ್ತು. ಈಗ ಅಲ್ಲಿ ಜೇನುಕಲ್ಲಮ್ಮ ದೇವಾಲಯದ ಪುಷ್ಕರಣಿ, ಕೆರೆ ಪುನಶ್ಚೇತನಗೊಂಡ ಪರಿಣಾಮ ವನ್ಯಜೀವಿಗಳಿಗೆ ಬೇಸಿಗೆಯಲ್ಲೂ ಕುಡಿಯಲು ನೀರು ಲಭ್ಯವಾಗಿವೆ. ಕಲ್ಲು ಗಣಿಗಾರಿಕೆ ನಡೆದ ಪ್ರದೇಶದಲ್ಲಿ ಹಸಿರು ಹೆಚ್ಚಿಸಲು ಪರಿಸರಪ್ರಿಯರು ಶ್ರಮಿಸಿದ್ದಾರೆ.

‘ಆಧುನಿಕ ಕಾಲಘಟ್ಟದಲ್ಲಿ ಅಭಿವೃದ್ಧಿ ಅನಿವಾರ್ಯ. ಆದರೆ, ಆ ನೆಪದಲ್ಲಿ ಅರಣ್ಯ ಸಂಪತ್ತು, ಸೂಕ್ಷ್ಮ ಪರಿಸರ ಹಾಳು ಮಾಡಬಾರದು. ಅಗತ್ಯತೆಯ ನೆಪದಲ್ಲಿ ಪಟ್ಟಭದ್ರರು ಕಾನೂನು ಉಲ್ಲಂಘಿಸಿ ಹಣ ಮಾಡಿಕೊಳ್ಳಲು, ಅಧಿಕಾರಿಗಳಿಗೆ ಆದಾಯದ ಮೂಲವಾಗಿಸಲು ಅವಕಾಶ ನೀಡಬಾರದು’ಎನ್ನುವುದುಪರಿಸರ ಹೋರಾಟಗಾರರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT