ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷ ಹುದ್ದೆ ಖಾಲಿ ಇದ್ದರೂ ಕಡಿಮೆಯಾಗದ ದಕ್ಷತೆ: ಬಸವರಾಜ ಬೊಮ್ಮಾಯಿ

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘನೆ
Last Updated 22 ಏಪ್ರಿಲ್ 2022, 4:37 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸ್ತುತ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡು ಅಧಿಕಾರಿಗಳು, ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನೌಕರರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಸರ್ಕಾರಿ ನೌಕರರ ಸಂಘ ಶಿವಮೊಗ್ಗದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ದೇಶದಲ್ಲೇ ರಾಜ್ಯ ಸರ್ಕಾರಿ ನೌಕರರು ದಕ್ಷ ಅಧಿಕಾರಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಹಲವಾರು ದಶಕಗಳಿಂದ ಸೇವೆ ಸಲ್ಲಿಸಿದ ಹಿರಿಯ ಸರ್ಕಾರಿ ಅಧಿಕಾರಿ, ನೌಕರರ ಶ್ರಮವೂ ಕಾರಣ. ಈ ಪರಂಪರೆ ಮುಂದುವರಿಸುವ ಕರ್ತವ್ಯ, ನೈತಿಕ ಜವಾಬ್ದಾರಿ ನೌಕರರ ಮೇಲಿದೆ. ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿದುಕೊಂಡರೆ ಕರ್ತವ್ಯಕ್ಕೆ ನ್ಯಾಯ ಒದಗಿಸಬಹುದು. ಕಾನೂನಿಗೆ ಅನುಗುಣವಾಗಿಯೇ ನಡೆದರೂ, ಕೆಲವೊಮ್ಮೆ ವಿವೇಚನಾಧಿಕಾರ ಬಳಿಸಿ, ಬಡವರ ಶ್ರೇಯಕ್ಕೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

‘ಆಳುವುದೇ ಬೇರೆ ಮತ್ತು ಆಡಳಿತ ಮಾಡುವುದೇ ಬೇರೆ. ಈ ಎರಡರ ನಡುವಿನ ವ್ಯತ್ಯಾಸ ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸಿದಲ್ಲಿ ನಾವು ಇಡೀ ರಾಜ್ಯದ ಜನರಿಗೆ ಅಭಿವೃದ್ಧಿಯ ಫಲ ನೀಡಲು ಸಾಧ್ಯ. ಆಡಳಿತ ಯಂತ್ರದಲ್ಲಿ ಬದಲಾವಣೆಯ ಅಗತ್ಯವಿದೆ. ಆಳುವ ರೀತಿಯನ್ನೂ ಬದಲಾಯಿಸಬೇಕಿದೆ. ಜನಸಾಮಾನ್ಯರ ಬಳಿಗೆ ವ್ಯವಸ್ಥೆ ತೆಗೆದುಕೊಂಡು ಹೋಗಬೇಕಿದೆ. ಬಡವರು, ರೈತರು, ದೀನ ದಲಿತರು ಸೇರಿ ಎಲ್ಲರ ಅಭಿವೃದ್ಧಿಗಾಗಿ ಸ್ಥಿತ, ಸಮಯ ಪ್ರಜ್ಞೆಯಿಂದ ಕೆಲಸ ಮಾಡಬೇಕಿದೆ’ ಎಂದರು.

‘ಬದಲಾದ ಕಾಲಘಟ್ಟಕ್ಕೆ ಎಲ್ಲರೂ ಹೊಂದಿಕೊಂಡು ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೂ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು. ನಿಗದಿತ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳವ ಮೂಲಕ ಜನರಿಗೆ ಒಳಿತು ಮಾಡಬಹುದು. ಜತೆಗೆ, ಹಿರಿಯ, ಕಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಬಹುದು’ ಎಂದು ಸಲಹೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಸರ್ಕಾರಿ ನೌಕರರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ವೇತನ ಮತ್ತು ಸೌಲಭ್ಯಗಳನ್ನು ಸರ್ಕಾರ ಕಾಲಕಾಲಕ್ಕೆ ನೀಡಿದೆ. ಸರ್ಕಾರ ಕಾನೂನು ರೂಪಿಸಿದರೂ, ಜಾರಿಗೆ ತರುವ ಜವಾಬ್ದಾರಿ ನೌಕರರ ಮೇಲಿದೆ. ಅಧಿಕಾರಿಗಳು, ನೌಕರರ ಶ್ರಮದ ಫಲವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ’ ಎಂದು ಶ್ಲಾಘಿಸಿದರು.

