ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗದ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣ: ಸಚಿವ ಕೆ.ಜೆ.ಜಾರ್ಜ್

Published 4 ಫೆಬ್ರುವರಿ 2024, 15:18 IST
Last Updated 4 ಫೆಬ್ರುವರಿ 2024, 15:18 IST
ಅಕ್ಷರ ಗಾತ್ರ

ಕಾರ್ಗಲ್‌: ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದಲ್ಲಿ ₹ 185 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ನವೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರೈಸಲು ಚಿಂತನೆ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಜೋಗ ಜಲಪಾತಕ್ಕೆ ಭಾನುವಾರ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮತ್ತು ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಉದ್ದೇಶಿತ ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆ ₹8,500 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ. ಸ್ಥಳದ ವೀಕ್ಷಣೆ ಮಾಡಲಾಗಿದ್ದು, ಶರಾವತಿ ಜಲವಿದ್ಯುದಾಗರದಲ್ಲಿ ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿರುವ ಈ ಯೋಜನೆಯಿಂದ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಅತ್ಯುತ್ತಮವಾದ ಕೊಡುಗೆಯನ್ನು ನೀಡಲು ಸಾಧ್ಯವಿದೆ. ಪರಿಸರ ನಾಶವಿಲ್ಲದೇ ಪ್ರಕೃತಿದತ್ತವಾದ ಸಂಪತ್ತನ್ನು ಬಳಸಿಕೊಳ್ಳುವ ಅತ್ಯುತ್ತಮ ಯೋಜನೆ ಇದು ಎಂದು ಅವರು ಮಾಹಿತಿ ನೀಡಿದರು.

ಅರಣ್ಯ ಅಭಿವೃದ್ಧಿ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರ ಕೋರಿಕೆಯಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ಸೇರಿದ 100 ಮನೆಗಳನ್ನು ದುರಸ್ತಿಗೊಳಿಸಿ ಶಿಕ್ಷಕರು, ಪೋಲೀಸರು ಮತ್ತು ಪೌರಕಾರ್ಮಿಕರಿಗೆ ಬಾಡಿಗೆ ಆಧಾರದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಲಪಾತದ ಮುಂಭಾಗದಲ್ಲಿರುವ ಕೆಪಿಸಿ ಒಡೆತನದ ಮೈಸೂರು ಬಂಗಲೆ 1886ರಲ್ಲಿ ನಿರ್ಮಾಣಗೊಂಡಿದ್ದು, ಪುರಾತತ್ವ ಇಲಾಖೆಗೆ ಸೇರಿರುವ ಈ ಕಟ್ಟಡವನ್ನು ವಸ್ತುಸಂಗ್ರಹಾಲಯವಾಗಿ ನವೀಕರಿಸಿ, ಉದ್ದೇಶಿತ ಯೋಜನೆಗಳಿಗೆ ಪೂರಕವಾಗಿ ಮಾರ್ಪಾಟು ಮಾಡಲಾಗುವುದು ಎಂದರು.

‘ಕಾರ್ಗಲ್‍ನ ಪ್ಯಾಡಿಪೀಲ್ಡ್ ನಲ್ಲಿರುವ ನಿರುಪಯುಕ್ತವಾದ ಸುಮಾರು ಐದು ಎಕರೆ ಪ್ರದೇಶವನ್ನು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸುವಂತೆ ಇಂಧನ ಸಚಿವರನ್ನು ಕೇಳಿಕೊಳ್ಳಲಾಗಿದೆ. ಸದರಿ ಪ್ರದೇಶದಲ್ಲಿ ಒಂದೇ ಸೂರಿನಡಿಯಲ್ಲಿ ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ ಸ್ವಂತ ಕಟ್ಟಡ, ವಾಣಿಜ್ಯ ಸಂಕೀರ್ಣ, ಪಟ್ಟಣ ಪಂಚಾಯಿತಿ ನೌಕರರಿಗೆ ಮತ್ತು ಪೌರಕಾರ್ಮಿಕರಿಗೆ ವಸತಿ ಗೃಹ, ಟ್ಯಾಕ್ಸಿ ಮತ್ತು ಆಟೊ ನಿಲ್ದಾಣ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಕಚೇರಿ ನಿರ್ಮಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಈ ಪ್ರಕ್ರಿಯೆಯಿಂದ ಪಟ್ಟಣ ಪಂಚಾಯಿತಿ ಪ್ರದೇಶದ ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‍ಕುಮಾರ್ ಪಾಂಡೆ, ಕೆಪಿಸಿ ತಾಂತ್ರಿಕ ನಿರ್ಧೇಶಕ ಸಿ.ಎಂ. ದಿವಾಕರ್, ಅಧೀಕ್ಷಕ ಎಂಜಿನಿಯರ್ ಅಬ್ದುಲ್ ಮಜೀದ್, ಕಾರ್ಯನಿರ್ವಾಹಕ ಎಂಜಿನಿಯರ್ ಉಮಾಪತಿ, ಮೆಸ್ಕಾಂ ಮುಖ್ಯ ಎಂಜಿನಿಯರ್ ಬಸಪ್ಪ, ಅಧೀಕ್ಷಕ ಎಂಜಿನಿಯರ್ ಜಿ. ಶಶಿಧರ, ಎಸ್‍ಎನ್‍ಸಿ ಮ್ಯಾನೇಜರ್ ಸಂದೀಪ್, ಜೆಎಂಎ ವ್ಯವಸ್ಥಾಪಕ ಶ್ರೀನಿವಾಸ್, ಪ್ರಮುಖರಾದ ಬಿ. ಉಮೇಶ್, ಎಸ್.ಎಲ್‍. ರಾಜ್‍ಕುಮಾರ್, ಎಚ್.ಎಸ್.ಸಾದಿಕ್, ಸೋಮಶೇಖರ್ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ತಾರಾಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT