ಶನಿವಾರ, ಮೇ 15, 2021
24 °C
ಶಿರಾಳಕೊಪ್ಪ ಸುತ್ತಮುತ್ತ 100ಕ್ಕೂ ಹೆಚ್ಚು ಜನರ ತಂಡ l ಕೊರೊನಾ ಭೀತಿಯಲ್ಲಿ ನಲುಗಿದ ಬದುಕು

ವೃತ್ತಿ ರಂಗಭೂಮಿ: ಮತ್ತೆ ಕಾರ್ಮೋಡ

ಎಂ.ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ವರ್ಷದ ಹಿಂದೆ ಕಾಣಿಸಿಕೊಂಡ ಕೊರೊನಾ ಸಂಕಷ್ಟಕ್ಕೆ ನಲುಗಿದ್ದ ವೃತ್ತಿ ರಂಗಭೂಮಿ ಕಲಾವಿದರ ಬದುಕಿನ ಮೇಲೆ ಈಗ ಎರಡನೇ ಅಲೆಯ ಕಾರ್ಮೋಡ ಕವಿದಿದೆ. 

ಸರ್ಕಾರದ ನಿಯಮಗಳಿಂದ ನಾಟಕ ಪ್ರದರ್ಶನಗಳು ವರ್ಷಪೂರ್ತಿ ಸ್ಥಗಿತವಾಗಿದ್ದವು. ಒಂದು ತಿಂಗಳಿನಿಂದ ನಿಧಾನವಾಗಿ ನಾಟಕಗಳ ಪ್ರದರ್ಶನ ಆರಂಭಿಸಲಾಗಿತ್ತು. ಚೇತರಿಸಿಕೊಳ್ಳುವ ಮುನ್ನವೇ ಕೊರೊನಾ ಎರಡನೇ ಅಲೆ ಮತ್ತೆ ಆವರಿಸುತ್ತಿದೆ. ಕಲಾವಿದರ ಬದುಕನ್ನು ಆತಂಕಕ್ಕೆ ದೂಡಿದೆ.
ಕಲೆಯೇ ಜೀವನ ಎಂಬ ಧ್ಯೇಯವಾಕ್ಯದೊಂದಿಗೆ ರಂಗಭೂಮಿ ಯನ್ನು ಉಳಿಸುವ, ಬೆಳೆಸುವ ಕಾಯಕ ನಂಬಿ ಜನರಿಗೆ ಮನೋರಂಜನೆ, ಸಮಾಜಿಕ ಅರಿವು ಮೂಡಿಸುತ್ತಿದ್ದ ಕಲಾವಿದರ ಬದುಕು ಕತ್ತಲೆ ಕೂಪದತ್ತ ಸಾಗಿದೆ.

ಪಟ್ಟಣದಲ್ಲಿ ಚಿತ್ತರಗಿಯರ ಕುಮಾರ ವಿಜಯ ನಾಟಕ ಸಂಘ ಹಲವಾರು ನಾಟಕ ಪ್ರದರ್ಶನ ನೀಡುತ್ತಿದ್ದರೆ, ಸಮೀಪದ ತೊಗರ್ಸಿಯಲ್ಲಿ ಎರಡು ನಾಟಕ ಕಂಪನಿಗಳು ಬೀಡುಬಿಟ್ಟು ನಾಟಕ ಪ್ರದರ್ಶನ ಮಾಡುತ್ತಿವೆ. ಹಿಂದಿನ ವರ್ಷ ಕೊರೊನಾ ಸಮಯದಲ್ಲಿ ಬೀಡುಬಿಟ್ಟಿದ್ದ ಕಲಾವಿದರಿಗೆ ಸ್ಥಳೀಯ ಸಂಘ, ಸಂಸ್ಥೆಗಳು ಆಹಾರ ಸಾಮಗ್ರಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದವು. ಈಗ 100ಕ್ಕೂ ಹೆಚ್ಚು ಕಲಾವಿದರ ತಂಡ ಈ ಭಾಗದ ವಿವಿಧ ನಾಟಕ ಕಂಪನಿಗಳಲ್ಲಿ ಕಲಾಸೇವೆ ಮಾಡುತ್ತಿದೆ.

ಕೋವಿಡ್ ನಿಯಮದಂತೆ ಪ್ರೇಕ್ಷಕರು ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಬಳಸಲು ನಾಟಕ ಕಂಪನಿಗಳು ಮನವಿ ಮಾಡುತ್ತಿವೆ. ಪಟ್ಟಣದಲ್ಲಿ ಕಲಾವಿದರಿಗೆ ಕೊರೊನಾ ಪರೀಕ್ಷೆಯನ್ನು ಸಹ ನಡೆಸಲಾಗಿದೆ. ಸ್ವತಃ ಕಲಾವಿದರು ಸೋಂಕು ಹರಡದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ.

‘ಟಿವಿ, ಧಾರಾವಾಹಿಗಳ ಪ್ರಭಾವದಿಂದ ನೈಜ ಕಲೆಯಾದ ನಾಟಕ ಪ್ರದರ್ಶನಕ್ಕೆ ಆದ್ಯತೆ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಕೊರೊನಾ ಭಯ ಕೂಡ ನಾಟಕ ಕಂಪನಿಗಳನ್ನು ಪಾತಾಳಕ್ಕೆ ತಳ್ಳುತ್ತಿದೆ. ಹಾಗಾಗಿ, ಕಲಾಭಿಮಾನಿಗಳು ನಾಟಕಗಳನ್ನು ನೋಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸ ಬೇಕು’ ಎನ್ನುತ್ತಾರೆ ಈ ಕಲಾಪ್ರೇಮಿ ಮಂಜು ಜಿಲೇಬಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.