ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಸಮರ್ಪಕ ಬಳಕೆಯಿಂದ ಅಭಿವೃದ್ಧಿ: ಸಂಸದ ರಾಘವೇಂದ್ರ

Last Updated 8 ಫೆಬ್ರುವರಿ 2023, 6:59 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ‘ಹಿಂದೂ–ಮುಸ್ಲಿಮರೆಂದು ಭೇದ ಮಾಡದೆ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಧ್ಯೇಯವಾಕ್ಯದೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೇರುವಾಗ ಕಾಣದ ಕೈಗಳು ತಪ್ಪಿಸುವ ತಂತ್ರ ನಡೆಸಿದ್ದವು. ಪುರಸಭೆಯಾದ ಬಳಿಕ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ. ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಚಿತವಾಗಿ ಲಸಿಕೆ ಕೊಡುವ ಮೂಲಕ ಮಾಡಿ ಸಮುದಾಯದ ಸ್ವಾಸ್ಥ್ಯ ಕಾಪಾಡಿದ್ದಾರೆ. ಆ ಕಾರಣಕ್ಕೆ ನಮ್ಮಲ್ಲಿ ಇಂದು ಕೋವಿಡ್ ಭೀತಿ ಇಲ್ಲದಂತಾಗಿದೆ. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ವಿತರಣೆ ಎಂದಿನಂತೆ ಪ್ರತಿ ಸದಸ್ಯನಿಗೆ 10 ಕೆ.ಜಿ ಅಕ್ಕಿ ಮುಂದಿನ ದಿನಗಳಿಂದ ವಿತರಿಸಲಾಗುವುದು. ವಸತಿ ರಹಿತರಿಗೆ ಸೂರು ಒದಗಿಸಲು ಚರ್ಚಿಸಲಾಗುವುದು’ ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ‘ಶಿರಾಳಕೊಪ್ಪ ಪಟ್ಟಣಕ್ಕೆ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಿದರೂ ಇಲ್ಲಿ ನಮಗೆ ಬಹುಮತ ದೊರಕಿಸಿಕೊಟ್ಟಿಲ್ಲ. ಇಂದು ನಮಗೆ ಹಾರ, ಶಾಲು ಹಾಕಿ ಸನ್ಮಾನಿಸುವ ಬದಲು ನಮ್ಮನ್ನು ಬೆಂಬಲಿಸಿ ನಿಮ್ಮ ಸೇವೆ ಮತ್ತಷ್ಟು ಮಾಡಲು ಅವಕಾಶ ಕೊಡಿ’ ಎಂದು ಕೋರಿದರು.

ಪುರಸಭೆಯ ಸದಸ್ಯ ಟಿ. ರಾಜು ಮಾತನಾಡಿ, ‘ಪಟ್ಟಣದ ಅಭಿವೃದ್ಧಿಗೆ ಸಂಸದರು ₹30 ಕೋಟಿ ಅನುದಾನ ನೀಡಿ ಉನ್ನತೀಕರಿಸಿದ್ದಾರೆ. ಸಮುದಾಯ ಭವನಗಳು, ರಸ್ತೆಗಳು, ವಾಣಿಜ್ಯ ಸಂಕೀರ್ಣ, ಶಾಲೆ–ಕಾಲೇಜು, ಬೀದಿ ವ್ಯಾಪಾರಿಗಳಿಗೆ ಹೀಗೆ ಹಲವು ಜನರಿಗೆ ಉಪಕಾರ ಮಾಡಿದ್ದಾರೆ’ ಎಂದು ಸ್ಮರಿಸಿದರು.

ಪುರಸಭೆಯಿಂದ ಸಂಸದರಿಗೆ ಪೌರಸನ್ಮಾನ ಮಾಡಲಾಯಿತು. ಪಟ್ಟಣದ ಅಂಜುಮನ್ ಕಮಿಟಿ, ಪುರಸಭೆಯ ವಾಣಿಜ್ಯ ಸಂಕೀರ್ಣದ 84 ಬಾಡಿಗೆದಾರರು, 50ಕ್ಕೂ ಹೆಚ್ಚು ಹೂವು–ಹಣ್ಣು ವ್ಯಾಪಾರಿಗಳು, 100ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳ ಕುಟುಂಬಸ್ಥರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ ಬಳಿಗಾರ್, ಪುರಸಭೆ ಅಧ್ಯಕ್ಷೆ ಮಂಜುಳಾ ಟಿ.ರಾಜು, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಸುರಹೊನ್ನೆ, ಕೆ.ಎಸ್.ಡಿ.ಎಲ್ ನಿರ್ದೇಶಕಿ ನಿವೇದಿತಾರಾಜು, ಪುರಸಭೆ ಸದಸ್ಯರಾದ ಲಲಿತಮ್ಮ, ಮಹಾಬಲೇಶ್, ಮಕ್ಬುಲ್ ಸಾಬ್, ರಾಜೇಶ್ವರಿ ವಸಂತಕುಮಾರ್, ರವಿ ಶಾನುಬೋಗ್, ಕೆ.ಮಂಜುನಾಥ್ , ಮಂಚಿ ಶಿವಾನಂದ್, ಟಿ.ಇಂದುಧರ, ಪವನ್ ಕಲಾಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT