ಶನಿವಾರ, ಡಿಸೆಂಬರ್ 3, 2022
21 °C
ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್

‘ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ವಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಅಡಿಕೆ ಸೇವನೆ ಆರೋಗ್ಯ ಹಾನಿಕಾರಕ ಎಂಬ ವಿಷಯ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಮೂಲಕ ಅಡಿಕೆಯ ‘ಮಾನ’ ಕಾಪಾಡುವಲ್ಲಿ ಅದು ಸೋತಿದೆ ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ಆರೋಪಿಸಿದರು.

ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ಎಂಟು ವರ್ಷಗಳಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. 2017ರಲ್ಲಿ ಕೇಂದ್ರದ ಆರೋಗ್ಯ ಸಚಿವರೇ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿಕೆ ನೀಡಿದ್ದರು. ಈವರೆಗೂ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಅಡಿಕೆ ಟಾಸ್ಕ್ ಫೋರ್ಸ್ ಸಮಿತಿ ರಚನೆಯಾಗಿ ಒಂದೂವರೆ ವರ್ಷ ಕಳೆದಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುವ ಜವಾಬ್ದಾರಿಯನ್ನು ಟಾಸ್ಕ್ ಫೋರ್ಸ್ ರಾಜ್ಯದ ಖಾಸಗಿ ಕಾಲೇಜಿಗೆ ನೀಡಿದೆ. ಆದರೆ ಈ ಕಾಲೇಜು ನೀಡುವ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪುವುದಿಲ್ಲ ಎಂಬ ಕನಿಷ್ಠ ಜ್ಞಾನ ಟಾಸ್ಕ್ ಫೋರ್ಸ್‌ಗೆ ಇಲ್ಲ ಎಂದು ಟೀಕಿಸಿದರು.

‘2019ರಲ್ಲೇ ಮಲೆನಾಡಿನ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಆದಾಗ್ಯೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಈಗ ರೋಗದ ಬಾಧೆ ತೀವ್ರವಾಗಿದ್ದು ₹ 10 ಕೋಟಿ ಔಷಧಿ ವಿತರಣೆಗೆ ಮಂಜೂರು ಮಾಡಿರುವುದಾಗಿ ಸರ್ಕಾರ ಹೇಳಿಕೆ ನೀಡಿದೆ. ಆದರೆ ಆ ಹಣ ಬಿಡುಗಡೆಯಾಗುವ ಮುನ್ನವೇ ಇಲ್ಲಿನ ಸಂಸದರು ಹಾಗೂ ಶಾಸಕರಿಗೆ ಸಹಕಾರಿ ಸಂಸ್ಥೆಗಳು ಸನ್ಮಾನ ಮಾಡಿರುವುದು ವಿಚಿತ್ರ ನಡೆ’ ಎಂದು ದೂರಿದರು.

‘ನನಗೆ ಅಡಿಕೆ ತೋಟ ಅಥವಾ ಕೃಷಿಭೂಮಿ ಇಲ್ಲ ಎಂದ ಮಾತ್ರಕ್ಕೆ ರೈತರ ಸಮಸ್ಯೆ ಕುರಿತು ಧ್ವನಿ ಎತ್ತಬಾರದು ಎಂಬ ನಿಯಮವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಮುಖರಾದ ಧರ್ಮೇಂದ್ರ ಶಿರವಾಳ, ಮುಕ್ತಿಯಾರ್, ಪ್ರೇಮ್ ಸಿಂಗ್, ಗೋಪಾಲ ಯಲಗಳಲೆ, ಶಿವರಾಮ್ ಪಡವಗೋಡು, ಚೌಡಪ್ಪ, ಸುಮಂತ್, ರಂಗನಾಥ್, ದುಶ್ಯಂತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.