ಬುಧವಾರ, ಡಿಸೆಂಬರ್ 2, 2020
16 °C
ಸಿಗಂದೂರು ದೇವಾಲಯಕ್ಕೆ ರಚಿಸಿರುವ ಮೇಲುಸ್ತುವಾರಿ ಸಮಿತಿ ರದ್ದುಪಡಿಸಲು ಹೋರಾಟ

ಜಿಲ್ಲಾಧಿಕಾರಿ ಶಿವಕುಮಾರ್, ಶಾಸಕ ಹಾಲಪ್ಪ ಕ್ಷಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದಲ್ಲಿ 55 ಲಕ್ಷ ಜನ ಸಂಖ್ಯೆ ಇರುವ ಈಡಿಗ ಸಮುದಾಯದ ಸಂಘಟನೆಯನ್ನು ಅಘೋಷಿತ ಎಂದು ಉಲ್ಲೇಖಿಸಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಶಾಸಕ ಎಚ್‌.ಹಾಲಪ್ಪ ಹರತಾಳು ಅವರು ಕ್ಷಮೆಯಾಚಿಸಬೇಕು. ಸಿಗಂದೂರು ದೇವಾಲಯಕ್ಕೆ ರಚಿಸಿರುವ ಮೇಲುಸ್ತುವಾರಿ ಸಮಿತಿ ತಕ್ಷಣ ರದ್ದುಪಡಿಸಬೇಕು ಎಂದು ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಒತ್ತಾಯಿಸಿದರು.

ನಗರದ ಆರ್ಯ ಈಡಿಗ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಸಮುದಾಯ ಸಂಘಟನೆಯನ್ನ ಅಘೋಷಿತ ಸಂಘಟನೆ ಎಂದು ಜಿಲ್ಲಾಧಿಕಾರಿಗಳು, ಸುಡಗಾಡು ಸಂಘವೆಂದು ಶಾಸಕ ಹಾಲಪ್ಪ ಹರತಾಳು ಹೇಳಿಕೆ ಅಕ್ಷಮ್ಯ. ಕೂಡಲೇ ಇಬ್ಬರೂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬ್ರಾಹ್ಮಣ, ಈಡಿಗ ಸಮುದಾಯ ಒಂದಾಗಿ ಸಾಗುತ್ತಿವೆ, ಮುಖ್ಯಮಂತ್ರಿ, ಸಂಸದ, ಎಂಎಡಿಬಿ ಅಧ್ಯಕ್ಷ, ಮತ್ತು ಸಾಗರ ಶಾಸಕರ ಕುತಂತ್ರದಿಂದ ಸಮುದಾಯದಲ್ಲಿ ಒಡಕು ಮೂಡಿದೆ. ಹಿಂದುತ್ವ ಜಪಿಸುವ  ಬಿಜೆಪಿ ಹಿಂದುಳಿದ ಸಮಾಜದ ದೇವಾಲಯದ ವಿಷಯದಲ್ಲಿ ಮೂಗು ತೂರಿಸುತ್ತಿದೆ. ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಉಡುಪಿ ಕೃಷ್ಣ ಮಂದಿರದಲ್ಲಿ ಕನಕನ ಕಿಂಡಿಯ ವಿಚಾರದಲ್ಲಿ ಹೋರಾಟ ನಡೆದಿದೆ. ಧರ್ಮಸ್ಥಳದಲ್ಲಿ ಗಲಾಟೆ ನಡೆದಾಗ ಮುಜರಾಯಿ ಇಲಾಖೆಗೆ ಸೇರಿಸಲಿಲ್ಲ. ಈಗ ಏಕೆ ಇಂತಹ ನಡೆ ಎಂದು ಪ್ರಶ್ನಿಸಿದರು.

ಸಿಗಂದೂರು ಚೌಡೇಶ್ವರಿ ದೇವಾಲಯದ ಸಮಿತಿ ರಚನೆಯ ವಿರುದ್ಧ ಹೋರಾಟ ತೀವ್ರಗೊಳಿಸಬೇಕು. ಶೀಘ್ರ 25 ಸಾವಿರ ಜನರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಮನವಿ ಸಲ್ಲಿಕೆ: ಸಭೆಯ ನಂತರ ಜಿಲ್ಲಾ ಆರ್ಯ ಈಡಿಗ ಸಮಾಜದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿನ ಉಸ್ತುವಾರಿ ಸಮಿತಿ ರದ್ದುಪಡಿಸುವಂತೆ ಒತ್ತಾಯಿಸಿದರು.

ಸಮಾಜದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಎಸ್.ಸಿ.ರಾಮಚಂದ್ರ, ಖಾಜಾಂಚಿ ಡಿ.ದೇವಪ್ಪ, ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.