‘ಸರ್ಕಾರದ ಕೆಲಸ ದೇವರ ಕೆಲಸ. ಎಲ್ಲರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಕೆಲವರ ನಡವಳಿಕೆ ಬೇಸರ ತರಿಸಿದೆ. ಅಧಿಕಾರಿಗಳು, ನೌಕರರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮಗೌರವಕ್ಕೆ ಯಾರೂ ಚ್ಯುತಿ ತರಬಾರದು’ ಎಂದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಅಶೋಕ್‍ ನಾಯ್ಕ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ‘ಸೂಡಾ’ ಅಧ್ಯಕ್ಷ ನಾಗರಾಜ್ ಮೇಯರ್‌ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಇದ್ದರು.

ಮೊದಲ ಸರ್ಕಾರಿ ನೌಕರರ ದಿನಾಚರಣೆ

ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದಾರೆ. ದೇಶದಲ್ಲೇ ಪ್ರಥಮವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಘೋಷಿಸಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದಕ್ಕೆ ಅನುಮೋದನೆ ನೀಡಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಸರ್ಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾಹಿತಿ ನೀಡಿದರು.

ಸರ್ಕಾರಿ ನೌಕರರು ಹಲವು ಒತ್ತಡಗಳು, ಸಮಸ್ಯೆಗಳು ಮತ್ತು ಸವಾಲುಗಳ ನಡುವೆಯೂ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ಸಮಾನ ವೇತನ ನೀಡಲು ವೇತನ ಆಯೋಗ ರಚನೆ ಮಾಡವುದಾಗಿ ಘೋಷಿಸಿದ್ದಾರೆ. ಕಾಲಕಾಲಕ್ಕೆ ಸರಿಯಾಗಿ ಸೌಲಭ್ಯ ನೀಡುತ್ತಿದ್ದಾರೆ. ನೌಕರರ ಹಿತರಕ್ಷಕರಾಗಿದ್ದಾರೆ ಎಂದು ಶ್ಲಾಘಿಸಿದರು.

ಉಡದಂತೆ ಕೆಲಸ ಮಾಡಿಸುವ ಷಡಾಕ್ಷರಿ: ಸಿಎಂ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಡವಿದ್ದಂತೆ. ಕೋಟೆ ಹತ್ತಲು ಹಿಂದೆ ಉಡ ಬಳಸುತ್ತಿದ್ದರು. ಹಾಗೆ ಷಡಾಕ್ಷರಿ ಪಟ್ಟು ಹಿಡಿದು ನೌಕರರ ಕೆಲಸ ಮಾಡಿಸುತ್ತಾರೆ. ಅವರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಛಾಯೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದರು.

ಸರ್ಕಾರ ತೋರಿಸಿ ನೌಕರರ ಕೆಲಸ ಮಾಡಿಸುತ್ತಾರೆ. ನೌಕರರನ್ನು ತೋರಿಸಿ ಸರ್ಕಾರದ ಕೆಲಸ ಮಾಡಿಸುವ ಜಾಣ್ಮೆ ಅವರಿಗಿದೆ. ನೌಕರರು ಉತ್ತಮವಾಗಿ ಕೆಲಸ ಮಾಡಲು, ಸರ್ಕಾರ ಅವರಿಗೆ ಸೌಲಭ್ಯ ಕಲ್ಪಿಸಲು ರಾಜ್ಯಾಧ್ಯಕ್ಷರ ಪರಿಶ್ರಮವೂ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT