ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಮ್ಮೇಹಟ್ಟಿ | ಅಪಘಾತ: ₹13 ಲಕ್ಷ ಪರಿಹಾರ ನೀಡಿದ ಗೀತಾ-ಶಿವರಾಜಕುಮಾರ್ ದಂಪತಿ

Published 8 ಜುಲೈ 2024, 10:03 IST
Last Updated 8 ಜುಲೈ 2024, 10:03 IST
ಅಕ್ಷರ ಗಾತ್ರ

ಶಿವಮೊಗ್ಗ: ಹಾವೇರಿ ಬಳಿ ಈಚೆಗೆ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದ ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಯ 13 ಮಂದಿ ಹಾಗೂ ಇಬ್ಬರು ಗಾಯಾಳುಗಳಿಗೆ ನಟ ಶಿವರಾಜಕುಮಾರ್ ಹಾಗೂ ಗೀತಾ ದಂಪತಿ ಸೋಮವಾರ ವೈಯಕ್ತಿಕವಾಗಿ ₹13 ಲಕ್ಷ ಪರಿಹಾರ ವಿತರಣೆ ಮಾಡಿದರು.

ಎಮ್ಮೇಹಟ್ಟಿಯ ಮೃತರ ಮನೆಗಳಿಗೆ ಮಳೆಯ ನಡುವೆ ಭೇಟಿ ನೀಡಿದ ಶಿವರಾಜಕುಮಾರ್-ಗೀತಾ ದಂಪತಿ ಕುಟುಂಬಸ್ಥರ ಅಳಲು ಆಲಿಸಿದರು. ಸಾಂತ್ವನ ಹೇಳಿದರು.

ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬಗಳ ಸದ್ಯದ ಸ್ಥಿತಿಗತಿ, ಬದುಕಿ ಉಳಿದವರ ಪರಿಸ್ಥಿತಿಯ ಬಗ್ಗೆಯೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಅಪಘಾತದಲ್ಲಿ ಸಾವಿಗೀಡಾದ 13 ಮಂದಿಗೆ ₹10 ಲಕ್ಷ ಹಾಗೂ ಬದುಕುಳಿದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಚಿಕಿತ್ಸಾ ವೆಚ್ಚವಾಗಿ ತಲಾ ₹1.5 ಲಕ್ಷ ನಗದು ಹಣ ನೀಡಿದರು.

ಈ ವೇಳೆ ಮಾತನಾಡಿದ ಶಿವರಾಜಕುಮಾರ್, ಹಣ ಕೊಟ್ಟ ತಕ್ಷಣ ಅವರ ಬದುಕಿಗೆ ಆಸರೆ ಆಗುವುದಿಲ್ಲ. ಕುಟುಂಬಸ್ಥರಿಗೆ ಶಾಶ್ವತ ನೆರವು ಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಾವಿಗೀಡಾದವರ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಹೇಳಿದರು.

ಅಪಘಾತದ ನಂತರ ಸಾವಿಗೀಡಾದವರ ಕುಟುಂಬಗಳಿಗೆ ನೆರವು ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಗ್ರಾಮಸ್ಥರು ತೋರಿದ ಕಾಳಜಿಯನ್ನು ಗೀತಾ ಶಿವರಾಜಕುಮಾರ್ ಶ್ಲಾಘಿಸಿದರು.

ಕುಟುಂಬದ ಎಲ್ಲ ಸದಸ್ಯರನ್ನು ಕಳೆದುಕೊಂಡಿರುವ ಅಂಗವಿಕಲೆ ಅರ್ಪಿತಾ ಭವಿಷ್ಯಕ್ಕೆ ನೆರವಾಗುವ ಭರವಸೆ ನೀಡಿದರು.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಈ ವೇಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT