ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೇಂದ್ರದ ಒಪ್ಪಿಗೆ ನಂತರ ಪುನರ್ವಸತಿಗೆ ಚಾಲನೆ

ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಬದ್ಧ: ಸಮೀಕ್ಷೆ ಪೂರ್ಣ– ಮುಖ್ಯಮಂತ್ರಿ
Last Updated 9 ಫೆಬ್ರುವರಿ 2023, 6:09 IST
ಅಕ್ಷರ ಗಾತ್ರ

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ. ಕೇಂದ್ರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಎನ್‍ಇಎಸ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಅನುಮತಿ ದೊರೆತ ಬಳಿಕ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ಶಿವಮೊಗ್ಗ– ರಾಣೆಬೆನ್ನೂರು ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ₹500 ಕೋಟಿ ಮಂಜೂರು ಮಾಡಿದೆ. ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಡಿ.ಎಚ್‌.ಶಂಕರಮೂರ್ತಿ ಅವರ ಪ್ರಯತ್ನದ ಫಲ, ಅಭಿವೃದ್ಧಿಯ ಓಘದಿಂದ ರಾಜ್ಯದಲ್ಲಿ ಅತಿ ವೇಗವಾಗಿ ಶಿವಮೊಗ್ಗ ನಗರ ಬೆಳೆಯುತ್ತಿದೆ. ಇದಕ್ಕೆ ಉತ್ತಮ ಭವಿಷ್ಯ ಇದೆ. 2006ರ ಹಿಂದಿನ ಶಿವಮೊಗ್ಗ ಹಾಗೂ ಇಂದಿನ ಶಿವಮೊಗ್ಗಕ್ಕೆ ಅಜಗಜಾಂತರವಿದೆ. ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ನಾವು ಕಾಣುತ್ತಿದ್ದೇವೆ’ ಎಂದರು.

‘ಶಿವಮೊಗ್ಗದಲ್ಲಿ ಇಂದು ₹1000 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ ಮಾಡಲಾಗುತ್ತಿದೆ. ವಸತಿ ಯೋಜನೆಗಳಡಿ ಮನೆಗಳನ್ನು ನೀಡುವುದು, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ, ಶಿಕ್ಷಣ, ರಸ್ತೆ, ನೀರು, ನಗರಾಭಿವೃದ್ದಿ, ತಂತ್ರಜ್ಞಾನ ಹೀಗೆ ಹತ್ತು ಹಲವು ಜನೋಪಯೋಗಿ ಕೆಲಸಗಳು ಸಾಧ್ಯವಾಗಿದೆ. ಕೇವಲ 18 ತಿಂಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿಮಾನ ನಿಲ್ದಾಣದಿಂದಾಗಿ ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ವಲಯದಲ್ಲಿ ಜಿಲ್ಲೆಯು ಅಭಿವೃದ್ಧಿ ಹೊಂದಲಿದೆ’ ಎಂದು ಭವಿಷ್ಯ ನುಡಿದರು.

ಫೆ. 27ಕ್ಕೆ ಲೋಕಾರ್ಪಣೆ: ‘ಪ್ರಧಾನಿ ನರೇಂದ್ರ ಮೋದಿ ಫೆ. 27ರಂದು ಶಿವಮೊಗ್ಗಕ್ಕೆ ಬಂದು ಇಲ್ಲಿನ ಸೋಗಾನೆಯಲ್ಲಿರುವ ನೂತನ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದ ಬಿಜೆಪಿ ಸಂಸದೀಯ ಮಂಡಳಿ
ಸದಸ್ಯ ಬಿ.ಎಸ್‌.ಯಡಿಯೂರಪ್ಪ, ‘2ಲಕ್ಷದಿಂದ 3 ಲಕ್ಷ ಜನರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಶಿವಮೊಗ್ಗ–ರಾಣೆಬೆನ್ನೂರು ರೈಲು ಮಾರ್ಗದ ನಿರ್ಮಾಣ
ಕಾಮಗಾರಿ ಯ ಶಂಕುಸ್ಥಾಪನೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.

‘ಸಾವಿರಾರು ಕೋಟಿ ಹಣ ಕೊಟ್ಟು ಶಿವಮೊಗ್ಗದ ಅಭಿವೃದ್ಧಿಗೆ ನೆರವಾಗಿರುವ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ನಗರದ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ, ಎಂದರು.

ಪ್ರವಾಸೋದ್ಯಮ ಇಲಾಖೆ ಮೂಲಕ ರಾಗಿಗುಡ್ಡದ ಅಭಿವೃದ್ಧಿಗೆ 110 ಅಡಿ ಎತ್ತರದ ಈಶ್ವರ ಲಿಂಗಕ್ಕೆ ₹14 ಕೋಟಿ ಕೊಟ್ಟಿದ್ದಾರೆ. ಬಡವರಿಗೆ 288 ಮನೆಗಳನ್ನು ಕೊಟ್ಟು 600ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಮೂರು ತಿಂಗಳಿಗೊಮ್ಮೆ ಪೂರ್ಣಗೊಂಡ ಮನೆಗಳನ್ನು ಹಂಚಲಾಗುವುದು ಎಂದರು.

ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ನಿಕಟಪೂರ್ವ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಕೆ.ಬಿ.ಅಶೋಕ ನಾಯ್ಕ್, ಆಯನೂರು ಮಂಜುನಾಥ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಮೇಯರ್‌ ಶಿವಕುಮಾರ್, ಜಿಲ್ಲಾಧಿಕಾರಿ ಎಸ್.ಸೆಲ್ವಮಣಿ, ಎಸ್‌ಪಿ ಮಿಥುನ್ ಕುಮಾರ್ ಉಪಸ್ಥಿತರಿದ್ದರು.

***

ಕೇಂದ್ರಕ್ಕೆ ಪ್ರಸ್ತಾವ, ಮುಂದಿವ ವಾರ ಸಭೆ: ಸಿ.ಎಂ

‘ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಕೇಂದ್ರದ ಬಂಡವಾಳ ಹಿಂತೆಗೆತ ಪ್ರಕ್ರಿಯೆಯಿಂದ ಮೊದಲು ಹೊರತಂದು, ಮುಚ್ಚದಂತೆ ತಡೆಯಲಾಗುವುದು. ನಂತರ ಕಾರ್ಖಾನೆಯ ಪುನಶ್ಚೇತನಕ್ಕೆ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಶಿವಮೊಗ್ಗದಲ್ಲಿ ಬುಧವಾರ ವಿಐಎಸ್‌ಎಲ್ ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಿದ ಅವರು, ಮುಂದಿನ ವಾರ ಬೆಂಗಳೂರಿನಲ್ಲಿ ಕಾರ್ಮಿಕ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ವಿಐಎಸ್‌ಎಲ್‌ ಕಾರ್ಖಾನೆಯನ್ನು ಮುಂದುವರೆಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು
ಎಂದರು.

ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಐಎಸ್ ಎಲ್ ಕಾರ್ಮಿಕರ ಸಂಘದ ಮುಖಂಡರು, ಕುದುರೆ ಮುಖ ಕಬ್ಬಿಣ ಅದಿರಿನ ಕಾರ್ಖಾನೆ ಆಡಳಿತ (ಕೆಐಒಸಿಎಲ್) ವಿಐಎಸ್ ಎಲ್ ಬಗ್ಗೆ ಆಸಕ್ತಿ ತೋರಿದೆ. ಮಂಗಳೂರಿನಲ್ಲಿರುವ ಅವರ ಜಾಗ ಚಿಕ್ಕದಾಗಿದೆ. ಅವರಿಗೆ ಜಾಗ ಬೇಕು ಹಾಗೂ ಪ್ಲಾಂಟ್ ಬೇಕು. ಹೀಗಾಗಿ ವಿಐಎಸ್ ಎಲ್ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಅವರಿಗೆ ವಹಿಸಿಯಾದರೂ ಕಾರ್ಖಾನೆ ಉಳಿಸಿಕೊಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಾಂತ, ಜಿಂದಾಲ್ ಕಂಪೆನಿಗಳೊಂದಿಗೂ ಮಾತಾಡುವೆ. ಕೆಐಒಸಿಎಲ್ ಜೊತೆಯೂ ಚರ್ಚಿಸಿವೆ. ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಸಭೆ ಆಯೋಜಿಸುವುದಾಗಿ ಹೇಳಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ, ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸಭೆಯಲ್ಲಿ ಹಾಜರಿದ್ದರು.

***

ಈಡಿಗರ ಹಾಸ್ಟೆಲ್‌ಗೆ ಅನುದಾನ: ಮನವಿ

ಜಿಲ್ಲಾ ಆರ್ಯಈಡಿಗ ಸಂಘದಿಂದ ವಿದ್ಯಾರ್ಥಿ/ವಿದ್ಯಾರ್ಥಿನಿ ನಿಲಯ ಸ್ಥಾಪನೆಗೆ ₹5 ಕೋಟಿ ಅನುದಾನ ನೀಡುವಂತೆ ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ವಾರ್ಡ್ ನಂ.10 ರಲ್ಲಿನ ಟ್ಯಾಂಕ್ ಮೊಹಲ್ಲಾದಲ್ಲಿ ವಿಸ್ತಾರವಾದ ಸ್ವಂತ ನಿವೇಶನವನ್ನು ಸಂಘ ಹೊಂದಿದೆ. ಜಿಲ್ಲೆಯ ಬಹುಸಂಖ್ಯಾತ ಸಮುದಾಯವಾದ ಈಡಿಗರು, ಮಲೆನಾಡಿನ ಕುಗ್ರಾಮಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅಲ್ಲಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸಂಘದ ವತಿಯಿಂದ ಹಾಸ್ಟೆಲ್ ನಡೆಸಲಾಗುವುದು. ಹಿಂದುಳಿವ ವರ್ಗಗಳ ಕಲ್ಯಾಣ ಇಲಾಖೆಯಿಂದ ಮುಖ್ಯಮಂತ್ರಿಗಳ ನಿಧಿ ಆಗಿ ₹5 ಕೋಟಿ ಅನುದಾನ ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ. ಮನವಿ ಪಡೆದ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕಾರ್ಯದರ್ಶಿ ಎಸ್.ಸಿ ರಾಮಚಂದ್ರ, ಉದ್ಯಮಿ ಸುರೇಶ್ ಕೆ. ಬಾಳೇಗುಂಡಿ, ಹೆಚ್.ಎನ್.ಮಹೇಂದ್ರ, ತೇಕಲೆ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT